ಕಲಬುರಗಿ ಜಿಲ್ಲೆಯ ಚಿತ್ತಾಪೂರ ತಾಲೂಕಿನ ಹಲಕರ್ಟಿ ಗ್ರಾಮದಲ್ಲಿ ವಿಶ್ವಗುರು ಬಸವಣ್ಣನವರ ಭಾವಚಿತ್ರವನ್ನು ಸುಟ್ಟು ವಿಕೃತಿ ಮೆರೆದಿರುವ ಕಿಡಿಗೇಡಿಗಳನ್ನು ಬಂಧಿಸುವಂತೆ ಭಾಲ್ಕಿ ತಾಲೂಕು ಕರವೇ (ನಾರಾಯಣ ಗೌಡ) ಬಣದ ಗೌರವಾಧ್ಯಕ್ಷ ರಮೇಶ ಚಿದ್ರಿ ಮತ್ತು ಅಧ್ಯಕ್ಷ ಗಣೇಶ ಪಾಟೀಲ್ ಒತ್ತಾಯಿಸಿದ್ದಾರೆ.
ಈ ಕುರಿತು ಸಿಎಂಗೆ ಪತ್ರ ಬರೆದಿರುವ ಅವರು, “ವಿಶ್ವಕ್ಕೆ ಸಮಾನತೆ ಸಾರಿರುವ ವಿಶ್ವಚೇತನ ಬಸವಣ್ಣವರ ಭಾವಚಿತ್ರ ಸುಟ್ಟಿರುವುದರು ಖಂಡನೀಯ. ಕೂಡಲೇ ಸರಕಾರ ಕಿಡಿಗೇಡಿಗಳನ್ನು ಬಂಧಿಸಿ ಕಠಿಣ ಶಿಕ್ಷೆಗೆ
ಒಳಪಡಿಸಬೇಕು” ಎಂದು ಆಗ್ರಹಿಸಿದರು.
ಜಿಲ್ಲಾ ಕುಂಬಾರ ಸಮಾಜ ಖಂಡನೆ
ಚಿತ್ತಾಪುರ ತಾಲೂಕಿನ ಹಲಕರ್ಟಿ ಗ್ರಾಮದಲ್ಲಿ ಕೆಲವು ಕಿಡಿಗೇಡಿಗಳು ವಿಶ್ವಗುರು ಬಸವಣ್ಣನವರ ಭಾವಚಿತ್ರವನ್ನು ಸುಟ್ಟು ವಿಕೃತಿ ಮೆರೆದಿರುವ ಘಟನೆಗೆ ಬೀದರ್ ಜಿಲ್ಲಾ ಕುಂಬಾರ ಸಮಾಜದ ಜಿಲ್ಲಾ ಉಪಾಧ್ಯಕ್ಷ ರಾಜಕುಮಾರ ಕುಂಬಾರ ಹಲ್ಬರ್ಗಾ ತೀವ್ರವಾಗಿ ಖಂಡಿಸಿದ್ದಾರೆ.
“ಬಸವಣ್ಣನವರು ಒಂದು ಜಾತಿಗೆ ಸೇರಿದವರಲ್ಲ, ಇಡೀ ವಿಶ್ವವೇ ಬಸವಣ್ಣನವರ ಸಂದೇಶಗಳಿಗೆ ಮಾರುಹೋಗಿ ವಂದಿಸುತ್ತದೆ. ಸಕಲ ಜೀವಾತ್ಮರಿಗೆ ಲೇಸನ್ನೇ ಬಯಸಿದ್ದರು ಬಸವಣ್ಣನವರು. 12ನೇ ಶತಮಾನದಲ್ಲಿ ಕಲ್ಯಾಣ ರಾಜ್ಯ ನಿರ್ಮಾಣಕ್ಕೆ ಶ್ರಮಿಸಿದವರು. ಇಂತಹ ಮಹಾತ್ಮರ ಭಾವಚಿತ್ರಕ್ಕೆ ಅಪಮಾನಗೊಳಿಸಿದ ಕಿಡಿಗೇಡಿಗಳ ಕೃತ್ಯ ಸಮಸ್ತ ಬಸವಾನುಯಾಯಿಗಳಿಗೆ ನೋವುಂಟು ಮಾಡಿದೆ” ಎಂದು ಬೇಸರ ವ್ಯಕ್ತಪಡಿಸಿದರು.
