ಮೈಸೂರಿನ ಜಿಲ್ಲಾಧಿಕಾರಿ ಆವರಣದಲ್ಲಿ ಸಂಯುಕ್ತ ಕಿಸಾನ್ ಮೋರ್ಚಾ ಹಾಗೂ ಸಂಯುಕ್ತ ಹೋರಾಟ ಕರ್ನಾಟಕ ಸಂಘಟನೆಗಳ ನೇತೃತ್ವದಲ್ಲಿ ‘ ಪಂಜಾಬ್ ರೈತ ಹೋರಾಟದ ಮೇಲೆ ನಡೆಯುತ್ತಿರುವ ಪೊಲೀಸ್ ದಬ್ಬಾಳಿಕೆ ನಿಲ್ಲಿಸುವಂತೆ ‘ ಒತ್ತಾಯ ಪತ್ರ ಸಲ್ಲಿಸಿದರು.
ಪಂಜಾಬ್ ನಲ್ಲಿ, ನ್ಯಾಯಯುತ ಬೇಡಿಕೆಗಳಿಗಾಗಿ ಹೋರಾಟ ನಡೆಸುತ್ತಿರುವ ರೈತರ ಮೇಲೆ ಪಂಜಾಬ್ ಸರ್ಕಾರವು ಕೇಂದ್ರ ಸರ್ಕಾರದ ಸಹಯೋಗದೊಂದಿಗೆ ಪೊಲೀಸರ ಮೂಲಕ ದಬ್ಬಾಳಿಕೆಯನ್ನು ನಡೆಸುತ್ತಿದೆ. ದೇಶದ ಸಂವಿಧಾನದ ಪ್ರಕಾರ, ದೇಶದ ನಾಗರಿಕರು ತಮ್ಮ ನ್ಯಾಯಯುತ ಬೇಡಿಕೆಗಳಿಗಾಗಿ ಪ್ರತಿಭಟಿಸುವ ಮೂಲಭೂತ ಪ್ರಜಾಸತ್ತಾತ್ಮಕ ಹಕ್ಕನ್ನು ಹೊಂದಿದ್ದಾರೆ.
ಆದರೆ, ಇತ್ತೀಚಿನ ದಿನಗಳಲ್ಲಿ ಮಾರ್ಚ್ 5 ರಿಂದ ಸಂಯುಕ್ತ ಕಿಸಾನ್ ಮೋರ್ಚಾ ಚಂಡೀಗಢದಲ್ಲಿ ನಡೆಸಿರುವ ಏಳು ದಿನಗಳ ಧರಣಿಯನ್ನು ಇಡೀ ರಾಜ್ಯವನ್ನು ತೆರೆದ ಜೈಲಾಗಿ ಪರಿವರ್ತಿಸುವ ಮೂಲಕ ಟಾರ್ಪಿಡೊ ಮಾಡಲಾಯಿತು.
ಮಾರ್ಚ್ 19 ರಂದು, ಕೇಂದ್ರ ಸರ್ಕಾರದ ಮಂತ್ರಿಗಳೊಂದಿಗೆ ಮಾತನಾಡಿ ಹಿಂತಿರುಗುತ್ತಿದ್ದ ರೈತ ನಾಯಕರನ್ನು ಬಂಧಿಸಲಾಯಿತು. ಶಂಭು ಮತ್ತು ಖಾನೌರಿಯಲ್ಲಿ ಡೇರೆಗಳು ಮತ್ತು ವಸ್ತುಗಳನ್ನು ಬುಲ್ಲೋಜರ್ ಮೂಲಕ ರೈತರ ಧರಣಿಯನ್ನು ಬಲವಂತವಾಗಿ ಕಿತ್ತುಹಾಕಲಾಯಿತು. ಟ್ರ್ಯಾಕ್ಟರ್ ಟ್ರಾಲಿಗಳು ಸೇರಿದಂತೆ ರೈತರ ಉಪಕರಣಗಳನ್ನು ಧ್ವಂಸಗೊಳಿಸಲಾಯಿತು ಮತ್ತು ಸರಕುಗಳನ್ನು ದೊಡ್ಡ ಪ್ರಮಾಣದಲ್ಲಿ ಕಳ್ಳತನ ಮಾಡಲಾಯಿತು.

