ಜಿಲ್ಲೆಯಾದ್ಯಂತ ನಡೆಯುತ್ತಿರುವ ಪರಿಶಿಷ್ಟ ಜಾತಿಯ ಒಳಮೀಸಲಾತಿ ಕುರಿತ ಮನೆ ಮನೆ ಸಮೀಕ್ಷೆ ಗಣತಿಗೆ ಉತ್ತಮ ಪ್ರತಿಕ್ರಿಯೆ ದೊರಕಿದ್ದು, ಇದುವರೆಗೆ 5,877 ಜನರ ಗಣತಿಯನ್ನು ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ ತಿಳಿಸಿದರು.
ಚಿಕ್ಕಬಳ್ಳಾಪುರ ತಾಲ್ಲೂಕಿನ ವರದಹಳ್ಳಿಗೆ ಗುರುವಾರ ಭೇಟಿ ನೀಡಿ ಸಮೀಕ್ಷೆ ಕಾರ್ಯವನ್ನು ಪರಿಶೀಲಿಸಿದ ಜಿಲ್ಲಾಧಿಕಾರಿಗಳು ಬಳಿಕ ಮಾತನಾಡಿದರು.
ಗಣತಿದಾರರು ತಮ್ಮ ಮನೆಗಳ ಬಳಿ ಬಂದು ಕೇಳುವ ಮಾಹಿತಿ ಹಾಗೂ ವಿವರವನ್ನು ಸ್ಪಷ್ಟವಾಗಿ ನೀಡಬೇಕು. ಗಣತಿದಾರರಿಗೆ ಸಹಕಾರ ನೀಡಿದರೆ ಸಮೀಕ್ಷೆ ಕಾರ್ಯ ಸುಗಮವಾಗಲಿದೆ. ಈ ಜಾತಿಗಣತಿ ವರದಿಯ ಅನುಸಾರ ಸರ್ಕಾರದ ಯೋಜನೆಗಳನ್ನು ಅರ್ಹರಿಗೆ ತಲುಪಿಸಲು ಬಹಳ ಸಹಕಾರಿಯಾಗುತ್ತದೆ. ಸಾರ್ವಜನಿಕರು ಈ ಕುರಿತು ಜಾಗೃತರಾಗಿ ಮಾಹಿತಿ ನೀಡಿ ಸಾಮಾಜಿಕ ಜವಾಬ್ದಾರಿ ತೋರಬೇಕು. ಸಮುದಾಯದ ಅಭಿವೃದ್ಧಿಗೆ ಈ ಗಣತಿಯು ತುಂಬಾ ಸಹಕಾರಿಯಾಗುವುದರಿಂದ ಸಮುದಾಯದ ಮುಖಂಡರ ಸಹಕಾರ ಪಡೆದು ಅವರೊಂದಿಗೆ ಸಭೆ ನಡೆಸಿ ಅರಿವು ಮೂಡಿಸುವ ಕಾರ್ಯವನ್ನು ಮಾಡಲಾಗಿದೆ ಎಂದು ಮಾಹಿತಿ ನೀಡಿದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಕಾಶ್ ಜಿ.ಟಿ. ನಿಟ್ಟಾಲಿ ಮಾತನಾಡಿ, ಒಳಮೀಸಲಾತಿ ಕುರಿತ ಸಮೀಕ್ಷೆ ಕಾರ್ಯವನ್ನು ಜಿಲ್ಲೆಯಾದ್ಯಂತ ಪರಿಶೀಲಿಸಲಾಗುತ್ತಿದೆ. ಈ ಸಮೀಕ್ಷೆ ಕಾರ್ಯವು ಮೇ 17ರವರೆಗೆ ಜಿಲ್ಲಾಯಾದ್ಯಂತ ನಡೆಯಲಿದ್ದು, ಪರಿಶಿಷ್ಟ ಜಾತಿ ಸಮುದಾಯದವರು ನಿಖರ ಮಾಹಿತಿ ಹಾಗೂ ವಿವರವನ್ನು ಒದಗಿಸುವ ಮೂಲಕ ಸಮೀಕ್ಷೆ ಕಾರ್ಯಕ್ಕೆ ಕೈ ಜೋಡಿಸಬೇಕು ಎಂದು ಮನವಿ ಮಾಡಿದರು.
ವರದಹಳ್ಳಿ ಸಮೀಕ್ಷೆ ಕಾರ್ಯದ ನಂತರ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಜಂಟಿಯಾಗಿ ಬಾಗೇಪಲ್ಲಿ ತಾಲ್ಲೂಕಿನ ಪರಗೋಡು ಗ್ರಾಮದಲ್ಲಿ ನಡೆಯುತ್ತಿದ್ದ ಗಣತಿ ಕಾರ್ಯವನ್ನು ಪರಿಶೀಲಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಅತಿಕ್ ಪಾಷಾ, ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ತೇಜಾನಂದ್ ರೆಡ್ಡಿ, ಸಹಾಯಕ ನಿರ್ದೇಶಕ ಶೇಷಾದ್ರಿ, ವಿವಿಧ ಇಲಾಖೆಗಳ ಅಧಿಕಾರಿಗಳು, ಗಣತಿದಾರರು, ಸಾರ್ವಜನಿಕರು ಇದ್ದರು.