ಸಂವಿಧಾನ ಬದಲಿಸುತ್ತೇವೆ, ಸಂವಿಧಾನ ತಿದ್ದುಪಡಿ ಮಾಡಿಬಿಡುತ್ತೇವೆ ಎನ್ನುವವರ ವಿರುದ್ಧವಾಗಿ ಸಂವಿಧಾನದ ರಕ್ಷಣೆ ಮಾಡುವ ಸಲುವಾಗಿ ಸಂವಿಧಾನ ಸಂರಕ್ಷಕರ ಪಡೆ ಕಟ್ಟುವ ಮಹತ್ವದ ಕಾರ್ಯಕ್ಕೆ ದಾವಣಗೆರೆಯಲ್ಲಿ ಚಾಲನೆ ದೊರೆಯಲಿದೆ. ಸಂವಿಧಾನ ಸಂರಕ್ಷಕರ ಸಮಾವೇಶವು ಹತ್ತರಲ್ಲಿ ಮತ್ತೊಂದು ಎನ್ನುವ ಕಾರ್ಯಕ್ರಮವಲ್ಲ. ಸಂವಿಧಾನ ಸಂರಕ್ಷಕರ ಕಾರ್ಯಪಡೆಗೆ ಹಾಕುತ್ತಿರುವ ಅಡಿಗಲ್ಲು, ಬುನಾದಿ ಎಂದೇ ಹೇಳಲಾಗುತ್ತಿದೆ.

ದಾವಣಗೆರೆಯಲ್ಲಿ ಏಪ್ರಿಲ್ 26ರಂದು ಹೈಸ್ಕೂಲ್ ಆವರಣದ ಬಳಿಯ ಬೀರಲಿಂಗೇಶ್ವರ ಮೈದಾನದಲ್ಲಿ ಸಂವಿಧಾನ ಸಂರಕ್ಷಕರ ಸಮಾವೇಶ ಹಮ್ಮಿಕೊಳ್ಳಲಾಗಿದೆ. ಸಂವಿಧಾನ ಸಂರಕ್ಷಣಾ ಪಡೆ ಕಟ್ಟುವ ಮಹಾಯಾನದ ಚಾಲನೆಗಾಗಿ ಸಂವಿಧಾನ ಸಂರಕ್ಷಕರ ಸಮಾವೇಶ ಆಯೋಜಿಸಿದ್ದು, ರಾಜ್ಯದ ಮೂಲೆ ಮೂಲೆಗಳಿಂದ ಸಂವಿಧಾನ ಸಂರಕ್ಷಕರ ಸಮಾವೇಶಕ್ಕೆ ಸಾಕ್ಷಿಯಾಗಲು, ಕಾರ್ಯಪಡೆಯಲ್ಲಿ ಪಾಲುದಾರರಾಗಲು ಜನ ಸಮೂಹ ಆಗಮಿಸುತ್ತಿದೆ.

ಮೇಲು-ಕೀಳೆಂಬ ತಾರತಮ್ಯ ತೊಲಗಬೇಕು, ಸಮಾನ ಶಿಕ್ಷಣ, ಅವಕಾಶ, ಸಾಮಾಜಿಕ ಸ್ಥಾನಮಾನ ಈ ದೇಶದ ಕಟ್ಟಕಡೆಯ ಪ್ರಜೆಗೂ ಸಿಗಬೇಕು ಎಂಬುದು ಸಂವಿಧಾನ ಕರ್ತೃಗಳ ಆಶಯ. ಸ್ವಾತಂತ್ರ್ಯ ಗಳಿಸಿ 78 ವರ್ಷಗಳಾದರೂ ಅದು ದೇಶವಾಸಿಗಳಿಗೆ ಸಿಕ್ಕಿಲ್ಲ ಎಂಬುದೇ ದುರಂತ. ಅಲ್ಲದೆ ಅದು ದೊರಕದಂತೆ ತಡೆಯಲು ಸಂವಿಧಾನ ಬದಲಿಸುವ, ತಿರುಚುವ ಸಂವಿಧಾನ ವಿರೋಧಿಗಳ ನಡುವೆ ಸಂವಿಧಾನದ ರಕ್ಷಣೆ ಎಂದಿಗಿಂತಲೂ ಇಂದು ಹೆಚ್ಚು ಅಗತ್ಯವಾಗಿದೆ. ಈ ನಿಟ್ಟಿನಲ್ಲಿ ಸಮಾನ ಅವಕಾಶ, ಸ್ಥಾನಮಾನ, ಘನತೆಯ ಬದುಕು ಸಿಗಬೇಕೆಂಬ ಆಶಯವನ್ನಿಟ್ಟುಕೊಂಡಿರುವ ಭಾರತದ ಶ್ರೇಷ್ಠ ಸಂವಿಧಾನದ ರಕ್ಷಣೆಗೆ ಜನಸಮೂಹ ಕಾರ್ಯಕ್ರಮದ ಮೂಲಕ ಮೈಕೊಡವಿಕೊಂಡು ನಿಲ್ಲಬೇಕಿದೆ.

