ವಿಜಯಪುರದ ರಾಜ್‌ಗುರು ಮೆಕ್ಕೆಜೋಳ ಸಂಸ್ಕರಣಾ ಘಟಕದಲ್ಲಿ ಏಳು ಮಂದಿ ಕಾರ್ಮಿಕರು ಸಾವನ್ನಪ್ಪಿದ್ದು, ಅವರ ಸಾವಿಗೆ ಕಾರಣನಾದ ಮಾಲೀಕರನ್ನು ಬಂಧಿಸಬೇಕು ಎಂದು ಹಲವಾರು ಸಂಘಟನೆಗಳ ಮುಖಂಡರು ಆಗ್ರಹಿಸಿದ್ದಾರೆ.
ದುರಂತ ಘಟನೆಯನ್ನು ಖಂಡಿಸಿರುವ ಎಐಡಿವೈಒ ಮುಖಂಡ ಸಿದ್ದಲಿಂಗ ಬಾಗೇವಾಡಿ, “ದೇಶದ ನಾನಾ ಭಾಗದ ಜನರು ಉದ್ಯೋಗಕ್ಕಾಗಿ ರಾಜ್ಯಕ್ಕೆ ವಲಸೆ ಬರುತ್ತಾರೆ. ಆ ವಲಸೆ ಕಾರ್ಮಿಕರಿಗಾಗಿ ಸರ್ಕಾರ ಯಾವುದೇ ಕಾಯ್ದೆ ರೂಪಿಇಲ್ಲ. ಅವರೆಲ್ಲರ ಬದುಕು ಅತಂತ್ರವಾಗಿದೆ. ಈ ದುರ್ಘಟನೆಯ ವಿಚಾರದಲ್ಲಿ ಜಿಲ್ಲಾಡಳಿತ ಯಾವುದೇ ಪ್ರಭಾವಕ್ಕೆ ಒಳಗಾಗದೆ, ಗೋದಾಮು ಮಾಲೀಕರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು” ಎಂದಿದ್ದಾರೆ.
“ಗೋದಾಮು ಹಳೆಯದಾಗಿದ್ದು, ಸುಸ್ಥಿತಿಯಲ್ಲಿಲ್ಲ. ಅಂತಹ ಗೋದಾಮಿನಲ್ಲಿ ರೈತರ ಬೆಳೆಗಳನ್ನು ದಾಸ್ತಾನು ಮಾಡಲಾಗುತ್ತಿದೆ. ಇದು ಅಕ್ಷಮ್ಯ ಅಪರಾಧ. ಗೋದಾಮನ್ನು ಕಾರ್ಮಿಕ ಅಧಿಕಾರಿಗಳು ಪರಿಶೀಲನೆ ಮಾಡದಿರುವುದು ಖಂಡನೀಯ” ಎಂದು ಡಿಸಿಸಿ ಬ್ಯಾಂಕ್ ಮಾಜಿ ನಿರ್ದೇಶಕ ಭೀರಪ್ಪ ಜುಮನಾಳ ಕಿಡಿಕಾರಿದ್ದಾರೆ.
ಬಡ ಕಾರ್ಮಿಕರನ್ನು ಹಗಲು ರಾತ್ರಿ ಎನ್ನದೆ ರಾಜ್‌ಗುರು ಎಂಬ ದಲ್ಲಾಳಿ ದುಡಿಸಿಕೊಂಡಿದ್ದಾರೆ. ಕಾರ್ಮಿಕರಿಗೆ ಕನಿಷ್ಠ ಸೌಲಭ್ಯಗಳನ್ನು ನೀಡದೇ ಇರುವುದು ಖಂಡನೀಯ. ಮೃತ ಕಾರ್ಮಿಕರ ಕುಟುಂಬಗಳಿಗೆ ತಲಾ ₹10 ಲಕ್ಷ ರೂ. ಪರಿಹಾರ ನೀಡಬೇಕು” ಎಂದು ಒತ್ತಾಯಿಸಿದ್ದಾರೆ.