ಸದಾಶಿವ ಆಯೋಗದ ವರದಿ ಮತ್ತು ಕಾಂತರಾಜ್ ಆಯೋಗದ ವರದಿಯನ್ನು ಜಾರಿ ಮಾಡಬೇಕು ಹಾಗೂ ಒಳ ಮೀಸಲಾತಿ ಒದಗಿಸಬೇಕು ಎಂದು ಬಹುಜನ ಸಮಾಜ ಪಾರ್ಟಿ ಒತ್ತಾಯಿಸಿದೆ.
ವಿಜಯಪುರದಲ್ಲಿ ಪ್ರತಿಭಟನೆ ನಡೆಸಿದ ಪಕ್ಷದ ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿಗೆ ಹಕ್ಕೊತ್ತಾಯ ಸಲ್ಲಿಸಿದ್ದಾರೆ. ಪ್ರತಿಭಟನೆಯಲ್ಲಿ ಮಾತನಾಡಿದ ಪಕ್ಷದ ರಾಜ್ಯ ಕಾರ್ಯದರ್ಶಿ ಕಲ್ಲಪ್ಪ ತೊರವಿ, “ಪರಿಶಿಷ್ಟ ಜಾತಿಯ 101 ಜಾತಿಗಳಲ್ಲಿ ಮಾದಿಗ ಹಾಗೂ ಮಾದಿಗ ಸಂಬಂಧಿತ ಜಾತಿಗಳಲ್ಲಿ ಹೆಚ್ಚು ಜನಸಂಖ್ಯೆ ಇದೆ” ಎಂದು ತಿಳಿಸಿದ್ದಾರೆ.
“ಕೆಲವು ಐತಿಹಾಸಿಕ ಕಾರಣಗಳಿಂದ ಮಾದಿಗ ಸಮುದಾಯಕ್ಕೆ ಶಿಕ್ಷಣ, ಸರ್ಕಾರಿ ಸೇವೆ, ರಾಜಕೀಯ ಹಾಗೂ ವಿವಿಧ ರಂಗಗಳಲ್ಲಿ ಸೂಕ್ತ ಪ್ರಾತಿನಿಧ್ಯ ಸಿಕ್ಕಿಲ್ಲ. ಹೀಗಾಗಿ, ಸಮುದಾಯ ಹಿಂದುಳಿದಿದೆ” ಎಂದರು.
ಪಕ್ಷದ ಜಿಲ್ಲಾಧ್ಯಕ್ಷ ಹಣಮಂತ ಬೊಮ್ಮನಜೋಗಿ ಮಾತನಾಡಿ, “ಚುನಾವಣೆ ಸಮಯದಲ್ಲಿ ಮಾದಿಗ ಮತ್ತು ಮಾದಿಗ ಸಂಬಂಧಿತ ಜಾತಿಗಳಿಗೆ ಆಗಿರುವ ಅನ್ಯಾಯವನ್ನು ಸರಿಪಡಿಸಿ ಸದಾಶಿವ ಆಯೋಗದ ವರದಿಯನ್ನು ಜಾರಿ ಮಾಡುವುದಾಗಿ ಕಾಂಗ್ರೆಸ್, ಜೆಡಿಎಸ್, ಬಿಜೆಪಿ ತಮ್ಮ ಪ್ರಣಾಳಿಕೆಯಲ್ಲಿ ಘೋಷಣೆ ಮಾಡಿದ್ದವು. ಆದರೆ, ಗೆದ್ದ ನಂತರ ಮೌನವಾಗಿವೆ. ಸಮಾಜಕ್ಕೆ ನಿರಂತರವಾಗಿ ದ್ರೋಹ ಮಾಡುತ್ತಾ ಬಂದಿವೆ” ಎಂದು ಕಿಡಿಕಾರಿದರು.
ಪ್ರತಿಭಟನೆಯಲ್ಲಿ ಯಶ್ವಂತ್ ಪೂಜಾರಿ, ಮಹಾಂತೇಶ್ ಎಂಟಮಾನ,ಮಂಜುನಾಥ್ ಹೊಸಮನಿ,ವಿಠ್ಠಲ್ ಸಂದಿಮನಿ, ಸದಾನಂದ್ ಕಿರಾಗ, ನಾಗರಾಜ ಮಾದರ, ಎಂ ಆರ್ ದೊಡ್ಮನಿ, ಚಂದ್ರಕಾಂತ್ ಕಾಂಬಳೆ, ಸದಾಶಿವು ಭೀಮಸಿ, ರಮೇಶ್ ಬೆಳ್ಳನವರ್, ರಮೇಶ್ ಐನಪುರ್,ಆನಂದ ಕೊಳಲಿ, ರಘುನಾಥ ಪ್ರಕಾಶ್ ಬೆಳಕನ್ನವರ್, ಪ್ರಕಾಶ್ ಮರಡಿ, ನಿತೀಶ್ ದೊರವಿ, ಪ್ರಶಾಂತ್ ಚಲವಾದಿ, ಸಿದ್ದು ಅಲಗೂರ್, ನಿಂಗಪ್ಪ ಹರಿಜನ್, ಚಂದ್ರಶೇಖರ್ ದೇವರು, ಸಂತೋಷ್ ಮೇಲಿನಮನಿ, ದೇವಪ್ಪ ಮಾದರ, ಹುಲಿಗಪ್ಪ ಗುಡಿಮನಿ ಇದ್ದರು.