ಚಳುವಳಿ, ಸಂಘಟನೆ, ಹೋರಾಟಗಳ ಮಹತ್ವವನ್ನೇ ಮರೆತಿರುವ, ಗೊತ್ತಿಲ್ಲದ ಇಂದಿನ ಜನಾಂಗಕ್ಕೆ, ಯುವ ಸಮೂಹಕ್ಕೆ ಸಮಾನತೆ, ನ್ಯಾಯ ಸಿಗದಿದ್ದಾಗ ಹೋರಾಟ ಮಾಡುವ ಅನಿವಾರ್ಯತೆಯನ್ನು ಯುವ ಸಮೂಹಕ್ಕೆ ಮನಗಾಣಿಸಬೇಕು. ಅದನ್ನು ಸಂವಿಧಾನ ಸಂರಕ್ಷಕರ ಸಮಾವೇಶದ ಮೂಲಕ ತಿಳಿಸುವ ಕಾರ್ಯವಾಗಬೇಕು ಎನ್ನುವುದು ಸಂವಿಧಾನ ಪ್ರಿಯರೊಬ್ಬರ ಅನಿಸಿಕೆ.

ಭಾರತ ಸಾಂಸ್ಕೃತಿಕ ವೈವಿಧ್ಯಮಯ ದೇಶ. ಇಡೀ ದೇಶ ಏಕತೆ, ವೈವಿಧ್ಯತೆಯನ್ನು ಹೊಂದಿರುವ, ಸಮಾನತೆಯಿಂದ ಕೂಡಿ ಬಾಳುವ ಆಶಯವುಳ್ಳ ನಮ್ಮ ಸಂವಿಧಾನವನ್ನು ಸಂರಕ್ಷಿಸಿದರೆ ಮಾತ್ರ ಸಂವಿಧಾನದ ಆಶಯ ಈಡೇರಿಸಲು ಸಾಧ್ಯ. ಇಲ್ಲವಾದಲ್ಲಿ ಸಂವಿಧಾನವನ್ನೇ ಕಳೆದುಕೊಳ್ಳುವ ಸ್ಥಿತಿ ಬಂದೊದಗಿದೆ ಎನ್ನುವುದು ಸಂಘಟಕರ ಮಾತು.

