ಸಂಜೀವಿನಿ ನೌಕರರಿಂದ ಬಿಟ್ಟಿ ಜಾಕರಿ ಮಾಡಿಕೊಳ್ಳಲಾಗುತ್ತಿದೆ. ಕಡಿಮೆ ವೇತನ ನೀಡುತ್ತಿದ್ದು, ಘನತೆಯ ಬದುಕು ಇಲ್ಲದಂತಾಗಿದೆ. ಬಿಟ್ಟಿ ಚಾಕರಿ ತೊಲಗಿಸಿ, ಸಮಾನ ಕೆಲಸಕ್ಕೆ ಸಮಾನ ವೇತನ ಒದಗಿಸಬೇಕು. ಸಂಜೀವಿನಿ ನೌಕರರಿಗೆ ನೇಮಕಾತಿ ಆದೇಶ ನೀಡಿ, ಸೇವಾ ಭದ್ರತೆ ಒದಗಿಸಬೇಕು ಎಂದು ಒತ್ತಾಯಿಸಿ ಕರ್ನಾಟಕ ರಾಜ್ಯ ಸಂಜೀವಿನಿ ನೌಕರರ ಹಾಗೂ ಫಲಾನುಭವಿಗಳ ಸಂಘದ ಸದಸ್ಯರು ಪ್ರತಿಭಟನೆ ನಡೆಸಿದ್ದಾರೆ.
ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಪ್ರತಿಭಟನೆ ನಡೆಸಿರುವ ಸಂಘದ ಮುಖಂಡರು ಮತ್ತು ಕಾರ್ಯಕರ್ತರು, “ಸಂಜೀವಿನಿ ನೌಕರರಿಗೆ ಸೇವಾ ಭದ್ರತೆ ಒದಗಿಸುವಂತೆ ಕೌಶಲ್ಯಾಭಿವೃದ್ಧಿ ಸಚಿವ ಡಾ. ಶರಣಪ್ರಕಾಶ್ ಪಾಟೀಲ್ ಹಾಗೂ ಕೌಶಲ್ಯಾಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕರ ಜಂಟಿ ಸಭೆಯಲ್ಲಿ ಒತ್ತಾಯಿಸಿದ್ದೆವು. ಆದರೂ, ಯಾವುದೇ ಪ್ರಯೋಜನವಾಗಿಲ್ಲ. ರಾಜ್ಯ ಬಜೆಟ್‌ನಲ್ಲಿ ಸಂಜೀವಿನಿ ನೌಕರರಿಗೆ ಸೇವಾ ಭದ್ರತೆ ಒದಗಿಸುವ, ಸಮಾನ ವೇತನ ನೀಡುವ ಬಗ್ಗೆ ಪ್ರಸ್ತಾಪಿಸಿಲ್ಲ ಮತ್ತು ಅನುದಾನವನ್ನೂ ನೀಡಿಲ್ಲ” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
“ಕಳೆದ ಹಲವಾರು ವರ್ಷಗಳಿಂದ ಗ್ರಾಮ ಪಂಚಾಯತಿ, ವಾರ್ಡ್ ಮಟ್ಟಗಳಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಮಹಿಳಾ ಸಬಲೀಕರಣದ ಸಂಜೀವಿನಿ ಯೋಜನೆಯ ಜಾರಿಗಾಗಿ ಸಂಜೀವಿನಿ ನೌಕರರು ಕಾರ್ಯನಿರ್ವಹಿಸುತ್ತಿದ್ದೇವೆ. ಮುಖ್ಯವಾಗಿ, ಪುಸ್ತಕ ಬರಹಗಾರರು, ಸಂಪನ್ಮೂಲ ವ್ಯಕ್ತಿ ಸಹಾಯಕರು, ಕೃಷಿ ಸಖಿ, ಪಶು ಸಖಿ, ಕೃಷಿ ಉದ್ಯೋಗ ಸಖಿ, ಬ್ಯಾಂಕ್ ಸಖಿ, ಎಫ್‌ಎಲ್‌ಸಿಆರ್‌ಪಿ ಕಾರ್ಯಕರ್ತರಾಗಿ ಸೇವೆ ಸಲ್ಲಿಸುತ್ತಿದ್ದೇವೆ. ಆದರೆ, ನಮಗೆ ಯಾವುದೇ ವೇತನ ನೀಡದೆ, ಗೌರವಧನವೆಂಬ ಅಣಕದ ವೇತನ ನೀಡಿ ದುಡಿಸಿಕೊಳ್ಳಲಾಗುತ್ತಿದೆ” ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
“ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಮಹಿಳಾ ಸಬಲೀಕರಣದ ನೀತಿಯೂ ಕೂಡಾ, ಲೂಟಿಕೋರ ‘ಕಾರ್ಪೋರೇಟ್ ಕಂಪನಿಗಳ ಪರವಾದ ಯೋಜನೆಗಳ ಮೂಲಕ ಜಾರಿಗೊಳಿಸಲಾಗುತ್ತಿದೆ. ಇಂತಹ ಸಂದರ್ಭದಲ್ಲಿ, ಸಂಜೀವಿನಿ ಯೋಜನೆಯ ಉದ್ದೇಶ ಮಹಿಳೆಯರ ಸಬಲೀಕರಣಕ್ಕೆ ಪೂರಕವಾಗದೇ, ಮಹಿಳೆಯರ ಮೇಲೆ ಮತ್ತಷ್ಟು ಹೊರೆ ಹಾಗೂ ದೌರ್ಜನ್ಯಗಳನ್ನು ಹೆಚ್ಚಿಸುತ್ತಿದೆ. ಜನ ಸಂಖ್ಯೆಯ ಅರ್ದಭಾಗ ಮಹಿಳೆಯರಿದ್ದರೂ, ಬಜೆಟ್‌ನಲ್ಲಿ ನ್ಯಾಯವಾಗಿ ಅರ್ಧದಷ್ಟು ಅನುದಾನ ಒದಗಿಸದಿರುವುದು ಸಮಸ್ಯೆಗಳ ಪ್ರಮುಖ ಮೂಲವಾಗಿದೆ” ಎಂದು ಹೇಳಿದ್ದಾರೆ.
