ಹದಿನೆಂಟು ಕೋಮಿನ ಆರಾಧ್ಯ ದೈವ, ಗುಬ್ಬಿ ಅಧಿ ದೇವತೆ ಶ್ರೀ ಗ್ರಾಮ ದೇವತೆ ಅಮ್ಮನವರ ನೂತನ ಜಾತ್ರಾ ಗದ್ದುಗೆ ಶಿಲಾ ದೇವಾಲಯ ಪ್ರವೇಶ ಹಾಗೂ ಶ್ರೀ ಅಮ್ಮನವರ ಪುನರ್ ಪ್ರತಿಷ್ಠಾಪನಾ ಮಹೋತ್ಸವ ಜೂನ್ 3 ರಿಂದ 5 ರವರೆಗೆ ಮೂರು ದಿನಗಳ ಧಾರ್ಮಿಕ ಕೈಂಕರ್ಯಗಳು ವಿಧಿವತ್ತಾಗಿ ಜರುಗಲಿದೆ ಎಂದು ಹದಿನೆಂಟು ಕೋಮಿನ ಮುಖಂಡ ಪಟೇಲ್ ಕೆಂಪೇಗೌಡ ತಿಳಿಸಿದರು.
ಪಟ್ಟಣದ ಹಳೇ ಸಂತೆ ಮೈದಾನದ ಬಳಿಯ ನೂತನ ಶಿಲಾ ದೇವಾಲಯ ಬಳಿ ನಡೆದ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು ಗದ್ದುಗೆ ದೇವಾಲಯ ನಿರ್ಮಾಣಕ್ಕೆ ಆಲೋಚನೆ ಮಾಡಿದ ತಕ್ಷಣವೇ ಕಾರ್ಯ ಪ್ರವೃತ್ತರಾಗಿ ಶಾಸಕ ಎಸ್.ಆರ್.ಶ್ರೀನಿವಾಸ್ ಅವರ ಬಳಿ ಚರ್ಚಿಸಿ ಅವರ ಹತ್ತು ಲಕ್ಷ ಅನುದಾನದಲ್ಲಿ ಆರಂಭಿಸಿ ನಂತರ ಅಂದಾಜು ವೆಚ್ಚ 60 ಲಕ್ಷ ವ್ಯಯದಲ್ಲಿ ಸುಂದರ ಶಿಲಾ ದೇವಾಲಯ ಸಜ್ಜಾಗಿ ಲೋಕಾರ್ಪಣೆಗೊಳ್ಳಲಿದೆ. ಈ ಸತ್ಕಾರ್ಯಕ್ಕೆ ಹದಿನೆಂಟು ಕೋಮಿನ ಮುಖಂಡರು ಭಾಗಿಯಾಗಿದ್ದರು. ಹಾಗೆಯೇ ಎಲ್ಲಾ ಕೋಮಿನ ಜನರು ಅವರ ಶಕ್ತ್ಯಾನುಸಾರ ಆರ್ಥಿಕ ನೆರವು ನೀಡಿ ಐದು ತಿಂಗಳಲ್ಲಿ ಶಿಲಾ ದೇವಾಲಯ ಸುಂದರವಾಗಿ ಸಿದ್ಧವಾಗಿದೆ ಎಂದರು.
ಪ್ರತಿ ಶ್ರಾವಣ ಮಾಸದಲ್ಲಿ ನಡೆಯುವ ಗ್ರಾಮ ದೇವತೆ ಜಾತ್ರೆಯ ಸಮಯದಲ್ಲಿ ಅಮ್ಮನವರನ್ನು ಗದ್ದುಗೆಗೆ ತರುವ ಈ ದೇವಾಲಯ ಶಿಥಿಲಾವಸ್ಥೆ ಹೊಂದಿತ್ತು. ಎಲ್ಲರ ಸಹಕಾರದಲ್ಲಿ ಸಜ್ಜಾದ ದೇವಾಲಯವನ್ನು ಮೂರು ದಿನಗಳ ಧಾರ್ಮಿಕ ಕಾರ್ಯದಲ್ಲಿ ಸಂಪನ್ನ ಗೊಳಿಸಲಾಗುವುದು ಎಂದ ಅವರು ಜೂನ್ 3 ರ ಸಂಜೆ 5.30 ಗಂಟೆಗೆ ಮೂಲ ಗದ್ದುಗೆಯಿಂದ ಅಮ್ಮನವರನ್ನು ಮೆರವಣಿಗೆ ಮೂಲಕ ಶ್ರೀ ಚನ್ನಬಸವೇಶ್ವರ ಸ್ವಾಮಿ ದೇವಾಲಯಕ್ಕೆ ಕರೆ ತಂದು ಕಲ್ಯಾಣಿಯಲ್ಲಿ ಗಂಗಾಪೂಜೆ ನೆರವೇರಿಸಿ ಗ್ರಾಮದ ಮುತ್ತೈದೆಯರಿಗೆ ಮಡಿಲು ತುಂಬಿ 108 ಕಳಸ ಪೂರ್ಣ ಕುಂಭ ಸಮೇತ ನೂತನ ಗದ್ದುಗೆಗೆ ಬಂದು ವಾಸ್ತು ಪೂಜೆ ಮಾಡಲಾಗುವುದು ಎಂದರು.
