ದೇಶಕ್ಕೆ ಸ್ವಾತಂತ್ರ್ಯ ಸಿಕ್ಕು 78 ವರ್ಷ ಕಳೆದರೂ, ರಾಯಚೂರಿನ ದೇವದುರ್ಗ ತಾಲೂಕಿನಲ್ಲಿರುವ ನಿಂಗಮ್ಮನಮರಡಿ ಎಂಬ ಗ್ರಾಮ ಇನ್ನೂ ಮೂಲಭೂತ ಸೌಲಭ್ಯಗಳಿಲ್ಲದೆ ಪರಿತಪಿಸುತ್ತಿದೆ. ತಾಲೂಕು ಕೇಂದ್ರದಿಂದ ಕೇವಲ 4 ಕಿಮೀ ಅಂತರದಲ್ಲಿರುವ ಈ ಹಳ್ಳಿಯಲ್ಲಿ ದಲಿತ ಸಮುದಾಯದ ಸುಮಾರು 100ಕ್ಕೂ ಹೆಚ್ಚು ಕುಟುಂಬಗಳು ಹಲವು ವರ್ಷಗಳಿಂದ ವಾಸಿಸುತ್ತಿದ್ದರೂ, ನಿರಂತರ ನಿರ್ಲಕ್ಷ್ಯಕ್ಕೆ ಬಲಿಯಾಗಿವೆ.
ಗ್ರಾಮದ ಜನರಿಗೆ ವಾಸಕ್ಕೆ ಮನೆಗಳು, ವಿದ್ಯುತ್ ಸಂಪರ್ಕ ದೊರೆತಿವೆಯಾದರೂ, ಕುಡಿಯುವ ನೀರಿನ ಪೂರೈಕೆ ಹಾಗೂ ಸಮರ್ಪಕ ರಸ್ತೆ ಸಂಪರ್ಕವಿಲ್ಲ. ದಾರಿ ದೀಪಗಳೂ ಇಲ್ಲದ ಈ ಹಳ್ಳಿಯಲ್ಲಿರುವ ಕುಟುಂಬಗಳು ದಿನನಿತ್ಯ ಜೀವನ ದೂಡಲು ಪರದಾಡುವಂತಾಗಿದೆ.
“ಪ್ರತಿದಿನ ಕುಡಿಯುವ ನೀರಿಗಾಗಿಯೂ ಹೋರಾಟ, ಬೇಸಿಗೆ ಬಂದರೆ ಪರಿಸ್ಥಿತಿ ಮತ್ತೂ ಹದಗೆಡುತ್ತದೆ. ಕೆಲಸ ಮಾಡಿ ಮನೆಗೆ ಬಂದರೆ ಕುಡಿಯುವ ನೀರೇ ಇರಲ್ಲ. ನೀರಿಲ್ಲದೆ ಯಾವ ಕೆಲಸವೂ ಮುಂದೆ ಸಾಗುವುದಿಲ್ಲ” ಎಂದು ಗ್ರಾಮದ ನಿವಾಸಿ ಶಾಂತಮ್ಮ ನೋವು ಹಂಚಿಕೊಂಡರು.

ರಸ್ತೆಗಳ ಸ್ಥಿತಿಗತಿಯಂತೂ ಹೇಳತೀರದು. ಗ್ರಾಮಕ್ಕೆ ತಲುಪಲು ನಿಕಟ ರಸ್ತೆಯಿಂದ ಗ್ರಾಮದವರೆಗೂ ಬೃಹತ್ ಕಲ್ಲುಗಳ ನಡುವೆ ನಡೆದು ಹೋಗಬೇಕಾಗುತ್ತದೆ. ಕೆಲವೊಮ್ಮೆ ಗ್ರಾಮಸ್ಥರು ತಮ್ಮ ಕೈಗಳಿಂದ ಕಲ್ಲು ಒಡೆದು ಕಾಲ್ದಾರಿ ಮಾಡಿಕೊಂಡು ಸಾಗಬೇಕಾಗುತ್ತದೆ. “ಅನಾರೋಗ್ಯದ ಸಂದರ್ಭದಲ್ಲಿ ರೋಗಿಯನ್ನು ಆಸ್ಪತ್ರೆಗೆ ಕರೆದೊಯ್ಯುವುದು ಸಂಕಷ್ಟದ ಕೆಲಸ. ವಾಹನವೇ ಇಲ್ಲಿಗೆ ತಲುಪಲಾರದು,” ಎಂದು ಮತ್ತೊಬ್ಬರು ಅಸಹಾಯಕತೆಯಿಂದ ಹೇಳಿದರು.