ಪ್ರತಿಭಟನಾಕಾರರ ಹಕ್ಕೊತ್ತಾಯಗಳು:
1) ಈ ಕೂಡಲೇ ಸಂಜೀವಿನಿ ನೌಕರರಿಗೆ ನೇಮಕಾತಿಯ ಆದೇಶವನ್ನು ಕೊಡಬೇಕು. ಇಲಾಖೆಯಲ್ಲಿ ಗುತ್ತಿಗೆ ಪದ್ಧತಿ ರದ್ದುಗೊಳಿಸಿ ಖಾಯಮಾತಿ ಇಲ್ಲವೆ ಸೇವಾ ಭದ್ರತೆ ನೀಡಬೇಕು.
2) ಕಳೆದ ಹಲವಾರು ವರ್ಷಗಳಿಂದ ಪುಸ್ತಕ ಬರಹಗಾರರು, ಸ್ಥಳೀಯ ಸಂಪನ್ಮೂಲ ಸಹಾಯಕರು, ವಿವಿಧ ಸಖಿ ಕಾರ್ಯಕರ್ತರ ಬಾರಿ ಉಳಿದಿರುವ ವೇತನ ಹಾಗೂ ತಾಲೂಕು ಮಟ್ಟದಲ್ಲಿ ಕಾರ್ಯನಿರ್ವಹಿಸುವ ವಲಯ ಮೇಲ್ವಿಚಾರಕರ/ ಕ್ಲಸ್ಟರ್ ಸೂಪರ್ ವೈಸರ್‌ಗಳ ಬಾಕಿ ಉಳಿಸಿಕೊಂಡಿರುವ ECI ಮತ್ತು PF ಹಣವನ್ನು ನೌಕರರ ಖಾತೆಗೆ ಜಮಾ ಮಾಡಬೇಕು.
3) ಮೂರು ನಾಲ್ಕು ಬಾರಿ ಒಂದು ವಾರ ಕಾಲ, ಬೇರೆ ಬೇರೆ ವಿಷಯಗಳಿಗೆ ಸಂಬಂಧಿಸಿದಂತೆ ನಾವು ಗಣತಿ ಕಾರ್ಯದಲ್ಲಿ ತೊಡಗಿದ್ದರೂ, ನಮಗೆ ಯಾವುದೇ ಭತ್ಯೆಯನ್ನು ನೀಡಿರುವುದಿಲ್ಲ. ಕಾರಣವೂ ತಿಳಿದಿಲ್ಲ. ದಿನ ಭತ್ಯೆ 500 ರೂ. ಗಳಂತೆ ಗಣತಿ ಕಾರ್ಯದ ಎಲ್ಲ ದಿನಗಳಿಗೆ ತಕ್ಷಣವೇ ಹಣವನ್ನ ಬಿಡುಗಡೆ ಮಾಡಬೇಕು. ಬಿಡುಗಡೆಯಾಗಿದ್ದರೂ ನೀಡದಿರುವವರ ಮೇಲೆ ಕ್ರಮವಹಿಸಬೇಕು.
4) ರಾಜ್ಯದಾದ್ಯಂತ, ಪ್ರತಿ ಗ್ರಾಮ ಪಂಚಾಯತ್ ಮಟ್ಟದಲ್ಲಿಯೂ ಶೌಚಾಲಯ, ಪೀಠೋಪಕರಣ ಹಾಗೂ ಗಣಕಯಂತ್ರಗಳ ಸಹಿತ ಕಚೇರಿಗಳನ್ನು ಒದಗಿಸಬೇಕು.
5) ತಕ್ಷಣದಿಂದಲೇ ಜಾರಿಗೆ ಬರುವಂತೆ ಪುಸ್ತಕ ಬರಹಗಾರರ ವೇತನ 15,000 ರೂ.ಗಳಿಗೆ ಮತ್ತು ಸಂಪನ್ಮೂಲ ಸಹಾಯಕರಿಗೆ ಕನಿಷ್ಠ 13,000 ರೂ., ವಿವಿಧ ಸಖಿ ಕಾರ್ಯಕರ್ತರಿಗೆ 8,000 ರೂ. ವೇತನವನ್ನು ಹೆಚ್ಚಿಸಬೇಕು.