ಜೂನ್ 4 ರಂದು ಬೆಳಿಗ್ಗೆ ನಾಂದಿ, ಸ್ವಸ್ತಿ ವಾಚನ, ಅಷ್ಟಲಕ್ಷ್ಮಿ ಪೂಜೆ, ನವದುರ್ಗಾರಾಧನೆ ಇತ್ಯಾದಿ ಪೂಜೆ ನಡೆಯಲಿದೆ. ಸಂಜೆ ಗಣಪತಿ ಹೋಮ, ಗಾಯತ್ರಿ ಹೋಮ, ಗದ್ದುಗೆ ಸ್ಥಿರಮೂರ್ತಿ ಅಮ್ಮನವರಿಗೆ ಜಲಾಧಿವಾಸ ಕಾರ್ಯಕ್ರಮ ನೆರವೇರಲಿದೆ. ರಾತ್ರಿ 8 ಗಂಟೆಗೆ ಗುರುರಾಜ ನಾಯ್ದು ಅವರ ಪುತ್ರಿ ಶೀಲಾ ನಾಯ್ಡು ಅವರಿಂದ ಶ್ರೀದೇವಿ ಮಹಾತ್ಮೆ ಹರಿಕಥೆ ನಡೆಯಲಿದೆ ಎಂದ ಅವರು ಜೂನ್ 5 ರಂದು ಮುಂಜಾನೆ ಅಷ್ಟಬಂಧ ನೆರವೇರಿಸಿ ತೇವಡೇಹಳ್ಳಿ ಶ್ರೀ ಚನ್ನಬಸವೇಶ್ವರ ಶಿವಾಚಾರ್ಯ ಅವರಿಂದ ನೂತನ ಗದ್ದುಗೆ ಸಂಸ್ಕಾರ ಹಾಗೂ ಗದ್ದುಗೆಯ ಸ್ಥಿರಮೂರ್ತಿಯ ಪುನರ್ ಪ್ರತಿಷ್ಠಾಪನಾ ಮಹೋತ್ಸವ ನೆರವೇರಲಿದೆ ಎಂದರು.
ಚಿಕ್ಕ ತೊಟ್ಲಕೆರೆ ಶ್ರೀ ಅಟವಿ ಶಿವಲಿಂಗ ಸ್ವಾಮಿ ಅವರಿಂದ ಶ್ರೀ ಆದಿಶಕ್ತಿ ಅಮ್ಮನವರ ನೂತನ ವಿಗ್ರಹ ಪ್ರತಿಷ್ಠಾಪನೆ ಹಾಗೂ ನೇತ್ರೊನ್ಮಿಲನ ವಿಧಿ ನಡೆಯಲಿದೆ. ತೊರೆಮಠದ ಶ್ರೀ ಚಂದ್ರಶೇಖರ ಸ್ವಾಮೀಜಿ ಅವರ ಸಾನಿಧ್ಯದಲ್ಲಿ ಆಲಯ ಪ್ರವೇಶ, ರಾಜೋಪಚಾರ, ಪೂರ್ಣಾಹುತಿ ನಂತರ ಮಹಾಮಂಗಳಾರತಿ ನಡೆದು ನಂತರ ಮಹದಾಸೋಹ ವ್ಯವಸ್ಥೆ ಮಾಡಲಾಗಿದೆ ಎಂದ ಅವರು ಕಾರ್ಯಕ್ರಮಕ್ಕೆ ಸಂಸದ ಹಾಗೂ ಕೇಂದ್ರ ರೈಲ್ವೆ ಸಚಿವ ವಿ.ಸೋಮಣ್ಣ ಮತ್ತು ರಾಜ್ಯ ರಸ್ತೆ ಸಾರಿಗೆ ನಿಗಮ ಅಧ್ಯಕ್ಷ ಹಾಗೂ ಶಾಸಕ ಎಸ್.ಆರ್.ಶ್ರೀನಿವಾಸ್ ವಿಶೇಷ ಆಹ್ವಾನಿತರಾಗಿ ಆಗಮಿಸಲಿದ್ದಾರೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಹದಿನೆಂಟು ಕೋಮಿನ ಮುಖಂಡರಾದ ಪಣಗಾರ್ ಸೋಮಶೇಖರ್, ಯಜಮಾನ್ ಕುಮಾರಯ್ಯ, ಚಿಕ್ಕಹನುಮಂತಯ್ಯ, ರೇಣುಕಸ್ವಾಮಿ, ಪಾಪಣ್ಣ, ಬಲರಾಮಯ್ಯ, ಪಪಂ ಸದಸ್ಯ ಕುಮಾರ್, ಗುತ್ತಿಗೆದಾರ ಮಂಜುನಾಥ್ ಇತರರು ಇದ್ದರು.