ಸರ್ಕಾರಿ ನೌಕರರ ಸಂಧ್ಯಾಕಾಲದ ಬದುಕಿಗೆ ಮಾರಕವಾಗಿರುವ ಅವೈಜ್ಞಾನಿಕ ವ್ಯವಸ್ಥೆಯಿಂದ ಕೂಡಿರುವ ಎನ್.ಪಿ.ಎಸ್ ಯೋಜನೆಯನ್ನು ರದ್ದುಪಡಿಸಿ ಹಳೆಯ ಪಿಂಚಣಿ ಯೋಜನೆಯನ್ನು ಮರು ಜಾರಿಗೊಳಿಸಬೇಕೆಂದು ಆಗ್ರಹಿಸಿ ರಾಜ್ಯ ಸರ್ಕಾರಿ ಎನ್.ಪಿ.ಎಸ್.ನೌಕರರ ಸಂಘ ಒತ್ತಾಯಿಸಿದೆ.
ಬೀದರ ಜಿಲ್ಲಾ ಘಟಕ ಹಾಗೂ ಭಾಲ್ಕಿ ತಾಲೂಕು ಘಟಕದ ಪದಾಧಿಕಾರಿಗಳು ಭಾಲಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಬಿ.ಖಂಡ್ರೆ ಅವರಿಗೆ ಹಕ್ಕೊತ್ತಾಯ ಪತ್ರ ಸಲ್ಲಿಸಿದರು.
“ಕಾಂಗ್ರೆಸ್ ಪಕ್ಷದ ಪ್ರಣಾಳಿಕೆಯಂತೆ ಮುಂಬರುವ ರಾಜ್ಯ ಸರ್ಕಾರದ ಸಚಿವ ಸಂಪುಟ ಸಭೆಯಲ್ಲಿ ಎನ್.ಪಿ.ಎಸ್ ಯೋಜನೆಯನ್ನು ರದ್ದುಪಡಿಸಿ ಹಳೆಯ ಪಿಂಚಣಿ ಯೋಜನೆಯನ್ನು ಜಾರಿಗೊಳಿಸುವ ವಿಷಯವನ್ನು ಚರ್ಚಿಸಬೇಕು. ಈಗಾಗಲೇ ಎನ್.ಪಿ.ಎಸ್. ಯೋಜನೆಯನ್ನು ರಾಜಸ್ಥಾನ, ಛತ್ತಿಸಘಡ, ಪಂಜಾಬ್ ಮತ್ತು ಹಿಮಾಚಲ ಪ್ರದೇಶ ಮುಂತಾದ ರಾಜ್ಯ ಸರ್ಕಾರಗಳು ಎನ್.ಪಿ.ಎಸ್ ರದ್ದುಪಡಿಸಿ ಹಳೆಯ ಪಿಂಚಣಿ ಯೋಜನೆಯನ್ನು ಜಾರಿಗೊಳಿಸಿವೆ” ಎಂದು ತಿಳಿಸಿದರು.
“ರಾಜ್ಯದಲ್ಲಿ 2.65 ಲಕ್ಷ ಎನ್.ಪಿ.ಎಸ್ ನೌಕರರು, ನಿಗಮ ಮಂಡಳಿ ನೌಕರರು ಮತ್ತು ಸ್ವಾಯತ್ತ ಸಂಸ್ಥೆಯ ನೌಕರರು ಎನ್.ಪಿ.ಎಸ್ ರದ್ದುಪಡಿಸುವ ಬಗ್ಗೆ ಬಕ ಪಕ್ಷಿಯಂತೆ ಕಾಯುತ್ತಾ ಕುಳಿತಿದ್ದಾರೆ. ಸರಕಾರ ಪ್ರಣಾಳಿಕೆಯಲ್ಲಿ ತಿಳಿಸಿರುವ ಭರವಸೆಯಂತೆ ಎನ್.ಪಿ.ಎಸ್ ಯೋಜನೆಯನ್ನು ರದ್ದುಪಡಿಸಿ ಹಳೆಯ ಪಿಂಚಣಿ ಯೋಜನೆಯನ್ನು ಮರು ಜಾರಿಗೊಳಿಸಬೇಕೆಂದು” ಆಗ್ರಹಿಸಿದರು.
ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ ಸಚಿವರು ಈಗಾಗಲೇ ಮುಖ್ಯ ಮಂತ್ರಿಯವರು ಎನ್.ಪಿ.ಎಸ್ ರದ್ದುಪಡಿಸುವುದಾಗಿ ಸ್ಪಷ್ಟವಾಗಿ ಹೇಳಿದ್ದಾರೆ. ಆದರೂ ಎನ್.ಪಿ.ಎಸ್ ಮತ್ತು ರಾಜ್ಯ ಸರ್ಕಾರಿ ನೌಕರರ ಸಂಘದ ಮನವಿಯಂತೆ ಎನ್.ಪಿ.ಎಸ್ ನೌಕರರ ಪರವಾಗಿ ಮುಖ್ಯಮಂತ್ರಿಗಳಿಗೆ ಒತ್ತಾಯಿಸುವುದಾಗಿ ಭರವಸೆ ನೀಡಿದರು.
ಈ ಸುದ್ದಿ ಓದಿದ್ದೀರಾ? ಜ.19ರಂದು ಕರ್ನಾಟಕಕ್ಕೆ ಮೋದಿ ಭೇಟಿ; ‘ನಿದ್ದೆಯಿಂದ ಎದ್ದೇಳಿ ಮೋದಿ’ ಪೋಸ್ಟರ್‌ಗಳು ವೈರಲ್
ಈ ಸಂದರ್ಭದಲ್ಲಿ ಎನ್.ಪಿ.ಎಸ್ ನೌಕರರ ಸಂಘದ ಜಿಲ್ಲಾ ಅಧ್ಯಕ್ಷ ಪ್ರಕಾಶ ಮಹಿಮಾಕರ, ಕಾರ್ಯದರ್ಶಿ ಚಂದ್ರಕಾಂತ ತಳವಾಡೆ, ರಾಜಕುಮಾರ ಕರುಣಾಸಾಗರ, ರಾಜ್ಯ ಸರಕಾರಿ ನೌಕರರ ಸಂಘದ ತಾಲ್ಲೂಕು ಗೌರವ ಅಧ್ಯಕ್ಷ ಸುನಿಲಕುಮಾರ ಬಿರಾದಾರ, ಅಧ್ಯಕ್ಷ ರಾಜಕುಮಾರ ಪಾಟೀಲ, ಖಜಾಂಚಿ ರಮೇಶ ಬೋಗಾರ,ಕರ್ನಾಟಕ ಪ್ರೌಢ ಶಾಲಾ ಶಿಕ್ಷಕರ ಸಂಘದ ತಾಲ್ಲೂಕು ಅಧ್ಯಕ್ಷ ದತ್ತಾತ್ರಿ ಕಾಟಕರ, ಪ್ರಾ.ಶಾ.ಶಿ.ಸಂಘದ ತಾಲ್ಲೂಕು ಅಧ್ಯಕ್ಷ ಸೂರ್ಯಕಾಂತ ಸುಂಟೆ, ಎನ್.ಪಿ.ಎಸ್.ನೌಕರರ ಸಂಘದ ಅಧ್ಯಕ್ಷ ರಾಜಕುಮಾರ ಮಾನೆ,ಕಾರ್ಯದರ್ಶಿ ಸೋಮನಾಥ ವರ್ಧಾ ಸೇರಿದಂತೆ ಶಿಕ್ಷಣ, ಆರೋಗ್ಯ, ಕಂದಾಯ, ಪಶುವೈದ್ಯಕಿಯ, ಸಮಾಜ ಕಲ್ಯಾಣ ಇಲಾಖೆಯ ನೌಕರರು ನಿರ್ದೇಶಕರು, ಪದಾಧಿಕಾರಿಗಳು ಉಪಸ್ಥಿತರಿದ್ದರು.