ಪೊಲೀಸ್ ಇಲಾಖೆ ವಶಪಡಿಸಿಕೊಂಡಿದ್ದ ಸುಮಾರು 5 ಲಕ್ಷ ಮೌಲ್ಯದ ಕರ್ಕಶ ಧ್ವನಿಯ ದ್ವಿಚಕ್ರ ವಾಹನಗಳ ಸೈಲೆನ್ಸರ್‌ಗಳನ್ನು ನಗರದ ಶಿಡ್ಲಘಟ್ಟ ವೃತ್ತದಲ್ಲಿ ಬುಧವಾರ ಎಸ್ಪಿ ಕುಶಾಲ್ ಚೌಕ್ಸೆ ನೇತೃತ್ವದಲ್ಲಿ ಬುಲ್ಡೋಜರ್ ಮೂಲಕ ನಾಶಗೊಳಿಸಲಾಯಿತು.
ಈ ವೇಳೆ ಮಾತನಾಡಿದ ಎಸ್ಪಿ ಕುಶಾಲ್ ಚೌಕ್ಸೆ, ನಗರದಾದ್ಯಂತ ಕರ್ಕಶ ಧ್ವನಿಯ ಮೂಲಕ ಸಾರ್ಚಜನಿಕರಿಗೆ, ಸವಾರರಿಗೆ ಕಿರಿಕಿರಿ ಉಂಟುಮಾಡುತ್ತಿದ್ದ ಸುಮಾರು 150 ದ್ವಿಚಕ್ರ ವಾಹನಗಳ ಸೈಲೆನ್ಸರ್‌ಗಳನ್ನು ಕಳೆದ 15 ದಿನಗಳಿಂದ ವಶಪಡಿಸಿಕೊಂಡಿದ್ದು, ಇಂದು ಬುಲ್ಡೋಜರ್ ಮೂಲಕ ಧ್ವಂಸಗೊಳಿಸಲಾಗಿದೆ ಎಂದು ಹೇಳಿದರು.
ಮೋಜು, ಮಸ್ತಿ, ರೀಲ್ಸ್‌ಗಳ ಹುಚ್ಚಿನಿಂದ ಯುವಜನತೆ ಈ ರೀತಿಯ ಸೈಲೆನ್ಸರ್‌ಗಳನ್ನು ಬಳಸುತ್ತಿದ್ದಾರೆ. ಇದರಿಂದ ಸಾರ್ವಜನಿಕರಿಗೆ ಕಿರಿಕಿರಿಯುಂಟಾಗುತ್ತಿದ್ದ ಹಿನ್ನೆಲೆ ಇಲಾಖೆ ವತಿಯಿಂದ ಕ್ರಮ ವಹಿಸಲಾಗಿದೆ. ಒಂದೊಂದು ಸೈಲೆನ್ಸರ್‌ಗಳು ದುಬಾರಿ ಬೆಲೆಯದ್ದಾಗಿದ್ದು, 10 ಸಾವಿರದಿಂದ 50 ಸಾವಿರದವರೆಗೆ ಬೆಲೆ ಬಾಳುತ್ತವೆ. ಒಟ್ಟಾರೆಯಾಗಿ ಇಂದು 5 ಲಕ್ಷ ಮೌಲ್ಯದ 150 ಸೈಲೆನ್ಸರ್‌ಗಳನ್ನು ನಾಶಪಡಿಸಲಾಗಿದೆ ಎಂದರು.
ಇದಿಷ್ಟೇ ಅಲ್ಲದೆ ಸೈಲೆನ್ಸರ್ ತಯಾರಿಸುವ ಗ್ಯಾರೇಜ್ ಹಾಗೂ ಅಂಗಡಿ ಮಾಲೀಕರಿಗೂ ಸಹ ಇಲಾಖೆ ವತಿಯಿಂದ ಎಚ್ಚರಿಕೆ ನೀಡಲಾಗಿದೆ. ಜತೆಗೆ ತೀಕ್ಷ್ಣ ಸ್ವರೂಪದ ಎಲ್.ಇ.ಡಿ ಬಲ್ಬ್ ಅಳವಡಿಸುವ ಸವಾರರಿಗೂ ಈಗಾಗಲೇ ಎಚ್ಚರಿಕೆ ನೀಡಲಾಗಿದ್ದು, ಬಳಕೆ ಮುಂದುವರಿದರೆ ಮುಂದಿನ ದಿನಗಳಲ್ಲಿ ಎಲ್.ಇ.ಡಿ ಬಲ್ಬ್‌ಗಳನ್ನೂ ವಶಪಡಿಸಿಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.
ಇದೇ ವೇಳೆ ಗಸ್ತು ವಾಹನಗಳನ್ನು ಚಲಾಯಿಸುವ ಮೂಲಕ ಎಸ್ಪಿ ಕುಶಾಲ್ ಚೌಕ್ಸೆ ಸಾರ್ವಜನಿಕರಲ್ಲಿ ಅರಿವು ಮೂಡಿಸಿದರು.
ಈ ಸುದ್ದಿ ಓದಿದ್ದೀರಾ? ಚಿಕ್ಕಬಳ್ಳಾಪುರ | ಈದಿನ ಸಹಾಯವಾಣಿ ಬಿಡುಗಡೆಗೊಳಿಸಿದ ಸಚಿವ ಎಂ.ಸಿ.ಸುಧಾಕರ್
ಈ ವೇಳೆ ಎಎಸ್ಪಿ ರಾಜಾ ಖಾಸೀಂ, ಸಂಚಾರಿ ಪೊಲೀಸ್ ಠಾಣೆ ಅಧಿಕಾರಿ ಮಂಜುಳ, ನಗರ ಪೊಲೀಸ್ ಇನ್ಸ್ಪೆಕ್ಟರ್ ನಂಜುಡಯ್ಯ ಹಾಗೂ ಸಿಬ್ಬಂದಿ ವರ್ಗ ಹಾಜರಿದ್ದರು.