ಪ್ರಕೃತಿಯ ಅದ್ಭುತ ಲೋಕವನ್ನು ಕ್ಯಾಮೆರಾ ಮೂಲಕ ಜಗತ್ತಿಗೆ ಪರಿಚಯಿಸಿ, ಪರಿಸರ ಸಂರಕ್ಷಣೆಯ ಮಹತ್ವವನ್ನು ಜನಮಾನಸಕ್ಕೆ ತಲುಪಿಸಿದ ಡೇವಿಡ್ ಅಟೆನ್ಬೊರೊ ಕೇವಲ ದೂರದರ್ಶನ ನಿರೂಪಕರಲ್ಲ, ಅವರು ಪ್ರಕೃತಿಯ ನಿಜವಾದ ರಾಯಭಾರಿ ಎಂದು ಮ್ಯಾನ್ ಮನು ಅಭಿಪ್ರಾಯಪಟ್ಟರು.
ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದಲ್ಲಿ ಸಂಜಯ ಪ್ರಕಾಶನ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ‘ಡೇವಿಡ್ ಅಟೆನ್ಬೊರೊ: ವ್ಯಕ್ತಿ ಮತ್ತು ಸಾಧನೆಗಳು’ ಕುರಿತು ಪರಿಚಯಾತ್ಮಕ ಉಪನ್ಯಾಸ ನೀಡಿದ ಅವರು, ಅಟೆನ್ಬೊರೊ ಅವರು ಕ್ಯಾಮೆರಾ ಮೂಲಕ ಕಾಡು, ಪ್ರಾಣಿ ಮತ್ತು ಪ್ರಕೃತಿಯ ಸೌಂದರ್ಯವನ್ನು ತೋರಿಸುವುದರ ಜೊತೆಗೆ ಜನರ ಮನಸ್ಸಿನಲ್ಲಿ ಪರಿಸರದ ಬಗ್ಗೆ ಕಾಳಜಿ ಮತ್ತು ಹಸಿರು ಚಿಂತನೆ ಬೆಳೆಸಿದ ಪರಿಸರ ವಿಜ್ಞಾನಿಯಾಗಿದ್ದಾರೆ ಎಂದು ಹೇಳಿದರು.
1926ರ ಮೇ 8ರಂದು ಇಂಗ್ಲೆಂಡಿನ ಲಂಡನ್ನಲ್ಲಿ ಜನಿಸಿದ ಡೇವಿಡ್ ಫ್ರೆಡೆರಿಕ್ ಅಟೆನ್ಬೊರೊ ಅವರಿಗೆ ಬಾಲ್ಯದಿಂದಲೇ ಪ್ರಾಣಿ, ಸಸ್ಯ ಮತ್ತು ಕಾಡಿನ ಬಗ್ಗೆ ಅಪಾರ ಆಸಕ್ತಿ ಇತ್ತು. ತಮ್ಮ ಜೀವನವನ್ನೇ ಪ್ರಕೃತಿಯ ಅಧ್ಯಯನ ಮತ್ತು ಅದರ ಸಂರಕ್ಷಣೆಗೆ ಮುಡಿಪಾಗಿಟ್ಟ ಅವರು, ಆರಂಭದಲ್ಲಿ ಪ್ರಕೃತಿಯ ಸೌಂದರ್ಯವನ್ನು ಜಗತ್ತಿಗೆ ಪರಿಚಯಿಸಿದರೆ, ನಂತರ ಜಾಗತಿಕ ತಾಪಮಾನ ಏರಿಕೆ, ಅರಣ್ಯ ನಾಶ ಹಾಗೂ ಜೀವವೈವಿಧ್ಯ ಹಾನಿಯಂತಹ ಗಂಭೀರ ಸಮಸ್ಯೆಗಳ ಬಗ್ಗೆ ಜಾಗೃತಿ ಮೂಡಿಸಲು ಧ್ವನಿ ಎತ್ತಿದರು ಎಂದು ತಿಳಿಸಿದರು.
ನವೀಕರಿಸಬಹುದಾದ ಶಕ್ತಿಯ ಬಳಕೆ, ಮಾಂಸಾಹಾರ ಸೇವನೆ ಕಡಿಮೆ ಮಾಡುವುದು ಹಾಗೂ ಹೆಚ್ಚಿನ ಪ್ರದೇಶಗಳನ್ನು ಸಂರಕ್ಷಿತ ವಲಯಗಳಾಗಿ ಘೋಷಿಸುವ ಅಗತ್ಯವನ್ನು ಅವರು ನಿರಂತರವಾಗಿ ಪ್ರತಿಪಾದಿಸಿದ್ದಾರೆ. ಪ್ರಕೃತಿ ವಿಜ್ಞಾನಿ ಮತ್ತು ನಿರೂಪಕರಾಗಿ ಅತಿ ದೀರ್ಘಕಾಲ ಸೇವೆ ಸಲ್ಲಿಸಿದ ವ್ಯಕ್ತಿಯಾಗಿ ಗಿನ್ನೆಸ್ ವಿಶ್ವ ದಾಖಲೆಯನ್ನೂ ಹೊಂದಿದ್ದಾರೆ ಎಂದು ಹೇಳಿದರು.

