ಪುರುಷ ನಿರ್ಮಿತ ಜಾತಿಮತಗಳಲ್ಲಿ ಸಂಪ್ರದಾಯದ ಹೆಸರಿನಲ್ಲಿ ಹೆಣ್ಣಿನ ಶೋಷಣೆ ಮಾಡಲಾಗುತ್ತಿದೆ. ಸನಾತನ ಧರ್ಮದ ಸಂಸ್ಕೃತಿಯ ಕಟ್ಟುಪಾಡಿನಲ್ಲಿ ಹೆಣ್ಣನ್ನು ಬಂಧಿಸಿಡಲಾಗಿದೆ. ಹೆಣ್ಣುಮಕ್ಕಳು ಕೇವಲ ಓಟ್ ಬ್ಯಾಂಕ್ ಅಲ್ಲ. ಆಕೆ ರಾಜಕೀಯ ಒಳಗೊಂಡಂತೆ ಎಲ್ಲ ಕ್ಷೇತ್ರದಲ್ಲಿ ತೊಡಗಿಸಿಕೊಳ್ಳಬೇಕಾದ ಅವಶ್ಯಕತೆ ಇದೆ ಎಂದು ಲೇಖಕಿ, ಸಾಮಾಜಿಕ ಹೋರಾಟಗಾರ್ತಿ ರೂಪ ಹಾಸನ ಅಭಿಪ್ರಾಯಪಟ್ಟರು.
ದಾವಣಗೆರೆಯಲ್ಲಿ ಅಖಿಲ ಭಾರತ ಮಹಿಳಾ ಸಾಂಸ್ಕೃತಿಕ ಸಂಘಟನೆ ಆಯೋಜಿಸಿದ್ದ 7ನೇ ರಾಜ್ಯ ಮಟ್ಟದ ಸಮ್ಮೇಳನದಲ್ಲಿ ಅವರು ಮಾತನಾಡಿದರು. “ಹೆಣ್ಣು ಸಂಕುಲ ಸತ್ತರೆ ಇಡೀ ಮನುಷ್ಯ ಸಂಕುಲ ಸತ್ತಂತೆ. ಗ್ರಾಮೀಣ ಪ್ರದೇಶದ ಹೆಣ್ಣು ಮಕ್ಕಳಿಗೆ ಶಿಕ್ಷಣ, ಉದ್ಯೋಗ ಸಿಗುವಂತಾಗಬೇಕು. ಮಹಿಳೆಯರ ದುಡಿಮೆಯಿಲ್ಲದೇ ಸಮಾಜದ ಏಳಿಗೆ ಸಾಧ್ಯವಿಲ್ಲ. ಸಮಾಜದ ಏಳಿಗೆಗೆ ಕಾರಣವಾಗಿರುವ ಮಹಿಳೆಗೆ ಕಟ್ಟುಪಾಡುಗಳನ್ನು ವಿಧಿಸಲಾಗುತ್ತಿರುವುದು ದುರಂತ” ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಸಮಾರಂಭದಲ್ಲಿ ಎಸ್ ಯುಸಿಐ ರಾಜ್ಯ ಕಾರ್ಯದರ್ಶಿ ಕೆ.ಉಮಾ,ಸ್ವಾಗತ ಸಮಿತಿ ಅಧ್ಯಕ್ಷೆ ಡಾ.ಪಿ.ಎಂ.ಅನುರಾಧ, ಎಐಎಂಎಸ್ ಎಸ್ ನ ಛಬ್ಬಿ ಮೊಹಂತಿ,ಡಾ.ಸುಧಾ ಕಾಮತ್,ಬಿ.ಆರ್ ಶೋಭಾ . ಅಪರ್ಣಾ,ಎಸ್. ಉಪಸ್ಥಿತರಿದ್ದರು. ಜನವರಿ 6 & 7 ರಂದು ಎರಡು ದಿನಗಳ ಕಾಲ ಮಹಿಳಾ ಸಮ್ಮೇಳನ ನಡೆಯಲಿದೆ.