6) ಪ್ರಯಾಣ ಹಾಗೂ ದಿನ ಭತ್ಯೆಗಳನ್ನು ಮತ್ತು ಮೊಬೈಲ್ ಗಳು ಹಾಗೂ ಅವುಗಳಿಗೆ ಅಗತ್ಯವಾದ ಉಚಿತ ಕರೆನ್ಸಿ ಒದಗಿಸಬೇಕು. ಅದೇ ರೀತಿ ಭವಿಷ್ಯ ನಿಧಿ ಯೋಜನೆಯನ್ನು ಹಾಗೂ ಇಎಎಸ್‌ಐ ಸೌಲಭ್ಯ ಜಾರಿಗೊಳಿಸಬೇಕು. ಉಚಿತ ವಿಮಾ ಸೌಲಭ್ಯ ಒದಗಿಸಬೇಕು.
7) ಮಹಿಳಾ ಸಬಲೀಕರಣಕ್ಕಾಗಿ ಪಂಚಾಯತಿ ಹಾಗೂ ವಾರ್ಡ್ ಮಟ್ಟಗಳ ಕಛೇರಿಗಳಲ್ಲಿ ಕಾರ್ಯ ನಿರ್ವಹಿಸುವ ಪುಸ್ತಕ ಬರಹಗಾರರು ಮತ್ತು ಮಹಿಳೆಯರ ನಡುವೆ ನೇರ ಕಾರ್ಯ ನಿರ್ವಹಿಸುವ ಸಂಪನ್ಮೂಲ ವ್ಯಕ್ತಿ ಸಹಾಯಕರನ್ನು ಸರಕಾರಿ ನೌಕರರೆಂದು ಪರಿಗಣಿಸಿ ವೇತನವನ್ನು ನಿಗದಿಸಬೇಕು. ಅಲ್ಲಿಯವರೆಗೆ ಕನಿಷ್ಠ ವೇತನ ಒದಗಿಸಬೇಕು.
8) ಮಹಿಳಾ ಒಕ್ಕೂಟದ ಹಾಗೂ ಸ್ವ ಸಹಾಯ ಗುಂಪುಗಳ ಪ್ರತಿನಿಧಿಗಳಿಗೆ ಮಾಸಿಕ ಪ್ರೋತ್ಸಾಹ ಧನವನ್ನು ತಲಾ 2.000 ರೂ. ನೀಡಬೇಕು.
9) ಸ್ವ ಸಹಾಯಗುಂಪುಗಳಿಗೆ ಅವಶ್ಯ ವಿರುವಷ್ಟು ಐದು ವರ್ಷಗಳ ಕಾಲ ಬಡ್ಡಿ ರಹಿತ ಸಾಲ ಒದಗಿಸಬೇಕು.
10) ಮಹಿಳೆಯರ ಜನ ಸಂಖ್ಯೆಗನುಗುಣವಾಗಿ ಬಜೆಟ್ ಅನುದಾನವನ್ನು ಮೀಸಲಿಡಬೇಕು. ಒಂಟಿ ಮಹಿಳೆಯರು, ಗಂಡ ಸತ್ತ ಮಹಿಳೆಯರು, ಪರಿತ್ಯಕ್ತ ಮಹಿಳೆಯರು, ವಿಶೇಷಚೇತನ ಮಹಿಳೆಯರಿಗೆ ಕನಿಷ್ಟ ಮಾಸಿಕ 5,000 ರೂ.ಗಳ ನೆರವು ನೀಡಬೇಕು.
11) ಪ್ರತಿಯೊಬ್ಬರಿಗೂ ನಿವೇಶನ ಸಹಿತ ಉಚಿತ ಮನೆಯನ್ನು ಒದಗಿಸಬೇಕು.
12) ಸರಕಾರಿ ನೌಕರಿಗಳಲ್ಲಿ ಆಧ್ಯತೆ ಮೇರೆಗೆ ನೌಕರಿ ಒದಗಿಸಬೇಕು.
ಪ್ರತಿಭಟನೆಯಲ್ಲಿ ಸಂಘಟನೆಯ ಸಂಚಾಲಯ ಜಿ ನಾಗರಾಜ, ಯು ಬಸವರಾಜ, ಬಿ ಮಾಳಮ್ಮ, ಗೌಸ್ ಬಾಸ್ ನಧಾಫ್, ವಿನಿತ, ರೇಖಾ, ಗೌರಮ್ಮ, ಗಿರಿಜಮ್ಮ, ಲತಾ, ಸುಕನ್ಯ, ಮಮತ, ರೇಷ್ಮಾ, ಪುಷ್ಪಲತಾ, ಉಮಾ, ಬಿ ಸುನೀತಾ, ಸಂದಾದೇವಿ, ಭಾರ್ಗವಿ, ಮಹಾದೇವಿ ಬಾಲ್ಕಿ ಸೇರಿದಂತೆ ಹಲವರು ಇದ್ದರು.