ಕೈಕೊಟ್ಟ ಬೆಳೆ ಮತ್ತು ಸಾಲದ ಹೊರೆಯಿಂದಾಗಿ ಜಿಲ್ಲೆಯಲ್ಲಿ ಒಂದೇ ದಿನ ಇಬ್ಬರು ರೈತರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆಗಳು ಮಂಗಳವಾರ ನಡೆದಿವೆ.
ಭಾಲ್ಕಿ ತಾಲ್ಲೂಕಿನ ಖಾನಾಪುರ ಗ್ರಾಮದ ಯುವ ರೈತ ಕಾರ್ತಿಕ್ (21) ಎಂಬುವವರು ಖಾನಾಪುರ ಅರಣ್ಯ ಪ್ರದೇಶದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಮೃತ ಕಾರ್ತಿಕ್ ಬೇರೆಯವರ ಜಮೀನು ಗುತ್ತಿಗೆ ಪಡೆದು ಬೇಸಾಯ ಮಾಡುವುದಕ್ಕಾಗಿ ಬ್ಯಾಂಕ್ ಹಾಗೂ ಖಾಸಗಿಯವರ ಬಳಿ ಕೈಸಾಲ ಸೇರಿ ಒಟ್ಟು ₹4 ಲಕ್ಷ ಸಾಲ ಪಡೆದಿದ್ದರು. ನಿರೀಕ್ಷೆಯಂತೆ ಬೆಳೆ ಬೆಳೆಯದೆ ಸಂಕಷ್ಟಕ್ಕೆ ಸಿಲುಕಿದ್ದರು. ಸಾಲ ತೀರಿಸಲಾಗದೆ ಮನನೊಂದು ಆತ್ಮಹತ್ಯೆಗೆ ಶರಣಾಗಿದ್ದಾರೆ.
ಈ ಕುರಿತು ಧನ್ನೂರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬಾವಿಗೆ ಹಾರಿ ರೈತ ಆತ್ಮಹತ್ಯೆ :
ಬಸವಕಲ್ಯಾಣ ತಾಲ್ಲೂಕಿನ ಇಲ್ಲಾಳ ಗ್ರಾಮದ ರೈತ ಜಗದೀಶರೆಡ್ಡಿ ಪ್ರಲ್ಹಾದರೆಡ್ಡಿ (49) ತಮ್ಮ ಜಮೀನಿನಲ್ಲಿ ಇರುವ ಬಾವಿಗೆ ಹಾರಿ ಮಂಗಳವಾರ ನಸುಕಿನ ಜಾವ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಮೃತರಿಗೆ ಈ ಹಿಂದೆ ಎರಡೂವರೆ ಎಕರೆ ಜಮೀನು ಇತ್ತು. ರೇಷ್ಮೆ ಹಾಗೂ ಇತರೆ ಬೆಳೆ ಬೆಳೆಯುತ್ತಿದ್ದರು. ಕೃಷಿಗಾಗಿ ಬ್ಯಾಂಕ್‌ನಲ್ಲಿ ₹1.25 ಲಕ್ಷ ಹಾಗೂ ಖಾಸಗಿ ಕೈಸಾಲ ಮಾಡಿಕೊಂಡಿದ್ದರು. ಸರಿಯಾಗಿ ಬೆಳೆ ಬಾರದೆ ಹಾಗೂ ರೇಷ್ಮೆ ಬೆಲೆ ಕುಸಿತದಿಂದ ಸಾಲದ ಹೊರೆಯಾಗಿತ್ತು. ಸಾಲ ತೀರಿಸುವುದಕ್ಕಾಗಿ ಕೆಲ ತಿಂಗಳ ತಮ್ಮ ಒಂದು ಎಕರೆ ಜಮೀನು ಸಹ ಮಾರಾಟ ಮಾಡಿದ್ದರು. ಉಳಿದ ಒಂದೂವರೆ ಎಕರೆಯಲ್ಲಿ ಬೆಳೆದ ರೇಷ್ಮೆ ಬೆಳೆದಿದ್ದರು, ನಿರೀಕ್ಷೆಯಂತೆ ಫಸಲು ಬರಲಿಲ್ಲ. ಸಾಲ ತೀರಿಸುವುದು ಹೇಗೆ ಎಂದು ಚಿಂತೆಗೀಡಾಗಿ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಈ ಸುದ್ದಿ ಓದಿದ್ದೀರಾ? ಬೀದರ್ | ಕೋಗಿಲೆ ಕಂಠದ ಪ್ರಕೃತಿಗೆ ಬೇಕಿದೆ ಪ್ರೋತ್ಸಾಹ
ಮೃತರಿಗೆ ಪುತ್ರ, ಪುತ್ರಿ ಹಾಗೂ ಪತ್ನಿ ಇದ್ದಾರೆ. ಈ ಕುರಿತು ಮಂಠಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.