ಹಾಗೆಯೇ, ಈ ಬಡಾವಣೆಯ ಮಕ್ಕಳ ಶಿಕ್ಷಣದ ಸ್ಥಿತಿಯೂ ಕಳವಳಕಾರಿಯಾಗಿದೆ. ಸರಿಯಾದ ರಸ್ತೆ ಇಲ್ಲದ ಕಾರಣ ಶಾಲೆಗೆ ಹೋಗುವುದೂ ಕಷ್ಟಕರವಾಗಿದೆ. ಪಠ್ಯಕ್ಕಾಗಿ ಪಾದಯಾತ್ರೆ ಮಾಡಬೇಕಾದ ಪರಿಸ್ಥಿತಿ ಇದೆ. ಮಕ್ಕಳನ್ನು ಮುಂಜಾನೆ ಶಾಲೆಗೆ ಕಳಿಸಿದರೆ ಸಂಜೆ ಬರುವವರೆಗೂ ಆತಂಕ ಮನೆ ಮಾಡಿರುತ್ತದೆ. ಇಲ್ಲಿಯ ರಸ್ತೆ ಅಷ್ಟು ಅಪಾಯಕಾರಿಯಾಗಿದೆ. ಇದೇ ಕಾರಣಕ್ಕೆ ಗ್ರಾಮದ ಬಹುತೇಕ ಮಕ್ಕಳು ಅರ್ಧಕ್ಕೆ ಶಿಕ್ಷಣ ಮೊಟಕುಗೊಳಿಸುತ್ತಿದ್ದಾರೆ ಎನ್ನುತ್ತಾರೆ ಅಲ್ಲಿನ ಗ್ರಾಮಸ್ಥರು.
“ಈ ಪ್ರದೇಶದ ದಲಿತ ಸಮುದಾಯ ಕಳೆದ ನೂರಾರು ವರ್ಷಗಳಿಂದ ಕೂಲಿ ಕಾರ್ಮಿಕ ಕೆಲಸಗಳಲ್ಲಿ ತೊಡಗಿದ್ದರೂ, ಈವರೆಗೆ ಅಭಿವೃದ್ಧಿಯ ಸ್ಪರ್ಶವನ್ನೇ ಕಾಣಿಸಿಲ್ಲ. ಸಂಬಂಧಪಟ್ಟ ಇಲಾಖೆಗಳು ಯಾವುದೇ ಕ್ರಮ ಕೈಗೊಂಡಿಲ್ಲ. ಪ್ರತಿಯೊಬ್ಬ ಜನಪ್ರತಿನಿಧಿಯೂ ವೋಟಿಗೆ ಬರುವಾಗ ಮಾತ್ರ ಈ ದಾರಿಗೆ ಹೆಜ್ಜೆ ಇಡುತ್ತಾರೆ. ನಂತರ ಇನ್ನೊಂದು ಚುನಾವಣೆ ಬರುವವರೆಗೆ ನಮ್ಮ ಗ್ರಾಮದ ಹೆಸರು ಮರೆತು ಹೋಗುತ್ತದೆ” ಎಂಬುದು ಸ್ಥಳೀಯರ ವೇದನೆ.