ಪಂಜಾಬ್‌ನಲ್ಲಿ ಪೊಲೀಸ್ ರಾಜ್ಯವನ್ನು ಸ್ಥಾಪಿಸುವ ಮೂಲಕ ಜನರ ಪ್ರಜಾಪ್ರಭುತ್ವ ಹಕ್ಕುಗಳನ್ನು ತುಳಿದು ಹಾಕಲಾಗುತ್ತಿದೆ. ಕರ್ನಲ್ ಪುಷ್ಟಿಂದರ್ ಸಿಂಗ್ ಬಾತ್ ವಿರುದ್ಧದ ಪೊಲೀಸ್ ದೌರ್ಜನ್ಯ ಮತ್ತು ಗೌರವಾನ್ವಿತ ಸುಪ್ರೀಂ ಕೋರ್ಟ್ ಸ್ಪಷ್ಟ ಸೂಚನೆಗಳ ಹೊರತಾಗಿಯೂ ಬುಲ್ಡೋಜರ್ ಗಳಿಂದ ಜನರ ಮನೆಗಳನ್ನು ಕೆಡವಿರುವುದು ಇದಕ್ಕೆ ಸ್ಪಷ್ಟ ಉದಾಹರಣೆಗಳಾಗಿವೆ.
ಇಂತಹ ಸಂದರ್ಭಗಳಲ್ಲಿ, ಸಂಯುಕ್ತ ಕಿಸಾನ್ ಮೋರ್ಚಾ ಮತ್ತು ವಿವಿಧ ಸಾಮೂಹಿಕ ಸಂಘಟನೆಗಳು ದಬ್ಬಾಳಿಕೆಯನ್ನು ನಿಲ್ಲಿಸುವಂತೆ ಒತ್ತಾಯಿಸಿವೆ.
ಪ್ರತಿಭಟನೆಯಲ್ಲಿ ಜನಾಂದೋಲನಗಳ ಮಹಾ ಮೈತ್ರಿಯ ರಾಜ್ಯ ಸಂಚಾಲಕ ಉಗ್ರ ನರಸಿಂಹೇಗೌಡ, ಅಖಿಲ ಭಾರತ ರೈತ ಕೃಷಿ ಕಾರ್ಮಿಕರ ಸಂಘಟನೆಯ ಜಿಲ್ಲಾ ಸಂಚಾಲಕ ಬಸವರಾಜು ಹೆಚ್ ಎಂ, ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾ ಕಾರ್ಯದರ್ಶಿ ಪಿ ಮರಂಕಯ್ಯ ಜವರಯ್ಯ, ಕಂದೇಗಾಲ ಶ್ರೀನಿವಾಸ, ಕಲ್ಲಹಳ್ಳಿ ಕುಮಾರ್, ಕೆಂಪಿಸಿದ್ದನಹುಂಡಿಯ ರವಿಕುಮಾರ್, ನಂಜುಂಡ, ಉಮೇಶ್, ಯೋಗೇಶ್, ವಸಂತ್ ಕುಮಾರ್, ರಾಜಣ್ಣ ರೈತ ಮಹಿಳೆಯರಾದ ವಸಂತ, ನಾಗರತ್ನ, ಜಯಲಕ್ಷ್ಮಿ ಹಾಗೂ ಇನ್ನಿತರರು ಇದ್ದರು.
ಈ ಸುದ್ದಿ ಓದಿದ್ದೀರಾ? ಮೈಸೂರು | ಮುಂಗಾರಿನ ಮೊದಲ ಉಳುಮೆ ‘ ಹೊನ್ನಾರು ‘
ಹಕ್ಕೊತ್ತಾಯಗಳು:
- ಪೊಲೀಸರು ಬಳಸುತ್ತಿರುವ ಕುರುಡು ಬಲವನ್ನು ನಿಲ್ಲಿಸಬೇಕು ಮತ್ತು ಪ್ರತಿಭಟಿಸುವ ಜನರ ಪ್ರಜಾಸತ್ತಾತ್ಮಕ ಹಕ್ಕನ್ನು ಪುನಃ ಸ್ಥಾಪಿಸಬೇಕು.
- ಬಂಧಿಸಲ್ಪಟ್ಟ ಅಥವಾ ಜೈಲಿನಲ್ಲಿರುವ ಎಲ್ಲಾ ರೈತರನ್ನು ತಕ್ಷಣ ಬಿಡುಗಡೆ ಮಾಡಬೇಕು.
- ರೈತರ ಟ್ರ್ಯಾಕ್ಟರ್, ಟ್ರಾಲಿಗಳು ಸೇರಿದಂತೆ ಎಲ್ಲಾ ಉಪಕರಣಗಳನ್ನು ಹಿಂತಿರುಗಿಸಬೇಕು.
- ಹಾನಿಗೊಳಗಾದ ರೈತರ ಸರಕುಗಳಿಗೆ ಪರಿಹಾರ ನೀಡಬೇಕು.