ಎರಡು ಬಾರಿ ನೈಟ್ ಪದವಿಗೆ ಭಾಜನರಾಗಿರುವ ಅಟೆನ್ಬೊರೊ ಅವರಿಗೆ 2022ರಲ್ಲಿ ‘ಚಾಂಪಿಯನ್ ಆಫ್ ದಿ ಅರ್ತ್ ಲೈಫ್ಟೈಮ್ ಅಚೀವ್ಮೆಂಟ್’ ಪ್ರಶಸ್ತಿ ಸೇರಿದಂತೆ ‘BAFTA’, ‘Emmy’ ಸೇರಿದಂತೆ ಅನೇಕ ಪ್ರತಿಷ್ಠಿತ ಪ್ರಶಸ್ತಿಗಳು ಲಭಿಸಿವೆ. ಅವರ ಗೌರವಾರ್ಥ 20ಕ್ಕೂ ಹೆಚ್ಚು ಪ್ರಾಣಿ ಮತ್ತು ಸಸ್ಯ ಪ್ರಭೇದಗಳಿಗೆ ಅವರ ಹೆಸರನ್ನೇ ಇಡಲಾಗಿದೆ ಎಂದು ತಿಳಿಸಿದರು.
‘ನಾವು ಪ್ರಕೃತಿಯ ಭಾಗ. ಅದನ್ನು ಉಳಿಸದಿದ್ದರೆ ನಮ್ಮ ಭವಿಷ್ಯವೇ ಇರುವುದಿಲ್ಲ’ ಎಂಬ ಡೇವಿಡ್ ಅಟೆನ್ಬೊರೊ ಅವರ ಸಂದೇಶ ಇಂದಿನ ಜಗತ್ತಿಗೆ ಅತ್ಯಂತ ಪ್ರಸ್ತುತವಾಗಿದೆ. ಅವರ ಸಾಕ್ಷ್ಯಚಿತ್ರಗಳನ್ನು ವೀಕ್ಷಿಸಿದಾಗ ಸಣ್ಣ ಇರುವೆಯಿಂದ ಹಿಡಿದು ನೀಲಿ ತಿಮಿಂಗಿಲದವರೆಗೆ ಪ್ರತಿಯೊಂದು ಜೀವಿಗೂ ಈ ಭೂಮಿಯ ಮೇಲೆ ಸಮಾನ ಹಕ್ಕಿದೆ ಎಂಬ ಅರಿವು ಮೂಡುತ್ತದೆ ಎಂದು ಮ್ಯಾನ್ ಮನು ಹೇಳಿದರು.
ಈ ವಿಡಿಯೋ ವೀಕ್ಷಿಸಿ:https://youtu.be/u1Wlpcz43sw
ಕಾರ್ಯಕ್ರಮದಲ್ಲಿ ಹಿರಿಯ ಗಾಂಧಿವಾದಿ ಡಾ. ಬಿ. ಸುಜಯ್ ಕುಮಾರ್, ಡಾ. ಬಿ.ಕೆ. ರಾಮು, ಐಕ್ಯ ಅಲೆಯನ್ ಸಂಸ್ಥೆಯ ಅಧ್ಯಕ್ಷೆ ಆಶಾಲತಾ ಪುಟ್ಟೆಗೌಡ, ಶೀಲಾ ನಂಜುಂಡಯ್ಯ, ಸಂಜಯ ಪ್ರಕಾಶನದ ಎಸ್.ಎಂ. ಶಿವಕುಮಾರ್, ಸಮರ್ಪಣ ಟ್ರಸ್ಟ್ ಅಧ್ಯಕ್ಷ ಕೆ.ಎಸ್. ಜಯಶಂಕರ್, ವಕೀಲ ಸಿ.ಎಸ್. ವೆಂಕಟೇಶ್, ಎಸ್.ಆರ್. ಸಿದ್ದೇಶ್, ಟಿ. ಬಾಲರಾಜು, ಕಡತನಾಳು ಸುರೇಶ್, ಮಂಜುನಾಥ್, ಚಿಕ್ಕತಮ್ಮೆಗೌಡ, ವಿರೂಪಾಕ್ಷಗೌಡ, ಕ್ಯಾತನಹಳ್ಳಿ ಚಂದ್ರಣ್ಣ, ಅಮಿತ್ ಕೃಷ್ಣ, ನಟ ಕೇಶವ ಸೇರಿದಂತೆ ಹಲವರು ಇದ್ದರು.