ಗ್ರಾಮದ ನಿವಾಸಿ ರಂಗಮ್ಮ ಈದಿನ ಡಾಟ್ ಕಾಮ್‌ನೊಂದಿಗೆ ಮಾತನಾಡಿ, “ಸುಮಾರು ವರ್ಷಗಳಿಂದ ರಸ್ತೆ ಇಲ್ಲದೇ ಬೃಹತ್ತಾದ ಕಲ್ಲುಗಳ ಮೇಲೆ ಕಾಲಿಟ್ಟು ವೃದ್ಧರು, ಮಕ್ಕಳು, ಮಹಿಳೆಯರು ಸೇರಿ ಗ್ರಾಮದ ಪ್ರತಿಯೊಬ್ಬರೂ ನಡೆಯಬೇಕು. ಕೆಲವೊಮ್ಮೆ ರಾತ್ರಿ ವೇಳೆ ನಡೆಯುವಾಗ ಕಲ್ಲುಗಳ ಮೇಲಿಂದ ಬಿದ್ದು ಗಾಯಗೊಂಡು, ಲಕ್ಷಾಂತರ ರೂಪಾಯಿ ಖರ್ಚು ಮಾಡಬೇಕಾಗಿದೆ. ಕೆಲವೊಮ್ಮೆ ಚಿಕಿತ್ಸೆಗೆ ಹಣವಿಲ್ಲದೆ ನಮ್ಮಿಂದ ಅಗಲಿದ ಉದಾಹರಣೆಗಳೂ ಇವೆ” ಎಂದರು.
“ಕೆಲವು ದಿನಗಳ ಹಿಂದೆ ಗರ್ಭಿಣಿ ಮಹಿಳೆಗೆ ನೋವು ಕಾಣಿಸಿಕೊಂಡಾಗ ಆಂಬುಲೆನ್ಸ್ ಗೆ ಕರೆ ಮಾಡಿದೆವು. ಆಗ, ರಸ್ತೆ ಇಲ್ಲ ಬರಲು ಆಗಲ್ಲ ಎಂದು ನೇರವಾಗಿ ಹೇಳಿಬಿಟ್ಟರು. ಹೇಗೋ ಮಾಡಿ ಹೋದೆವು. ಮಾರ್ಗ ಮಧ್ಯದಲ್ಲಿಯೆ ಸಮಸ್ಯೆ ಉಂಟಾಯಿತು. ನಂತರ ಆಸ್ಪತ್ರೆಗೆ ತೆರಳಿದಾಗ ವೈದ್ಯರು ಮಗು ಸಾವನ್ನಪ್ಪಿದೆ ಎಂದು ಹೇಳಿದರು” ಎಂದು ಅಸಮಾಧಾನ ವ್ಯಕ್ತಪಡಿಸಿದರು.
ದಲಿತ ಮುಖಂಡ ಹನುಮಂತಪ್ಪ ಮನ್ನಾಪುರಿ ಮಾತನಾಡಿ, “ಈ ಕಾಲೋನಿಯು ಪಟ್ಟಣ ಪುರಸಭೆ ವ್ಯಾಪ್ತಿಯಲ್ಲಿಯೇ ಇದೆ. ಹಲವು ವರ್ಷಗಳಿಂದ ಈ ಕಾಲೋನಿಯಲ್ಲಿ ನೂರಾರು ಕುಟುಂಬಗಳು ವಾಸಿಸುತ್ತಿವೆ. ಆದರೆ ಇಲ್ಲಿ ಕುಡಿಯುವ ನೀರು, ಸರಿಯಾದ ರಸ್ತೆ ಇಲ್ಲ. ನಗರ ವ್ಯಾಪ್ತಿಯಲ್ಲಿಯೇ ಇಂತಹ ದುಸ್ಥಿತಿಯಿದ್ದರೆ, ಇನ್ನು ಹಳ್ಳಿಗಳಲ್ಲಿ ಯಾವ ರೀತಿ ಇರಬಹುದು?” ಎಂದು ಬೇಸರ ವ್ಯಕ್ತಪಡಿಸಿದರು.