“ಬಸವಣ್ಣನವರನ್ನು ಪರಿಪೂರ್ಣವಾಗಿ ಅರಿಯದೆ ಹೀನ ಮನಸ್ಥಿತಿ ಉಳ್ಳವರು ಮಾತ್ರ ಇಂತಹ ಕೃತ್ಯ ಎಸಗಲು ಸಾಧ್ಯ. ಇಂತಹ ಹೇಯ ಕೃತ್ಯ ನಡೆದಿರುವುದು ಅಕ್ಷಮ್ಯ ಅಪರಾಧ. ಕೃತ್ಯದಲ್ಲಿ ಭಾಗಿಯಾದವರನ್ನು ಸರ್ಕಾರ ತಕ್ಷಣವೇ ಬಂಧಿಸಿ ಕಠಿಣ ಶಿಕ್ಷೆಗೆ ಒಳಪಡಿಸಬೇಕು. ಈ ರೀತಿಯ ಘಟನೆ ಪುನರಾವರ್ತನೆಯಾಗದಂತೆ ಎಚ್ಚರ ವಹಿಸಬೇಕು” ಎಂದು ಆಗ್ರಹಿಸಿದರು.
ಕಿಡಿಕೇಡಿಗಳ ಮೇಲೆ ದೇಶದ್ರೋಹ ಪ್ರಕರಣ ದಾಖಲಿಸಲು ಒತ್ತಾಯ
ಕಲ್ಯಾಣ ರಾಜ್ಯ ನಿರ್ಮಾಣ ಕನಸು ಹೊತ್ತು ಸಮಾನತೆ ಸಮಾಜ ಕಟ್ಟಲು ಬಯಸಿದ ಬಸವಣ್ಣನವರಿಗೆ ತನ್ನ ಕಾರ್ಯ ಕ್ಷೇತ್ರದಲ್ಲೇ ಅವಮಾನಿಸಿರುವುದನ್ನು ಕರ್ನಾಟಕ ವಿದ್ಯಾರ್ಥಿ ವೇದಿಕೆ ಹುಮನಾಬಾದ್ ತಾಲೂಕು ಘಟಕ ಖಂಡಿಸಿದೆ.
ಈ ಕುರಿತು ಮುಖ್ಯಮಂತ್ರಿಗಳಿಗೆ ಬರೆದ ಹಕ್ಕೊತ್ತಾಯ ಪತ್ರವನ್ನು ತಾಲೂಕು ಆಡಳಿತಕ್ಕೆ ಸಲ್ಲಿಸಿದ ವೇದಿಕೆಯ ಪ್ರಮುಖರು, ” ಬಸವಣ್ಣನವರಿಗೆ ಅವಮಾನಿಸಿದ್ದು ಬಸವ ಅನುಯಾಯಿಗಳಿಗೆ ನೋವುಂಟು ಮಾಡಿದೆ. ಈ ಕೃತ್ಯ ಎಸಗಿದ ಕಿಡಿಗೇಡಿಗಳ ಮೇಲೆ ದೇಶದ್ರೋಹ ಪ್ರಕರಣ ದಾಖಲಿಸಿ” ಎಂದು ಅವರು ಒತ್ತಾಯಿಸಿದರು.
ಈ ಸುದ್ದಿ ಓದಿದ್ದೀರಾ? ಬೀದರ್ | ಅನಧಿಕೃತ ಡಿಜಿಟಲ್ ಖಾತಾ ವಿತರಣೆ: ಚಿಟ್ಟಾ ಗ್ರಾಮ ಪಂಚಾಯಿತಿ ಪಿಡಿಒ ಅಮಾನತು
ಈ ಸಂದರ್ಭದಲ್ಲಿ ಕರ್ನಾಟಕ ವಿದ್ಯಾರ್ಥಿ ವೇದಿಕೆಯ ಹುಮನಾಬಾದ್ ತಾಲೂಕು ಅಧ್ಯಕ್ಷ ಮನೋಜ ಸಿತಾಳೆ, ಸುಭಾಷ ಕೆನಾಡೆ, ಅರವಿಂದ ಜೋಗಿರೆ, ರಾಮು ಪರೀಟ, ಸಂಗಮೇಶ ಸೇರಿದಂತೆ ಇತರರಿದ್ದರು.