- ರಾಷ್ಟ್ರಾದ್ಯಂತ ಪ್ರತಿಭಟನೆಗೆ ಕರೆ ನೀಡಿದ್ದ ಸಂಯುಕ್ತ ಕಿಸಾನ್ ಮೋರ್ಚಾ
- ಆರೋಪಿಯ ರಕ್ಷಣೆ ಮಾಡುತ್ತಿರುವುದು ಹೇಯಕೃತ್ಯ, ಪ್ರಜಾಪ್ರಭುತ್ವ ವಿರೋಧಿ
ಅಂತರಾಷ್ಟ್ರೀಯ ಕುಸ್ತಿಪಟುಗಳ ಮೇಲೆ ಲೈಂಗಿಕ ದೌರ್ಜನ್ಯ ಆರೋಪ ಹೊತ್ತಿರುವ ಬಿಜೆಪಿ ಸಂಸದ ಬ್ರಿಜ್ ಭೂಷಣ್ ಸಿಂಗ್ ಬಂಧನಕ್ಕೆ ಆಗ್ರಹಿಸಿ ಮೈಸೂರಿನ ರಾಮಸ್ವಾಮಿ ವೃತ್ತದಲ್ಲಿ ಸೋಮವಾರ ಹಲವು ಸಂಘಟನೆ ಮುಖಂಡರು ಜಿಲ್ಲಾಧಿಕಾರಿ ಕಚೇರಿವರೆಗೆ ಪಾದಯಾತ್ರೆ ನಡೆಸುವ ಮೂಲಕ ಪ್ರತಿಭಟನೆ ನಡೆಸಿದರು.
ಸಂಯುಕ್ತ ಕಿಸಾನ್ ಮೋರ್ಚಾ ರಾಷ್ಟ್ರಾದ್ಯಂತ ನೀಡಿದ್ದ ಕರೆಗೆ ಜನತಂತ್ರ ಜಾಗೃತಿ ವೇದಿಕೆ ನೇತೃತ್ವದಲ್ಲಿ ಹಲವು ಸಂಘಟನೆಗಳು ಪಾದಯಾತ್ರೆಯಲ್ಲಿ ಭಾಗವಹಿಸಿದ್ದವು. ಅಂತರಾಷ್ಟ್ರೀಯ ಮಟ್ಟದಲ್ಲಿ ಭಾರತದ ಘನತೆ ಗೌರವಗಳನ್ನು ಎತ್ತಿ ಹಿಡಿದ ಮಹಿಳಾ ಕ್ರೀಡಾ ಪಟುಗಳ ಮೇಲೆ ಲೈಂಗಿಕ ದೌರ್ಜನ್ಯ ಆರೋಪ ಹೊತ್ತಿರುವ ಬಿಜೆಪಿ ಸಂಸದ ಬ್ರಿಜ್ ಭೂಷಣ್ ಸಿಂಗ್ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದೇ, ರಕ್ಷಣೆ ಮಾಡುತ್ತಿರುವುದು ಹೇಯಕೃತ್ಯ ಎಂದು ಕಿಡಿಕಾರಿದರು.
ರಾಷ್ಟ್ರಪತಿಗಳು, ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಿಗೆ ಮನವರಿಕೆ ಮಾಡಿ ಕೂಡಲೇ ಆರೋಪಿ ಸಂಸದನ ಸ್ಥಾನದಿಂದ ವಜಾಗೊಳಿಸಿ, ಪೋಕ್ಸೋ ಕಾಯ್ದೆಯಡಿ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ವಿಶ್ರಾಂತ ಉಪ ಕುಲಪತಿ ಸಬಿಹಾ ಭೂಮಿಗೌಡ ಮಾತನಾಡಿ, ದೇಶಕ್ಕೆ ಕೀರ್ತಿ ತಂದ ಹೆಣ್ಣು ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ನಡೆದಿದೆ. ಅದುವೇ ಜನಪ್ರತಿನಿಧಿಯಾಗಿರುವ ಬಿಜೆಪಿ ಸಂಸದನಿಂದ. ಆದರೆ, ಪ್ರಧಾನ ಮಂತ್ರಿಗಳು ಮಹಿಳಾ ಕ್ರೀಡಾಪಟುಗಳು ಅನಿರ್ದಿಷ್ಟಾವಧಿ ಧರಣಿ ನಡೆಸುತ್ತಾ ಇದ್ದರೂ ಇದುವರೆಗೆ ಗಮನಹರಿಸಿಲ್ಲ. ಪೊಲೀಸರಿಂದ ಹೆಣ್ಣು ಮಕ್ಕಳು ಪ್ರತಿಭಟನೆ ನಡೆಸದಂತೆ ಎಳೆದಾಡಿದ್ದಾರೆ, ಬಂಧಿಸಿದ್ದಾರೆ. ಮಹಿಳಾ ಕ್ರೀಡಾಪಟುಗಳು ದೂರು ನೀಡಿದಾಗ ಎಫ್ ಐ ಆರ್ ಆಗಲಿಲ್ಲ. ತಡವಾಗಿ ಆಗಿದೆ. ಇದುವರೆಗೆ ಆರೋಪಿ ಬ್ರಿಜ್ ಭೂಷಣ್ ಸಿಂಗ್ ಬಂಧನ ಆಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ಸುದ್ದಿ ಓದಿದ್ದೀರಾ? ಧಾರವಾಡ | ಬಿಜೆಪಿ ಸಂಸದ ಬ್ರಿಜ್ ಭೂಷಣ್ ಸಿಂಗ್ ಪ್ರತಿಕೃತಿ ದಹಿಸಿ ಆಕ್ರೋಶ
ಪ್ರತಿಭಟನೆಯಲ್ಲಿ ವಿಶ್ರಾಂತ ಉಪ ಕುಲಪತಿ ಸಬಿಹಾ ಭೂಮಿಗೌಡ, ಹೊಸೂರು ಕುಮಾರ್, ಹೊಸಕೋಟೆ ಬಸವರಾಜು, ಅಭಿರುಚಿ ಗಣೇಶ್, ಬೆಟ್ಟಯ್ಯ ಕೋಟೆ, ಅಲಗೂಡು ಶಿವಕುಮಾರ್, ಜನಮನ ಗೋಪಾಲ್, ಪಿ ಮರಂಕಯ್ಯ, ಶಂಭುಲಿಂಗ ಸ್ವಾಮಿ, ರಾಜಣ್ಣ, ಪಂಡಿತಾರಾಧ್ಯ, ವೆಂ ವನಜ, ಮಾಯ ಸಂದ್ರ ಕೃಷ್ಣಪ್ರಸಾದ್, ಉಗ್ರ ನರಸಿಂಹೆ ಗೌಡ, ಚೋರನಹಳ್ಳಿ ಶಿವಣ್ಣ ಸೇರಿದಂತೆ ಹಲವು ಮುಖಂಡರು ಭಾಗಿಯಾಗಿದ್ದರು.