ಗಾಂಧೀಜಿಯವರ ಜೀವನವೇ ಒಂದು ಸಂದೇಶವಾಗಿದೆ. ಅವರಿಗೆ ಸತ್ಯ ಹರಿಶ್ಚಂದ್ರನ ಕಥೆ ಸದಾ ಕಾಡುತ್ತಿತ್ತು. ಇಂದಿನ ಯುವ ಜನಾಂಗ ಸತ್ಯಾಸತ್ಯತೆಯನ್ನು ತಿಳಿಯುವ ಪ್ರಯತ್ನ ಮಾಡಬೇಕು ಎಂದು ದಾವಣಗೆರೆ ಜಿಲ್ಲಾಧಿಕಾರಿ ಡಾ. ವೆಂಕಟೇಶ್ ಎಂ.ವಿ ಅಭಿಪ್ರಾಯಪಟ್ಟಿದ್ದಾರೆ.
ದಾವಣಗೆರೆಯಲ್ಲಿ ಆಜಾದಿ ಕಾ ಅಮೃತ ಮಹೋತ್ಸವ ಅಂಗವಾಗಿ ಜಿಲ್ಲಾಡಳಿತ ಆಯೋಜಿಸಿದ್ದ ‘ಕ್ವಿಟ್ ಇಂಡಿಯಾ ಚಳುವಳಿ ಒಂದು ನೆನಪು’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. “ಗಾಂಧೀಜಿ ಅವರು ಸತ್ಯಹರಿಶ್ಚಂದ್ರರ ಕಥೆಯನ್ನು ಓದುತ್ತಿದ್ದರು. ಆದರೆ, ನಮ್ಮ ಯುವಜನಾಂಗ ಹೆಚ್ಚು ಸಾಮಾಜಿಕ ಜಾಲತಾಣಗಳ ಮೇಲೆ ಅವಲಂಭಿತವಾಗಿದ್ದಾರೆ. ಅವುಗಳಲ್ಲಿ ಸತ್ಯವನ್ನು ಮರೆ ಮಾಚುವ ಪ್ರಸಂಗ ಬರಬಾರದು ಮತ್ತು ಸತ್ಯತೆ ಬಗ್ಗೆ ಪರಿಶೀಲನೆಯನ್ನು ಮಾಡಬೇಕು” ಎಂದರು.
“ಸ್ವಾತಂತ್ರ್ಯ ಪೂರ್ವದಲ್ಲಿ 1942ರ ಆಗಸ್ಟ್ 8ರಂದು ಕ್ವಿಟ್ ಇಂಡಿಯಾ ಚಳುವಳಿ ಆರಂಭವಾಗಿತ್ತು. ಕ್ವಿಟ್ ಇಂಡಿಯಾ ಚಳುವಳಿ ಸ್ವಾತಂತ್ರ್ಯ ಗಳಿಸಲು ಸಾಮುದಾಯಿಕ ಚಳುವಳಿಯಾಗಿತ್ತು. ಆಗ ಎಲ್ಲರ ಉದ್ದೇಶ ಒಂದೇ ಆಗಿತ್ತು. ಅದು ಬ್ರಿಟಿಷರನ್ನು ಭಾರತದಿಂದ ತೊಲಗಿಸಿ ಸ್ವಾಂತ್ರಂತ್ರ್ಯ ಗಳಿಸುವುದಾಗಿತ್ತು” ಎಂದರು.
“ಇತಿಹಾಸ ಅಧ್ಯಯನ ಮಾಡದವರು, ಇತಿಹಾಸ ನಿರ್ಮಿಸಲು ಸಾಧ್ಯವಿಲ್ಲ. ದೇಶ ಯಾವ ರೀತಿ ಸ್ವಾತಂತ್ರ್ಯವಾಯಿತು ಮತ್ತು ನಂತರದ ಅವಧಿಯಲ್ಲಿ ಜಾರಿಗೆ ಬಂದ ಬಡತನ ನಿರ್ಮೂಲನೆಯಂತಹ ಕಾರ್ಯಕ್ರಮಗಳೇನು? ಹಾಗೂ ಇಂದು ಯಾವ ಹಂತದಲ್ಲಿ ದೇಶ ಅಭಿವೃದ್ಧಿ ಪಥದಲ್ಲಿದೆ. ಇದಕ್ಕಾಗಿ ನನ್ನ (ಪ್ರತಿಯೊಬ್ಬರು) ಪಾತ್ರವೇನು ಎನ್ನುವುದನ್ನು ವಿದ್ಯಾರ್ಥಿಗಳು ಅರಿಯಬೇಕಿದೆ” ಎಂದರು.
ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ.ಮಂಜಣ್ಣ ಮಾತನಾಡಿ, “ನಮಗೆ ಸ್ವಾತಂತ್ರ್ಯ ಒದಗಿಸಿಕೊಡಲು ಅನೇಕ ಸ್ವಾತಂತ್ರ್ಯ ಹೋರಾಟಗಾರರು ವರ್ಷನುಗಟ್ಟಲೆ ಜೈಲಿನಲ್ಲಿ ತಮ್ಮ ಜೀವನದ ಅತ್ಯಮೂಲ್ಯ ಸಮಯವನ್ನು ಕಳೆಯಬೇಕಾಯಿತು. ಅಂತಹ ಮಹಾ ನಾಯಕರನ್ನು ಸ್ಮರಿಸುವ ದಿನ ಇದಾಗಿದೆ” ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಧನಂಜಯ, ಜಿಪಂ ಸಿಇಒ ಸುರೇಶ್ ಇಟ್ನಾಳ್, ಪಾಲಿಕೆ ಆಯುಕ್ತ ರೇಣುಕಾ, ಡಿಡಿಪಿಐ ಕೊಟ್ರೇಶ್,ಹಿರಿಯ ಸ್ವಾತಂತ್ರ ಹೋರಾಟಗಾರ ಹೆಚ್.ಎಂ ಮರುಳಸಿದ್ದಪ್ಪ, ಎನ್.ಎಸ್.ಎಸ್. ವಿಭಾಗೀಯ ಅಧಿಕಾರಿ ಪ್ರದೀಪ್, ಎನ್.ಸಿ.ಸಿ.ಸುಬೇದಾರ್ ಮಾಲುಂಜಾಕ, ಹವಾಲ್ದಾರ್ ಧರ್ಮವೀರ್, ಗ್ರಾಮ ಸ್ವರಾಜ್ ಅಭಿಯಾನ್ ದ ಆವರಗೆರೆ ರುದ್ರಮುನಿ, ಸ್ವಾತಂತ್ರ್ಯಯೋಧರ ಉತ್ತರಾಧಿ ಕಾರಿಗಳ ಸಂಘದ ಯುವ ಕಾರ್ಯಕರ್ತೆ ಉಷಾರಾಣಿ, ಚಿತ್ರಿಕಿ ಶಿವಕುಮಾರ್, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರಾದ ತೇಜಸ್ವಿ ಪಟೇಲ್ ಹಾಗೂ ವಿವಿಧ ಕಾಲೇಜಿನ ಉಪನ್ಯಾಸಕರು, ಎನ್.ಸಿ.ಸಿ. ಕೆಡೆಟ್, ಎನ್ ಎಸ್ ಎಸ್ ಸೇವಕರು ಭಾಗವಹಿಸಿದ್ದರು.