ಪ್ರಚೋದನಕಾರಿ ಭಾಷಣ ಮಾಡಿರುವ ಆರೆಸ್ಸೆಸ್ಸ್ ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್ ಅವರನ್ನು ಬಂಧಿಸಬೇಕು. ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ದಾವಣಗೆರೆ ಮುಸ್ಲಿಂ ಒಕ್ಕೂಟ ಒತ್ತಾಯಿಸಿದೆ.
ದಾವಣಗೆರೆಯಲ್ಲಿ ಪ್ರತಿಭಟನೆ ನಡೆಸಿದ ಒಕ್ಕೂಟದ ಕಾರ್ಯಕರ್ತರು ಜಿಲ್ಲಾಧಿಕಾರಿಗೆ ಹಕ್ಕೊತ್ತಾಯ ಪತ್ರ ಸಲ್ಲಿಸಿದ್ದಾರೆ. ಪ್ರತಿಭಟನೆಯಲ್ಲಿ ಮಾತನಾಡಿದ ಒಕ್ಕೂಟದ ಸಂಚಾಲಕ ಟಿ.ಅಸ್ಗರ್, “ಶ್ರೀರಂಗಪಟ್ಟಣದಲ್ಲಿ ಮಾತನಡಿದ್ದ ಕಲ್ಲಡ್ಕ ಪ್ರಭಾಕರ್ ಭಟ್, ‘ಮುಸ್ಲಿಂ ಹೆಣ್ಣು ಮಕ್ಕಳಿಗೆ ಪರ್ಮನೆಂಟ್ ಗಂಡ ಇರಲಿಲ್ಲ. ಅವರಿಗೆ ಪರ್ಮನೆಂಟ್ ಗಂಡ ಕೊಟ್ಟಿದ್ದು ಪ್ರಧಾನಿ ನರೇಂದ್ರ ಮೋದಿ’ ಎಂದು ಮುಸ್ಲಿಮರ ಧಾರ್ಮಿಕ ಭಾವನೆಗೆ ಧಕ್ಕೆ ತರುವ ಮಾತನಾಡಿದ್ದಾರೆ. ವಿವಾಹಿತ ಮಹಿಳೆಯರ ಲೈಂಗಿಕ ಜೀವನವನ್ನು ಬಹಿರಂಗವಾಗಿ ಅವಮಾನಿಸಿದ್ದಾರೆ. ಆತನನ್ನು ಬಂಧಿಸಿ, ಕ್ರಮ ಕೈಗೊಳ್ಳಬೇಕು” ಎಂದು ಆಗ್ರಹಿಸಿದ್ದಾರೆ.
ತಂಜಿಮ್ ಕಮಿಟಿ ಕಾರ್ಯದರ್ಶಿ ಶಾನವಾಜ್ ಖಾನ್ ಮಾತನಾಡಿ, “ಪ್ರಪಂಚದಲ್ಲಿ ಹೆಣ್ಣಿಗೆ ಪೂಜೆ ಮಾಡುವ ಏಕೈಕ ದೇಶ ಭಾರತ. ಇಂತಹ ದೇಶದಲ್ಲಿ ಹುಟ್ಟಿದ ಕಲ್ಲಡ್ಕ ಪ್ರಭಾಕರ್ ಭಟ್‌ಗೆ ಆರ್‌ಎಸ್‌ಎಸ್ ಇಂತಹ ಹೊಲಸು ಮಾತುಗಳನ್ನು ಕಲಿಸಿದೆ. ಧರ್ಮ ಧರ್ಮಗಳಲ್ಲಿ ವಿಷ ಬೀಜ ಬಿತ್ತಿ, ಶಾಂತಿಯ ರಾಜ್ಯದಲ್ಲಿ ಕೋಮು ಗಲಭೆ ನಡೆಸಲು ಪ್ರಯತ್ನಿಸುತ್ತಿರುವ ಕೋಮುವಾದಿ ಕಲ್ಲಡ್ಕ ಪ್ರಭಾಕರ್ ಭಟ್‌ನನ್ನು ತಕ್ಷಣ ಬಂಧಿಸಬೇಕು” ಎಂದು ಒತ್ತಾಯಿಸಿದ್ದಾರೆ.
ಒಕ್ಕೂಟದ ಮುಖಂಡ ಮಹಮ್ಮದ್ ಶೋಯೇಬ್ ಮಾತನಾಡಿ, “ಹಿಜಾಬ್ ವಿಷಯದಲ್ಲಿ ಬೆಳಕಿಗೆ ಬಂದಿದ ಮಂಡ್ಯದ ಮುಸ್ಕಾನ್ ಎಂಬ ವಿಧ್ಯಾರ್ಥಿನಿ ಕಾಲೇಜಿಗೆ ಬಂದರೆ ಹಲ್ಲೆ ಮಾಡುವುದಾಗಿ ಕಲ್ಲಡ್ಕ ಪ್ರಭಾಕರ್ ಭಟ್ ನೇರವಾಗಿ ಧಮಕಿ ಹಾಕಿದ್ದಾನೆ. ಯುವ ಪೀಳಿಗೆಗೆ ಕೋಮುವಾದಿ ಪಾಠ ಮಾಡಿ ಹಾದಿ ತಪ್ಪಿಸುವ ವಿಷ ಜಂತು ಕಲ್ಲಡ್ಕ ಪ್ರಭಾಕರ್ ಭಟ್ ವಿರುದ್ಧ ಕ್ರಮ ಕೈಗೊಳ್ಳಬೇಕು” ಎಂದು ಆಗ್ರಹಿಸಿದ್ದಾರೆ.
ಪ್ರತಿಭಟನೆಯಲ್ಲಿ ರಜ್ವಿ ರಿಯಾಜ್ ಸಾಬ್, ಇಸ್ಮಾಯಿಲ್ ಜಬೀವುಲ್ಲಾ, ಹಾಕಿ ಸೈಯದ್ ಆರೀಫ್, ಆದಿಲ್ ಖಾನ್, ಮಹಮ್ಮದ್ ಹಯಾತ್, ಇನಯಾತ್ ಅಲಿ ಖಾನ್, ಕೆ.ಹೆಚ್. ಮೆಹಬುಬ್, ಬ್ಯಾಟರಿ ಜಬೀವುಲ್ಲಾ, ಕಲಿಂವುಲ್ಲಾ ಖಾನ್, ಮನ್ಸೂರ್, ನವೀದ್, ಅಜ್ಮತ್, ದದೇಶ, ತಮನ ರಫೀಕ್, ಹೈದರ್, ಎನ್. ಉಸ್ಮಾನ್, ನೂರ್ ಅಯುಬ್ ಬುತ್ತಿ ಇತರರು ಇದ್ದರು.