ಗದಗ ಜಿಲ್ಲೆಯ ಮುಂಡರಗಿ ತಾಲೂಕು ಅಭಿವೃದ್ಧಿಯಿಂದ ಹಿಂದುಳಿದಿದ್ದು, ಬರಪೀಡಿತವೂ ಆಗಿರುವುದರಿಂದ ಮುಂಡರಗಿ ತಾಲೂಕನ್ನು ರಾಜ್ಯ ಸರ್ಕಾರ ಬರಗಾಲ ಪ್ರದೇಶವೆಂದು ಘೋಷಿಸಬೇಕೆಂದು ಆಗ್ರಹಿಸಿ ವಿಶ್ವ ಕನ್ನಡ ರಕ್ಷಣಾ ವೇದಿಕೆ ಕಾರ್ಯಕರ್ತರು ತಹಶೀಲ್ದಾರ್ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಿದರು.
“ಸತತ ಬರಗಾಲವನ್ನು ಅನುಭವಿಸುತ್ತಾ ಬಂದಿರುವ ಮುಂಡರಗಿ ತಾಲೂಕನ್ನು ರಾಜ್ಯ ಸಕಾರವು ಬರಗಾಲ ಪಟ್ಟಿಯಲ್ಲಿ ಕೈ ಬಿಟ್ಟಿದ್ದು, ತಾಲೂಕಿಗೆ ಧೋರಣೆ ಮಾಡುತ್ತಿದೆ. ಗದಗ ಜಿಲ್ಲೆಯಲ್ಲಿಯ 6 ತಾಲೂಕುಗಳನ್ನು ಬರಗಾಲ ಪ್ರದೇಶವೆಂದು ಘೋಷಣೆ ಮಾಡಿದ್ದು, ಜಿಲ್ಲೆಯಲ್ಲಿಯೇ ಅತ್ಯಂತ ಬರಗಾಲ ಅನುಭವಿಸುತ್ತಿರುವ ಮುಂಡರಗಿ ತಾಲೂಕನ್ನು ಕೈ ಬಿಟ್ಟು ರಾಜ್ಯ ಸಕಾರ ಅನ್ಯಾಯ ಮಾಡಿದೆ” ಎಂದು ಸಂಘಟನಾಕಾರರು ಆರೋಪಿಸಿದರು.
“ಮುಂಡರಗಿ ತಾಲೂಕನ್ನು ಬರಗಾಲ ಪ್ರದೇಶವೆಂದು ಘೋಷಣೆ ಮಾಡುವುದರೊಂದಿಗೆ ತಾಲೂಕಿನ ರೈತರಿಗೆ ಹಾಗೂ ರೈತ ಕಾರ್ಮಿಕರಿಗೆ ವಿಷೇಶ ಪ್ಯಾಕೇಜ್ ಘೋಷಣೆ ಮಾಡಬೇಕು” ಎಂದು ಒತ್ತಾಯಿಸಿದರು.
“ರೈತರಿಗೆ ಕಳಪೆ ಬಿತ್ತನೆ ಬೀಜ ಹಾಗೂ ಕಳಪೆ ರಸಗೊಬ್ಬರಗಳನ್ನು ಪೂರೈಕೆ ಮಾಡುತ್ತಿದ್ದು, ಇದರಿಂದಲೂ ಕೂಡ ರೈತರು ಸಂಪೂರ್ಣ ಹಾನಿ ಅನುಭವಿಸುತ್ತಿದ್ದಾರೆ. ಒಂದು ಕಡೆ ಮಳೆ ಇಲ್ಲದೆ, ಇನ್ನೊಂದು ಕಡೆ ಕಳಪೆ ಬೀಜಗಳಿಂದ ಮುಂಡರಗಿ ತಾಲೂಕಿನ ರೈತರು ಈ ವರ್ಷ ಭಾರೀ ತೊಂದರೆ ಅನುಭವಿಸುತ್ತಿದ್ದಾರೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ಸುದ್ದಿ ಓದಿದ್ದೀರಾ? ಗದಗ | ನವಿಲುತೀರ್ಥ ಜಲಾಶಯದಿಂದ ಮಲಪ್ರಭಾ ಬಲದಂಡೆ ಕಾಲುವೆಗೆ ನೀರು ಬಿಡುಗಡೆ
“ರಾಜ್ಯ ಸರ್ಕಾರ ಕೂಡಲೇ ಮುಂಡರಗಿ ತಾಲೂಕನ್ನು ಬರಗಾಲ ಪ್ರದೇಶವೆಂದು ಘೋಷಣೆ ಮಾಡಬೇಕು. ಇಲ್ಲದಿದ್ದಲ್ಲಿ ಮುಂದಿನ ದಿನಮಾನದಲ್ಲಿ ವಿಶ್ವ ಕನ್ನಡ ರಕ್ಷಣಾ ವೇದಿಕೆ ನೇತೃತ್ವದಲ್ಲಿ ರಾಜ್ಯಾದ್ಯಂತ ಬೃಹತ್ ಹೋರಾಟ ಹಮ್ಮಿಕೊಳ್ಳಬೇಕಾಗುತ್ತದೆ” ಎಂದು ಎಚ್ಚರಿಕೆ ನೀಡಿದರು.
ಈ ಸಂಧರ್ಭದಲ್ಲಿ ಸಂಘಟನೆಯ ಗದಗ ಜಿಲ್ಲಾಧ್ಯಕ್ಷ ಎಂ ಕೆ ತಳಗಡೆ, ಎ ಎಸ್ ಘಟ್ಟ, ಶಿವಪ್ಪ ಉಕ್ಕಲಿ, ರಾಜು ಹಾಳಕೇರಿ, ಹಣಮಂತಪ್ಪ ಕೋಳಿ, ವಾಡುಸಾಬ ಡಂಬಳ, ರಾಜಾಭಕ್ಷಿ ದಂಡಿನ, ಸುಜಾತ ಕೆದರಳ್ಳಿ, ಯಲ್ಲಮ್ಮ ಚಿಕ್ಕಣ್ಣನವರ, ಮಧುಮತಿ ಮಡಿವಾಳರ, ರಾಜೇಶ್ವರಿ ಪಾಟೀಲ ಸೇರಿದಂತೆ ಇತರರು ಇದ್ದರು.