ಬೀದರಿನ ನೌಬಾದ್ ಸಮೀಪದ ಚೌಳಿ ಕಮಾನ್ ಹತ್ತಿರ ಕಳೆದ 40 ವರ್ಷಗಳಿಂದ ವಾಸಿಸುತ್ತಿರುವ 63ಕ್ಕೂ ಹೆಚ್ಚಿನ ಅಲೆಮಾರಿ, ಅರೆ ಅಲೆಮಾರಿಗಳಿಗೆ ಸೂರು ಕಲ್ಪಿಸಲು ಆಗ್ರಹಿಸಿ ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕರ ಕಚೇರಿ ಎದುರು ಪ್ರತಿಭಟನೆ ನಡೆಯಿತು.
ವಿಶ್ವಕ್ರಾಂತಿ ದಿವ್ಯಪೀಠ ಸಂಘಟನೆಯ ನೇತೃತ್ವದಲ್ಲಿ ಅಲೆಮಾರಿಗಳು ಧರಣಿ ನಡೆಸಿ ಸೋಮವಾರ ಪ್ರತಿಭಟನೆ ನಡೆಸಿ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಎಚ್.ಎಸ್.ಸಿಂಧೂ ಅವರಿಗೆ ಹಕ್ಕೊತ್ತಾಯ ಪತ್ರ ಸಲ್ಲಿಸಿದರು.
‘2017ರಲ್ಲಿ ಅಂದಿನ ಜಿಲ್ಲಾಧಿಕಾರಿ ಎಚ್.ಆರ್.ಮಹಾದೇವ ಅವರು 63 ಅಲೆಮಾರಿ ಕುಟುಂಬಗಳಿಗೆ ತಾಲೂಕಿನ ಗೋರನಳ್ಳಿ ಸಮೀಪ 2 ಎಕರೆ ಸರ್ಕಾರಿ ಜಮೀನಿನಲ್ಲಿ ವಾಸಿಸಲು ನಿವೇಶನ ಮಂಜೂರು ಮಾಡುವಂತೆ ನಗರಸಭೆಗೆ ಸೂಚಿಸಿದರು. ಆದರೆ, ಇಲ್ಲಿಯವರೆಗೆ ನಗರಸಭೆ ಹಾಗೂ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ನಿವೇಶನ ಹಂಚಿಕೆ ಮಾಡದೇ ನಿರ್ಲಕ್ಷ್ಯ ವಹಿಸಿದ್ದಾರೆʼ ಎಂದು ದೂರಿದರು.
ʼಶಾಶ್ವತ ನಿವೇಶನ ಇಲ್ಲದೇ ಖಾಸಗಿ ಜಾಗದಲ್ಲಿ ವಾಸಿಸುವ ಅಲೆಮಾರಿಗಳಿಗೆ ಖಾಸಗಿ ವ್ಯಕ್ತಿಗಳು ಒಕ್ಕಲೆಬ್ಬಿಸುವ ಘಟನೆಗಳು ನಡೆದಿವೆ. ಇತ್ತೀಚೆಗೆ ಕೆಲವರು ಜಾಗ ಖಾಲಿ ಮಾಡಿ, ಇಲ್ಲವಾದರೆ ಜೆಸಿಬಿಗಳಿಂದ ತೆರವುಗೊಳಿಸಲಾಗುವುದು ಎಂದು ಹೆದರಿಸಿದ್ದಾರೆ. ಇದರಿಂದ ಅಲೆಮಾರಿಗಳು ಆತಂಕಕ್ಕೆ ಒಳಗಾಗಿದ್ದಾರೆ. ಇದನ್ನು ಗಂಭೀರವಾಗಿ ಪರಿಗಣಿಸಿ ಅಲೆಮಾರಿಗಳ ನೆರವಿಗೆ ಧಾವಿಸಿ ಸೂರು ಕಲ್ಪಿಸಲು ಮುಂದಾಗಬೇಕುʼ ಎಂದು ಆಗ್ರಹಿಸಿದರು.
ಈ ಸುದ್ದಿ ಓದಿದ್ದೀರಾ? ಬೀದರ್ | ಗೌತಮ ಅದಾನಿ ಬಂಧನಕ್ಕೆ ಸಿಪಿಐ ಆಗ್ರಹ
ಕಳೆದ ಹತ್ತಾರು ವರ್ಷಗಳಿಂದ ಬಿಸಿಲು, ಮಳೆ, ಚಳಿ ಎನ್ನದೇ ಕತ್ತಲಲ್ಲಿ ಬಾಣಂತಿಯರು, ಮಹಿಳೆಯರು, ಪುಟ್ಟ ಮಕ್ಕಳು, ವಯಸ್ಸಾದವರು ಅಲ್ಲಿ ವಾಸಿಸುತ್ತಿದ್ದಾರೆ. ಅವರನ್ನು ಏಕಾಏಕಿ ಅಲ್ಲಿಂದ ತೆರವುಗೊಳಿಸಿದರೆ ಅವರು ಬೀದಿಪಾಲಾಗುತ್ತಾರೆ. ಕೂಡಲೇ ಅವರಿಗೆ ಶಾಶ್ವತ ನಿವೇಶನ ವ್ಯವಸ್ಥೆ ಕಲ್ಪಿಸಲು ಮುಂದಾಗಬೇಕು. ಇಲ್ಲವಾದಲ್ಲಿ ಜನವರಿ 23ರಂದು ಜಿಲ್ಲಾಧಿಕಾರಿ ಕಚೇರಿ ಎದುರು ಉಪವಾಸ ಸತ್ಯಾಗ್ರಹ ನಡೆಸಲಾಗುವುದುʼ ಎಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ವಿಶ್ವಕ್ರಾಂತಿ ದಿವ್ಯಪೀಠ ಟ್ರಸ್ಟ್ ಅಧ್ಯಕ್ಷ ಓಂಪ್ರಕಾಶ್ ರೊಟ್ಟೆ, ಕೆಆರ್‌ಎಸ್ ಪಕ್ಷದ ಹಣಮಂತ ಮಟ್ಟೆ ಸೇರಿದಂತೆ ಅಲೆಮಾರಿ ಸಮುದಾಯದವರು ಇದ್ದರು.