ಸಂವಿಧಾನ ಉಳಿವಿಗಾಗಿ ಎಲ್ಲರೂ ಒಗ್ಗೂಡಬೇಕು. ಕೋಮುವಾದಿ ಪಕ್ಷ ಬಿಜೆಪಿಯನ್ನು ಸೋಲಿಸಬೇಕು. ಶಿಗ್ಗಾಂವಿ ಸೌಹಾರ್ದತೆಗೆ ಹೆಸರುವಾಸಿಯಾದ ಸಂತ ಶಿಶುನಾಳ ಷರೀಫರ ನಾಡು. ಇಲ್ಲಿ ಕೋಮು ದ್ವೇಷಕ್ಕೆ ಅವಕಾಶ ಕೊಡಬಾರದು ಎಂದು ಶಿಗ್ಗಾವಿಯ ಮತದಾರರಿಗೆ ಹಿರಿಯ ವಕೀಲ ಅನೀಶ್ ಪಾಷಾ ಕರೆಕೊಟ್ಟಿದ್ದಾರೆ.
ಶಿಗ್ಗಾವಿಯಲ್ಲಿ ಉಚುನಾವಣೆಯ ನಡೆಯುತ್ತಿರುವ ಹಿನ್ನೆಲೆ, ಎದ್ದೆಳು ಕರ್ನಾಟಕ, ಜಾಗೃತ ಕರ್ನಾಟಕ, ಮುಸ್ಲಿಂ ಬಾಂಧವ್ಯ ವೇದಿಕೆ ಹಾಗೂ ಜೀವಿಕ ಸಂಘಟನೆಗಳ ಮುಖಂಡರು ಪತ್ರಿಕಾಗೋಷ್ಠಿ ನಡೆಸಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಅನೀಶ್ ಮಾತನಾಡಿದರು. “ಬಿಜೆಪಿ ತನ್ನ ಆಡಳಿತದಲ್ಲಿ ಜನರಿಗೆ ಬೇಕಾದಂತಹ ಯಾವುದೇ ಮೂಲ ಸೌಲಭ್ಯಗಳನ್ನು ನೀಡಿಲ್ಲ. ಕೇವಲ ತಳಸಮುದಾಯಗಳ ಮೇಲೆ ಮತ್ತು ಅಲ್ಪಸಂಖ್ಯಾತರ ಮೇಲೆ ಶೋಷಣೆ ಮತ್ತು ಕೋಮು ಬೆಂಕಿ ಹಚ್ಚುತ್ತಾ ಬಂದಿದೆ. ಹಲಾಲ್, ಹಿಜಾಬ್, ಆಜಾನ್, ಹುಬ್ಬಳ್ಳಿ ದರ್ಗಾ ಹೆಸರಿನಲ್ಲಿ ಕೋಮುಗಲಭೆ ಸೃಷ್ಟಿಸಿ, ಜನರನ್ನು ಧರ್ಮದ ಹೆಸರಿನಲ್ಲಿ ವಿಭಜಿಸುತ್ತಿದ್ದಾರೆ” ಎಂದರು.
ಸೋಹೆಲ್ ಅಹ್ಮದ್ ಮಾತನಾಡಿ, “ಇಂದಿನ ಯುವಜನರು ಧರ್ಮ, ರಾಜಕೀಯ ದ್ವೇಷದ ದಳ್ಳೂರಿಗೆ ಸಿಲುಕಿ ಹಾದಿ ತಪ್ಪುತ್ತಿದ್ದಾರೆ. ರಾಜಕೀಯ, ಶೈಕ್ಷಣಿಕ, ಸಾಮಾಜಿಕ ಸಮಾನತೆಯೇ ಸಂವಿಧಾನದ ಆಶಯವಾಗಿದೆ. ಆದರೆ, ವ್ಯವಸ್ಥಿತವಾಗಿ ಪ್ರಜಾಪ್ರಭುತ್ವವನ್ನು ಬಿಜೆಪಿ ದುರುಪಯೋಗ ಮಾಡಿಕೊಳ್ಳುತ್ತಿದೆ. ಈ ದೇಶದ ನೆಲದಲ್ಲಿ ಸೌಹಾರ್ದತೆ ಇದೆ. ಶಿಗ್ಗಾಂವಿ ಸಂತರ ನಾಡು. ಇಲ್ಲಿ ಕೋಮುದ್ವೇಷ ಬೇರೂರುತ್ತಿರುವುದು ಆತಂಕಕಾರಿ” ಎಂದರು.
ಎದ್ದೆಳು ಕರ್ನಾಟಕ ಅಭಿಯಾನದ ಚೆನ್ನಮ್ಮ ಮಾತನಾಡಿ, “ಕಾಂಗ್ರೆಸ್ ಸರ್ಕಾರ ಮಹಿಳೆಯರಿಗೆ ಹಲವಾರು ಯೋಜನೆಗಳನ್ನು ನೀಡಿ ಸಭಲರಾಗಲು ಸಹಾಯ ಮಾಡಿದೆ. ಹಾಗಾಗಿ, ನಾವೆಲ್ಲರೂ ಈ ಉಪಚುನಾವಣೆಯಲ್ಲಿ ಬೆಂಬಲ ನೀಡಿ ಕಾಂಗ್ರೆಸ್ ಗಲ್ಲಿಸೋಣ” ಎಂದರು.