ಮಾಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಕೂಲಿ ಕಾರ್ಮಿಕರಿಗೆ 100 ರಿಂದ 150 ಮಾನವ ದಿನಗಳು ಹೆಚ್ಚುವರಿ ಕೆಲಸ ಒದಗಿಸುವಂತೆ ಗ್ರಾಮೀಣ ಕೂಲಿಕಾರರ ಸಂಘ ಬೀದರ್ ಜಿಲ್ಲಾ ಘಟಕ ಸಿಎಂ ಸಿದ್ದರಾಮಯ್ಯ ಅವರನ್ನು ಒತ್ತಾಯಿಸಿದೆ.
ಶನಿವಾರ ಭಾಲ್ಕಿ ಪಟ್ಟಣದಲ್ಲಿ ಜರುಗಿದ ಮಾಜಿಸ ಸಚಿವ ಡಾ.ಭೀಮಣ್ಣಾ ಖಂಡ್ರೆಯವರ ಜನ್ಮ ಶತಮಾನೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಈ ವೇಳೆ ಗ್ರಾಕೂಸ್ ಬೀದರ್ ಜಿಲ್ಲಾ ಸಂಚಾಲಕಿ ಸಪನಾ ದೀಪ ನೇತ್ರತ್ವದಲ್ಲಿ ಸಿಎಂ ಅವರಿಗೆ ಹಕ್ಕೊತ್ತಾಯ ಪತ್ರವನ್ನು ಸಲ್ಲಿಸಿದರು.
“ಜಿಲ್ಲೆಯ 8 ತಾಲೂಕು ಈಗಾಗಲೇ ಬರಪೀಡಿತ ತಾಲೂಕು ಎಂದು ಘೋಷಣೆಯಾಗಿದೆ. ಮೊದಲೇ ಆರ್ಥಿಕ ಸಂಕಷ್ಟ ಎದುರಿಸುತ್ತಿರುವ ಬಡ ಕೂಲಿ ಕಾರ್ಮಿಕರು ಜಮೀನಿನಲ್ಲಿ ಯಾವುದೇ ಕೆಲಸವಿಲ್ಲದೆ ಅತಂತ್ರ ಸ್ಥಿತಿಯಲ್ಲಿದ್ದು ನಗರಗಳಿಗೆ ಗುಳೆ ಹೋಗುವ ಯೋಚನೆಯಲ್ಲಿದ್ದಾರೆ. ಆದರೆ ಮನರೇಗಾ ಅಡಿಯಲ್ಲಿ ಕೆಲಸ ನಿರ್ವಹಿಸುತ್ತಿರುವ ಕೂಲಿ ಕಾರ್ಮಿಕರು 100 ದಿನಗಳ ಕೂಲಿ ಕೆಲಸ ಪೂರ್ಣಗೊಂಡಿಲ್ಲ. ಮನರೇಗಾ ಸಮರ್ಪಕವಾಗಿ ಅನುಷ್ಠಾನಗೊಳಿಸುವಲ್ಲಿ ಎಲ್ಲಾ ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳು ಹಾಗೂ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ವಿಫಲರಾಗಿದ್ದಾರೆ” ಎಂದು ದೂರಿದರು.
ರಾಜ್ಯದಲ್ಲಿ ಬಹುತೇಕ ತಾಲೂಕಿನಲ್ಲಿ ಬರ ಆವರಿಸಿದ ಹಿನ್ನಲೆಯಲ್ಲಿ ತಮ್ಮ ಸರ್ಕಾರ ಈಗಾಗಲೇ ಮನರೇಗಾ ಯೋಜನೆಯಡಿ 100 ರಿಂದ 150 ಮಾನವ ದಿನಗಳು ಹೆಚ್ಚುವರಿಯಾಗಿ ನೀಡಲು ನಿರ್ಧರಿಸಿದೆ. ಹೀಗಾಗಿ ಕೂಡಲೇ ಕೂಲಿಕಾರರ ಪರಿಸ್ಥಿತಿ ಮನವರಿಕೆ ಮಾಡಿಕೊಂಡು 100 ರಿಂದ 150 ಹೆಚ್ಚುವರಿ ಮಾನವ ದಿನಗಳು ಹೆಚ್ಚುವರಿಯಾಗಿ ಆದೇಶಿಸಿ ತಕ್ಷಣ ಜಾರಿಗೊಳಿಸಬೇಕು. ತಾಲೂಕು ಮಟ್ಟದ ಅಧಿಕಾರಿಗಳಿಗೆ ಉದ್ಯೋಗ ಖಾತ್ರಿ ಯೋಜನೆಯಡಿ ದುಡಿಯುವ ಕೈಗಳಿಗೆ ಕೆಲಸ ಕೊಡುವಂತೆ” ಸೂಚಿಸಬೇಕೆಂದು ಆಗ್ರಹಿಸಿದರು.
ಈ ಸುದ್ದಿ ಓದಿದ್ದೀರಾ? ಮಧ್ಯಪ್ರದೇಶ | ಬಿಜೆಪಿಗೆ ಭಾರೀ ಮುನ್ನಡೆ; ಲೋಕಸಭೆಯಲ್ಲೂ ಗೆಲ್ಲುತ್ತೇವೆ ಎನ್ನುತ್ತಿದೆ ಕೇಸರಿ ಪಡೆ
ಗ್ರಾಮೀಣ ಕೂಲಿಕಾರರ ಸಂಘದ ಜಿಲ್ಲಾ ಸಂಯೋಜಕಿ ಸಪನಾ ದೀಪ ಸೇರಿದಂತೆ ವಿವಿಧ ತಾಲೂಕಿನ ಕಾರ್ಯಕರ್ತರು ಇದ್ದರು.