ಕರ್ತವ್ಯ ಲೋಪ ಎಸಗಿ ಸರ್ಕಾರಕ್ಕೆ ಆರ್ಥಿಕ ನಷ್ಟ ಉಂಟು ಮಾಡಿರುವುದು ದಾಖಲೆಗಳಿಂದ ಸಾಬೀತು ಆಗಿರುವುದರಿಂದ ಚಿಟಗುಪ್ಪ ತಾಲೂಕಿನ ಮನ್ನಾಏಖೆಳ್ಳಿ ಸಮುದಾಯ ಕೇಂದ್ರದ ಆಡಳಿತ ವೈದ್ಯಾಧಿಕಾರಿ ಡಾ.ಲಕ್ಷ್ಮಣ್ ಜಾದವ್ ಅವರನ್ನು ಅಮಾನತುಗೊಳಿಸಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಆಯುಕ್ತ ಡಿ.ರಂದೀಪ್ ಆದೇಶ ಹೊರಡಿಸಿದ್ದಾರೆ.
ಕೊಪ್ಪಳ ಜಿಲ್ಲೆ ಹಿರೇಸಿಂದೋಗಿಯ ಸಮುದಾಯ ಕೇಂದ್ರದ ಖಾಲಿ ಇರುವ ಸಾಮಾನ್ಯ ಕರ್ತವ್ಯ ವೈದ್ಯಾಧಿಕಾರಿ ಹುದ್ದೆಗೆ ಅವರನ್ನು ಸ್ಥಳಾಂತರಿಸಲಾಗಿದೆ. ಅಮಾನತ್ತಿನ ಅವಧಿಯಲ್ಲಿ ಸಕ್ಷಮ ಪ್ರಾಧಿಕಾರದ ಪೂರ್ವಾನುಮತಿ ಪಡೆಯದೆ ಕೇಂದ್ರ ಸ್ಥಾನ ಬಿಡತಕ್ಕಲ್ಲ ಎಂದು ಆದೇಶದಲ್ಲಿ ತಿಳಿಸಿದ್ದಾರೆ.
ʼಡಾ.ಲಕ್ಷ್ಮಣ್ ಜಾದವ್ ಅವರು ಸಿಬ್ಬಂದಿ ಸಂಬಳ ತಡೆಹಿಡಿದು ಅವರಿಗೆ ಹೆದರಿಸಿ ಕಡತಗಳಿಗೆ ಸಹಿ ಪಡೆದಿದ್ದಾರೆ. ಅವರಿಗೆ ಅಗೌರವದಿಂದ ನಡೆದುಕೊಂಡಿದ್ದಾರೆ. ರೋಗಿಗಳಿಗೆ ಸೂಕ್ತ ಸೇವೆ ನೀಡುವಲ್ಲಿ ವಿಫಲರಾಗಿದ್ದಾರೆ. ಆಡಳಿತ ನಿರ್ವಹಣೆಯಲ್ಲಿ ಬೇಜವಾಬ್ದಾರಿ ತೋರಿದ್ದಾರೆ. ದರಪಟ್ಟಿ ಆಹ್ವಾನಿಸದೆ ಹೆಚ್ಚಿನ ಬೆಲೆಗೆ ಔಷಧಿಗಳನ್ನು ಖರೀದಿಸಿ ಸರ್ಕಾರಕ್ಕೆ ಆರ್ಥಿಕ ನಷ್ಟ ಉಂಟು ಮಾಡಿ ಕರ್ತವ್ಯ ಲೋಪ ಎಸಗಿರುವುದು ಸಾಬೀತಾಗಿರುವುದರಿಂದ ಅಮಾನತು ಮಾಡಲಾಗಿದೆʼ ಎಂದು ತಿಳಿಸಿದ್ದಾರೆ