ಕಲ್ಯಾಣ ಕರ್ನಾಟಕ ಜಿಲ್ಲೆಗಳ ಸಮಾಜ ಕಲ್ಯಾಣ, ಹಿಂದುಳಿದಳ ವರ್ಗಗಳ ಕಲ್ಯಾಣ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಅಡಿಯಲ್ಲಿರುವ ಸರ್ಕಾರಿ ಪ್ರಾಥಮಿಕ, ಪದವಿ, ಪದವಿ ಪೂರ್ವ, ಇಂಜಿನಿಯರಿಂಗ್ ಡಿಪ್ಲೋಮಾ, ಮೋರಾರ್ಜಿ, ಕಿತ್ತೂರ ರಾಣಿ ಚೆನ್ನಮ್ಮಾ ವಸತಿ ನಿಲಯಗಳು ಮತ್ತು ವಸತಿ ಶಾಲೆಗಳಲ್ಲಿ ರಾತ್ರಿ ಮತ್ತು ಹಗಲು ಹೊತ್ತಿನಲ್ಲಿ ಕಾವಲುಗಾರರನ್ನು ನೇಮಕ ಮಾಡಬೇಕು ಎಂದು ಕಲ್ಯಾಣ ಕರ್ನಾಟಕ ಕಲಾವಿದರ ಒಕ್ಕೂಟದ ಸಂಸ್ಥಾಪಕ ಅಧ್ಯಕ್ಷ ವಿಜಯಕುಮಾರ ಸೋನಾರೆ ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.
ಕಲ್ಯಾಣ ಕರ್ನಾಟಕ ಭಾಗದ ಸರ್ಕಾರಿ ವಸತಿ ಶಾಲೆ ಹಾಗೂ ವಸತಿ ನಿಲಯಗಳಲ್ಲಿ ಪ್ರವೇಶ ಪಡೆದು ವ್ಯಾಸಂಗ ಮಾಡುವ ಬಹುತೇಕ ವಿದ್ಯಾರ್ಥಿಗಳು ಗ್ರಾಮೀಣ ಭಾಗದ ಬಡವರ ಮಕ್ಕಳಾಗಿದ್ದಾರೆ. ಆದರೆ ವಸತಿ ನಿಲಯ ಹಾಗೂ ಶಾಲೆಗಳಲ್ಲಿ ಕಾವಲುಗಾರರು ಇಲ್ಲದ ಕಾರಣ ವಿದ್ಯಾರ್ಥಿಗಳು ರಾತ್ರಿ ವೇಳೆ ಬೇಕಾಬಿಟ್ಟಿ ಓಡಾಡುವುದು, ತಡರಾತ್ರಿವರೆಗೆ ಹೊರಗಡೆ ಸುತ್ತಾಡಿ ಹಾಸ್ಟೆಲ್ ಬರುವುದು ಮಾಡುತ್ತಿದ್ದಾರೆ” ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
“ವಸತಿ ಶಾಲೆ ಹಾಗೂ ಹಾಸ್ಟೆಲ್‌ಗಳಲ್ಲಿ ರಾತ್ರಿ ಕಾವಲುಗಾರರು ಇಲ್ಲದ ಕಾರಣ ಬಡಾವಣೆಯ ಪುಂಡರು ಹಾಸ್ಟೆಲ್ ಆವರಣಗಳಲ್ಲಿ ಸರಾಯಿ ಕುಡಿಯುವುದು, ಅನೈತಿಕ ಚಟುವಟಿಕೆಗಳು ನಡೆಸುವ ಮೂಲಕ ಅವ್ಯವಸ್ಥೆಯ ತಾಣವಾಗಿ ಮಾಡುತ್ತಿದ್ದಾರೆ. ಇದರಿಂದ ನಿಲಯದ ಪ್ರತಿಭಾವಂತ ವಿದ್ಯಾರ್ಥಿಗಳ ಮೇಲೆ ಪರಿಣಾಮ ಬೀರಿ ವಿದ್ಯಾಭ್ಯಾಸಕ್ಕೆ ಅಡಚಣೆ ಉಂಟಾಗುತ್ತಿದೆ. ರಾತ್ರಿ ಕಾವಲುಗಾರರನ್ನು ನೇಮಿಸಿದರೆ ಹಾಸ್ಟೆಲ್ ಆವರಣದೊಳಗೆ ಅನಧಿಕೃತ ವ್ಯಕ್ತಿಗಳು ಪ್ರವೇಶಿಸುವುದಿಲ್ಲ. ವಸತಿ ವಿದ್ಯಾರ್ಥಿಗಳಿಗೂ ಸುರಕ್ಷಿತವಾಗಿರಲು ಅನುಕೂಲವಾಗುತ್ತದೆ” ಎಂದು ಹೇಳಿದ್ದಾರೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ದುಬಾರಿ ಚುನಾವಣೆಗಳು, ಸಾಮಾನ್ಯರ ಸ್ಪರ್ಧೆ ಮತ್ತು ಪ್ರಜಾಪ್ರಭುತ್ವ ವ್ಯವಸ್ಥೆ
ವಿದ್ಯಾರ್ಥಿಗಳ ಉಜಲ್ವ ಭವಿಷ್ಯಕ್ಕಾಗಿ ರಾಜ್ಯ ಸರ್ಕಾರ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಕೂಡಲೇ ವಸತಿ ನಿಲಯ ಹಾಗೂ ವಸತಿ ಶಾಲೆಗಳಿಗೆ ರಾತ್ರಿ ಕಾವಲುಗಾರರ ನೇಮಕಾತಿಗೆ ಮುಂದಾಗಬೇಕು ಎಂದು ಆಗ್ರಹಿಸಿದ್ದಾರೆ.