“ಕಾಲೋನಿಗೆ ಸರ್ಕಾರದಿಂದ ಇಲ್ಲಿಯವರೆಗೂ ಯಾವುದೇ ಮೂಲ ಸೌಕರ್ಯ ಒದಗಿಸಿರುವುದಿಲ್ಲ. ಸುಮಾರು 80 ರಿಂದ 90 ಮಕ್ಕಳು ಇದ್ದಾರೆ. ಅಂಗನವಾಡಿ, ಶಾಲೆ ಇಲ್ಲ. 1 ರಿಂದ 5 ನೇ ತರಗತಿವರೆಗೆ ಓದುವ 50 ಮಕ್ಕಳಿದ್ದಾರೆ. ಪ್ರತಿನಿತ್ಯ ಶಾಲೆಗೆ ಬಿಡಲು ಪೋಷಕರೇ ಹೋಗಬೇಕು. ಹಲವು ಬಾರಿ ಅಧಿಕಾರಿಗಳ ಗಮನಕ್ಕೆ ತಂದರೂ ಅಶ್ವಾಸನೆಗಳಷ್ಟೇ ಆಗಿವೆ” ಎಂದರು.
ಇದನ್ನೂ ಓದಿ: ಕಾಡುಗಳಲ್ಲಿ ಮೇಯಿಸುವಿಕೆ ನಿಷೇಧ ಸರಿ.. ಆದರೆ ಸಂಪೂರ್ಣ ನ್ಯಾಯೋಚಿತವೆ?
ಗ್ರಾಮದ ನಿವಾಸಿ ಲಕ್ಷ್ಮೀ ಮಾತನಾಡಿ, “ಗ್ರಾಮಕ್ಕೆ ಸೂಕ್ತ ರಸ್ತೆ ಇಲ್ಲದ ಕಾರಣ ಅನಾರೋಗ್ಯಕ್ಕೆ ತುತ್ತಾದವರನ್ನು ಸರಿಯಾದ ಸಮಯಕ್ಕೆ ಕರೆದುಕೊಂಡು ಹೋಗಲು ಸಾಧ್ಯವಾಗುತ್ತಿಲ್ಲ. ಮನೆಗೆ ಬೇಕಾದ ಅಗತ್ಯ ವಸ್ತುಗಳನ್ನೂ ತಲೆಯ ಮೇಲೆಯೇ ಹೊತ್ತು ಬೃಹತ್ ಕಲ್ಲುಗಳ ಮೇಲೆಯೇ ಹೊತ್ತುಕೊಂಡು ಓಡಾಡಬೇಕಾದ ಸ್ಥಿತಿ ಇದೆ. ಇದೇ ಕಾರಣಕ್ಕೆ ಗ್ರಾಮದ ಬಹುತೇಕ ಮಕ್ಕಳು ಅರ್ಧಕ್ಕೆ ಶಿಕ್ಷಣ ಮೊಟಕುಗೊಳಿಸುತ್ತಿದ್ದಾರೆ. ದುಡಿದು ತಿನ್ನುವ ನಮಗೆ ಮಳೆಗಾಲದಲ್ಲಿ ಸಣ್ಣ ವಸ್ತು ತರಬೇಕಾದರೂ ನಡೆದೇ ಸಾಗಬೇಕು. ಅದೆಷ್ಟೋ ಮನೆಗಳಲ್ಲಿ ಸಂಬಂಧ ಬೆಳೆಸಲು ಯಾರೂ ಮುಂದೆ ಬಾರದ ಕಾರಣ ಯುವಕರ ಮದುವೆ ಮಾಡಲಾಗದ ಸ್ಥಿತಿ ಇದೆ. ಇಷ್ಟಾದರೂ ಜನಪ್ರತಿನಿಧಿಗಳು ಅನುದಾನ ಮಂಜೂರು ಮಾಡಲು ಮುಂದಾಗುತ್ತಿಲ್ಲ” ಎಂದರು.

ರಫಿ ಗುರುಗುಂಟ
ಗುಲಬರ್ಗಾ ವಿವಿಯಿಂದ ಪತ್ರಿಕೋದ್ಯಮದಲ್ಲಿ ಎಂ ಎ ಪದವಿ, ಕಲ್ಯಾಣ ಕರ್ನಾಟಕ ವಲಯ ಕೋರ್ಡಿನೇಟರ್