ಆನೆಕಾಲು ರೋಗ ತಡೆಗಟ್ಟುವಿಕೆ ಡಿಇಸಿ ಮಾತ್ರೆಗಳನ್ನು ಸೇವಿಸುವುದು ಅಗತ್ಯ. ಮಾತ್ರೆಗಳನ್ನು ಸೇವಿಸುವುದರಿಂದ ಆನೆಕಾಲು ರೋಗದ ಹರಡುವಿಕೆಯನ್ನು ತಡೆದು, ರೋಗವನ್ನು ನಿರ್ಮೂಲನೆ ಮಾಡಬಹುದು ಎಂದು ವಿಜಯಪುರ ಜಿಲ್ಲೆಯ ಆಲಮೇಲ ತಹಶೀಲ್ದಾರ್ ಡಾ. ಮಹದೇವ ಸನಮುರಿ ಹೇಳಿದ್ದಾರೆ.
ಆಲಮೇಲದಲ್ಲಿ ರಾಷ್ಟ್ರೀಯ ಆನೆಕಾಲು ರೋಗ ನಿಯಂತ್ರಣ ಕಾರ್ಯಕ್ರಮದಡಿ ಕಂದಾಯ ಇಲಾಖೆ, ಶಿಕ್ಷಣ ಇಲಾಖೆ, ಪಟ್ಟಣ ಪಂಚಾಯಿತಿ, ಪಂಚಾಯತ್ ರಾಜ್ಯ ಇಲಾಖೆ ಆಯೋಜಿಸಿದ್ದ ಡಿಇಸಿ ಮಾತ್ರೆ ವಿತರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. “ಡಿಇಸಿ ಮಾತ್ರೆಗಳನ್ನು ಸೇವನೆ ಮಾಡಿದಾಗ ಸಣ್ಣಪುಟ್ಟ ಜ್ವರ, ಮೈ ಕೈ ನೋವು, ಸುಸ್ತು, ವಾಕರಿಕೆ ಕಾಣಿಸಿಕೊಳ್ಳಬಹುದು. ಆದರೆ, ಯಾವುದೇ ಪ್ರಾಣಾಪಾಯವಿಲ್ಲ. ಮಾತ್ರೆಗಳನ್ನು ಸೇವನೆ ಮಾಡದೆ ಬಿಟ್ಟರೆ ಆನೆಕಾಲು ರೋಗ ಉಲ್ಬಣಗೊಂಡು ನರಕಯಾತನೇ ಅನುಭವಿಸಬೇಕಾಗುತ್ತದೆ” ಎಂದರು.
“ಗ್ರಾಮಗಳಲ್ಲಿ ಪರಿಸರ ಸ್ವಚ್ಛತೆ ಕಾಪಾಡುವುದು, ತಿಪ್ಪೆಗುಂಡಿ, ಚರಂಡಿಗಳಲ್ಲಿ ನೀರುಗಳು ನಿಲ್ಲದಂತೆ ನೋಡಿಕೊಳ್ಳುವುದು ಲೇರಿಯ ಕ್ಯೂಲೆಕ್ಸ್ ಸೊಳ್ಳೆ ಉತ್ಪತ್ತಿಯಾಗದಂತೆ ನೋಡಿಕೊಳ್ಳುವುದು ಪ್ರತಿಯೊಬ್ಬರ ಜವಾಬ್ದಾರಿ” ಎಂದು ಹೇಳಿದರು.
ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ವೈ.ಎಂ ಪೂಜಾರಿ ಮಾತನಾಡಿ, “ಡಿಇಸಿ ಮಾತ್ರಗಳ ಸೇವನೆ ಮಾಡುವುದರ ಜೊತೆಗೆ ತಮ್ಮ ಕುಟುಂಬಸ್ಥರಿಗೂ ಕೂಡ ಮಾತ್ರೆಗಳನ್ನು ನೀಡಿವುದು ಎಲ್ಲರ ಕರ್ತವ್ಯ. ಆನೆಕಾಲು ರೋಗ ತಡೆಗೆ ಮುಂಜಾಗ್ರತ ಕ್ರಮ ಕೈಗೊಳ್ಳಲು ಕಳೆದ 15 ವರ್ಷಗಳಿಂದ ನಿರಂತರವಾಗಿ ಡಿಇಸಿ ಸಾಮೂಹಿಕ ಔಷಧಿ ವಿತರಣೆ ಮಾಡಲಾಗುತ್ತಿದೆ. ಆಲಮೇಲಾದಲ್ಲಿ ಸೊಳ್ಳೆಗಳನ್ನು ಹಿಡಿದು, ಪರೀಕ್ಷಿಸಿದಾಗ ಆನೆಕಾಲು ರೋಗ ಉತ್ಪತ್ತಿ ಮಾಡುವ ಪರಾವಲಂಬಿ ಜೀವಿಗಳು ಕಂಡುಬಂದಿವೆ” ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಕಂದಾಯ ಇಲಾಖೆಯ ಉಪತಹಸೀಲ್ದಾರ್ ಎಸ್.ಐ ಚೌಹಾಣ್. ಶಿರಸ್ತೆದಾರ ಪಿ.ಎಸ್ ಮೂಕಿಹಾಳ, ವೈದ್ಯಾಧಿಕಾರಿ ಡಾ ಪ್ರಶಾಂತ ದೊಮಗೊಂಡ, ಡಾ. ಎಸ್ ಜಿ ಪತ್ತಾರ, ಆರೋಗ್ಯ ಇಲಾಖೆಯ ಮಲ್ಲಿಕಾರ್ಜುನ ಪೂಜಾರಿ, ಸಂತೋಷ್, ಸಂದೇಶ್ ಜೋಗುರ್, ಮಾರ್ಥಾಂಡ್ ವಗ್ಗೆ, ನಿಂಗಪ್ಪ ಬೋಡ್ಕೆ, ಸಂತೋಷ್ ಕುಂಬಾರ್ ಉಪಸ್ಥಿತರಿದ್ದರು.