ಈಜೀಪುರ ಮೇಲ್ಸೇತುವೆ ಕಾಮಗಾರಿಯನ್ನು ಮಾರ್ಚ್ 2026ರ ವೇಳೆಗೆ ಪೂರ್ಣಗೊಳಿಸಲು ಕ್ರಮ ಕೈಗೊಳ್ಳುವಂತೆ ಮುಖ್ಯ ಆಯುಕ್ತ ಮಹೇಶ್ವರ್ ರಾವ್ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಬನ್ನೇರುಘಟ್ಟ ರಸ್ತೆ ಸಕಲವಾರ ಗ್ರಾಮದ ಸೆಗ್ಮೆಂಟ್ ಕಾಸ್ಟಿಂಗ್ ಯಾರ್ಡ್ ಗೆ ಇಂದು ಅಧಿಕಾರಿಗಳೊಂದಿಗೆ ಭೇಟಿ ನೀಡಿ, ಮೇಲ್ಸೇತುವೆಗೆ ಕಾಸ್ಟಿಂಗ್ ಮಾಡುವ ಕಾರ್ಯವನ್ನು ಪರಿಶೀಲನೆ ನಡೆಸಿದ ವೇಳೆ ಅವರು ಮಾತನಾಡಿದರು.
“ಈಜೀಪುರ ಮುಖ್ಯ ರಸ್ತೆಯಲ್ಲಿ 2.38 ಕಿ.ಮೀ ಉದ್ದದ ಮೇಲ್ಸೇತುವೆ ಕಾಮಗಾರಿಯನ್ನು ತ್ವರಿತಗತಿಯಲ್ಲಿ ನಡೆಸಲಾಗುತ್ತಿದೆ. ಮೇಲ್ಸೇತುವೆಗೆ ಒಟ್ಟು 762 ಸೆಗ್ಮೆಂಟ್ ಕಾಸ್ಟಿಂಗ್‌ಗಳು ಬರಲಿದ್ದು, ಈಗಾಗಲೇ 437 ಸೆಗ್ಮೆಂಟ್ ಕಾಸ್ಟಿಂಗ್ ಅಳವಡಿಸಲಾಗಿದೆ. ಇನ್ನು 325 ಸೆಗ್ಮೆಂಟ್ ಕಾಸ್ಟಿಂಗ್ ಅಳವಡಿಸಬೇಕಿದೆ. ಈ ಸಂಬಂಧ ಪ್ರತಿ ತಿಂಗಳು 45 ಸೆಗ್ಮೆಂಟ್ ಗಳನ್ನು ಸಿದ್ದಪಡಿಸಿ ಅಳವಡಿಸಬೇಕು” ಎಂದು ಸೂಚಸಿದರು.

“ಸೆಗ್ಮೆಂಟ್ ಕಾಸ್ಟಿಂಗ್ ಅಳವಡಿಸುವ ಕಾಮಗಾರಿಗೆ ವೇಗ ನೀಡಿ ಕಾಸ್ಟಿಂಗ್ ಅಳವಡಿಸುವ ಪ್ರಕ್ರಿಯೆಯನ್ನು ವರ್ಷಾಂತ್ಯದೊಳಗಾಗಿ ಪೂರ್ಣಗೊಳಿಸಬೇಕು. ಇನ್ನುಳಿದ ಕಾಮಗಾರಿಯನ್ನು ಮಾರ್ಚ್ 2026ರ ಒಳಗಾಗಿ ಪೂರ್ಣಗೊಳಿಸಲು ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು. ಕಾಮಗಾರಿ ನಡೆಯುವ ಸ್ಥಳದಲ್ಲಿ ಸೆಂಟ್ ಜಾನ್ಸ್ ಆಸ್ಪತ್ರೆ ಹಾಗೂ ಸೆಂಟ್ ಜಾನ್ಸ್ ಹಾಸ್ಟೆಲ್ ಬಳಿಯ 2 ಕಡೆ ಭೂಸ್ವಾಧೀನಪಡಿಸಿಕೊಳ್ಳಬೇಕಾಕಿದ್ದು, ಈ ಸಂಬಂಧ ಈಗಾಗಲೇ ಸಂಬಧಪಟ್ಟವರ ಜೊತೆ ಸಭೆ ನಡೆಸಿ ಸಮಸ್ಯೆಯನ್ನು ಬಗೆಹರಿಸಲಾಗಿದೆ. ಶೀಘ್ರ ರ‍್ಯಾಂಪ್ ಕಾಮಗಾರಿಯನ್ನು ಪ್ರಾರಂಭಿಸಿ ಪೂರ್ಣಗೊಳಿಸಿ” ಎಂದು ಗುತ್ತಿಗೆದಾರರು ಮತ್ತು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಮುಖ್ಯ ಅಭಿಯಂತರ ಡಾ. ರಾಘವೇಂದ್ರ ಪ್ರಸಾದ್ ಮಾತನಾಡಿ, “ಈಜೀಪುರ ಮೇಲ್ಸೇತುವೆ ಕಾಮಗಾರಿಗೆ ಸಂಬಂಧಿಸಿದಂತೆ ಎಲ್ಲಾ ರೀತಿಯ ರೂಪುರೇಶೆಗಳನ್ನು ಸಿದ್ದಪಡಿಸಿಕೊಂಡು ತ್ವರಿತವಾಗಿ ಕಾಮಗಾರಿಯನ್ನು ಪೂರ್ಣಗೊಳಿಸಲು ಯೋಜನೆ ರೂಪಿಸಲಾಗಿದೆ. ಮೇಲ್ಸೇತುವೆಯಲ್ಲಿ ಕಾಸ್ಟಿಂಗ್ ಸೆಗ್ಮೆಂಟ್ ಎರೆಕ್ಷನ್ ಅನ್ನು ರಾತ್ರಿ 11 ರಿಂದ ಬೆಳಿಗ್ಗೆ 5 ಗಂಟೆಯವರೆಗೆ ಮಾತ್ರ ಮಾಡಲಾಗುತ್ತಿದ್ದು, ಇರುವ ಸಮಯದಲ್ಲಿ ತ್ವರಿತವಾಗಿ ಕೆಲಸ ಮಾಡಲಾಗುತ್ತಿದೆ. ಸಂಚಾರ ದಟ್ಟಣೆ ನಡುವೆ ಕೆಲಸ ಮಾಡಲಾಗುತ್ತಿದೆ. ಇನ್ನು ಪಾದಚಾರಿ ಮಾರ್ಗ ಕಾಮಗಾರಿಯನ್ನು ಬಹುತೇಕ ಪೂರ್ಣಗೊಳಿಸಲಾಗಿದೆ. ಮೇಲ್ಸೇತುವೆ ಕಾಮಗಾರಿ ಆಗಿರುವ ಕೆಳಭಾಗದಲ್ಲಿ ಡಾಂಬರೀಕರಣ ಮಾಡಲಾಗಿದ್ದು, ಇತರೆಡೆ ಪ್ರಗತಿಯಲ್ಲಿದೆ. ಶೋಲ್ಡರ್ ಡ್ರೈನ್ ಹಾಗೂ ಮೀಡಿಯನ್ ಕೆಲಸ ಪ್ರಗತಿಯಲ್ಲಿದೆ” ಎಂದು ಮಾಹಿತಿ ನೀಡಿದರು.
ಇದನ್ನೂ ಓದಿ: ಬೆಂಗಳೂರು | ಮೂಡಬಿದ್ರೆ ಕಾಲೇಜಿನ ವಿದ್ಯಾರ್ಥಿನಿಯ ಅತ್ಯಾಚಾರ: ಉಪನ್ಯಾಸಕರಿಬ್ಬರು ಸೇರಿ ಮೂವರ ಬಂಧನ
ಈ ವೇಳೆ ಕಾರ್ಯಪಾಲಕ ಅಭಿಯಂತರ ಚಂದ್ರಶೇಖರ್ ಸೇರಿದಂತೆ ಇನ್ನಿತರೆ ಸಂಬಂಧಪಟ್ಟ ಅಧಿಕಾರಿಗಳು ಉಪಸ್ಥಿತರಿದ್ದರು.