ವರದಕ್ಷಿಣೆಗಾಗಿ ಪಟ್ಟು ಹಿಡಿದಿದ್ದ ವರ ಜೈಲು ಪಾಲಾಗಿರುವ ಘಟನೆ ಬೆಳಗಾವಿ ಜಿಲ್ಲೆಯ ಖಾನಾಪುರದಲ್ಲಿ ನಡೆದಿದೆ. ಮದುವೆ ಮುರಿದುಬಿದ್ದಿದೆ.
ಮೂರು ದಿನಗಳ ಹಿಂದೆ ಘಟನೆ ನಡೆದಿದ್ದು, ಇದೀಗ ಬೆಳಕಿಗೆ ಬಂದಿದೆ. ವರದಕ್ಷಿಣೆಗಾಗಿ ಪಟ್ಟು ಹಿಡಿದಿದ್ದ ವರನ ಕುಟುಂಬದ ವಿರುದ್ಧ ವಧುವಿನ ಪೋಷಕರು ದೂರು ನೀಡಿದ್ದು, ವರ ಸಚಿನ್ ಪಾಟೀಲ್‌ನನ್ನು ಖಾನಾಪುರ ಪೊಲೀಸರು ಬಂಧಿಸಿದ್ದಾರೆ.
ಖಾನಾಪುರದ ಕಲ್ಯಾಣ ಮಂಟಪದಲ್ಲಿ ಮೂರು ದಿನಗಳ ಹಿಂದಿನ ದಿನಾಂಕಕ್ಕೆ ಮದುವೆ ನಿಶ್ಚಯವಾಗಿತ್ತು. ಮದುವೆ ನಿಶ್ಚಿತಾರ್ಥದ ವೇಳೆ, 50 ಗ್ರಾಂ ಚಿನ್ನ ಮತ್ತು ಒಂದು ಲಕ್ಷ ರೂ. ಹಣವನ್ನು ವರದಕ್ಷಿಣೆಯಾಗಿ ನೀಡುವ ಮಾತುಕತೆಯಾಗಿತ್ತು ಎಂದು ತಿಳಿದುಬಂದಿದೆ.
ಆದರೆ, ಮದುವೆ ಸಮೀಪಿಸುತ್ತಿದ್ದಂತೆ ವರನ ಕುಟುಂಬದ ಬೇಡಿಕೆ ಹೆಚ್ಚಾಗಿತ್ತು. 100 ಗ್ರಾಂ ಚಿನ್ನ ಮತ್ತು 10 ಲಕ್ಷ ರೂ. ಹಣವನ್ನು ವರದಕ್ಷಿಣೆ ನೀಡಬೇಕೆಂದು ವರನ ಕುಟುಂಬ ಪಟ್ಟು ಹಿಡಿದಿತ್ತು ಎಂದು ಹೇಳಲಾಗಿದೆ.
ಇದರಿಂದ ಬೇಸತ್ತ ವಧು ಪೋಷಕರು ಖಾನಾಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ವರನನ್ನು ಬಂಧಿಸಿದ್ದು, ಹಿಂಡಗಲಾ ಜೈಲಿಗೆ ಕಳಿಸಿದ್ದಾರೆ.