ಯಾವುದೇ ರೀತಿಯ ಸ್ಥಾನಮಾನ ದೊರೆಯದಂತೆ ವಿವಿಧ ರೀತಿಯ ಕಾರಣಗಳನ್ನು ಹುಡುಕುತ್ತಾ ಬದಲಾವಣೆಯ ನೆಪದಲ್ಲಿ ಶೋಷಿತರನ್ನು ಮತ್ತೆ ಮತ್ತೆ ತುಳಿಯುವ ಪ್ರಯತ್ನಗಳು ವ್ಯವಸ್ಥಿತವಾಗಿ ನಡೆಯುತ್ತಿವೆ. ಸಂವಿಧಾನವು ಕೆಳ ವರ್ಗದ ಜನರಿಗೆ, ಮಹಿಳಾ ವರ್ಗಕ್ಕೆ ಆದ್ಯತೆ ನೀಡಿರುವುದು ಹಲವಾರು ರೀತಿಯ ಕೊಡುಗೆಗಳನ್ನು ನೀಡಿರುವುದು ಸಂವಿಧಾನ ವಿರೋಧಿಗಳಿಗೆ ಅಪಥ್ಯವಾಗಿದೆ. ಈ ಕಾರಣಕ್ಕಾಗಿ ಹಲವಾರು ದಶಕಗಳಿಂದ ಸಂವಿಧಾನವನ್ನು ವಿರೋಧಿಸುತ್ತಾ ಬಂದಿದ್ದಾರೆ. ಆದ್ದರಿಂದ ಸಂವಿಧಾನ ರಕ್ಷಣೆಗಾಗಿ ನಾವು ಯಾವುದೇ ರೀತಿಯ ಹೋರಾಟ, ಬಲಿದಾನ, ತ್ಯಾಗಕ್ಕೆ ಸಿದ್ದ ಎನ್ನುವುದು ಸಂವಿಧಾನ ಸಂರಕ್ಷಕರ ಪಡೆಯ ಯುವಕರೊಬ್ಬರು ದೃಡ ಸಂಕಲ್ಪ ವ್ಯಕ್ತಪಡಿಸಿದರು.
ಈ ಬಗ್ಗೆ ಮಾತನಾಡಿದ ಸಂವಿಧಾನ ಸಂರಕ್ಷಕರ ಕಾರ್ಯಪಡೆಯ ಮುಖಂಡರಾದ ಆವರಗೆರೆ ರುದ್ರಮುನಿ ಮಾತನಾಡಿ, “ಭಾರತಕ್ಕೆ ಸ್ವಾತಂತ್ರ್ಯ ಬರುವ ಮುನ್ನ ಈ ದೇಶದಲ್ಲಿ ಅಜ್ಞಾನ, ಅನಾಚಾರ, ಮೂಡನಂಬಿಕೆಗಳಲ್ಲಿ ಜನ ಬದುಕುತ್ತಿದ್ದರು. ಸಂವಿಧಾನ ಬಂದ ನಂತರವಷ್ಟೇ ನಾವು ಶಾಲೆ, ಶಿಕ್ಷಣ ಕಲಿತು ಸ್ವಾಭಿಮಾನದ ಬದುಕು ಬದುಕುತ್ತಿದ್ದೇವೆ. ಸಾಮಾಜಿಕ, ಆರ್ಥಿಕ, ರಾಜಕೀಯ ನ್ಯಾಯ, ಸಮಾನತೆ ಒದಗಿಸುವ ಸಂವಿಧಾನಕ್ಕೆ ಕುತ್ತು ಬರುವ ಈ ಸಂದರ್ಭದಲ್ಲಿ ಸಂವಿಧಾನ ಸಂರಕ್ಷಕರ ಸಮಾವೇಶ ನೆಡೆಯುತ್ತಿದೆ. ಸಂವಿಧಾನದ ರಕ್ಷಣೆಗೆ ಎಂತದ್ದೇ ಹೋರಾಟಕ್ಕೆ ನಾವು ಸಿದ್ಧ” ಎಂದು ದೃಢವಾಗಿ ತಿಳಿಸಿದರು.

ದಲಿತ ಮುಖಂಡ ಮಂಜುನಾಥ ಕುಂದುವಾಡ ಮಾತನಾಡಿ, “ಕೋಮುವಾದಿ ಶಕ್ತಿಗಳು ಮೆರೆಯುತ್ತಿದ್ದು,
ಸಂವಿಧಾನ ಬದಲಿಸುತ್ತೇವೆ ಎಂದು ಹೇಳುತ್ತಾ ಸಂವಿಧಾನಕ್ಕೆ ಅಪಚಾರ ಮಾಡುತ್ತಿದ್ದಾರೆ. ಸರ್ವರಿಗೂ ಸಮಪಾಲು, ಸಮಾನತೆ ಒದಗಿಸುವ ಬಾಬಾ ಸಾಹೇಬ್ ಅಂಬೇಡ್ಕರ್ ನೀಡಿರುವ ಸಂವಿಧಾನ ಉಳಿಸುವ ನಿಟ್ಟಿನಲ್ಲಿ ಅಂಬೇಡ್ಕರ್ ಪ್ರಿಯರು, ಸಂವಿಧಾನ ಪ್ರಿಯರು, ದೇಶಪ್ರೇಮಿಗಳು, ಒಟ್ಟಾಗಿ ಸಂರಕ್ಷಕರ ಸಮಾವೇಶ ನೆಡೆಯುತ್ತಿದ್ದು, ಇದು ಸಂವಿಧಾನ ಸಂರಕ್ಷಕರ ಪಡೆಯಾಗಿ ಸಂವಿಧಾನ ರಕ್ಷಣೆಯ ಕಾವಲಿಗೆ ನಿಲ್ಲಲಿದೆ” ಎಂದು ತಿಳಿಸಿದರು.
ಈ ಸುದ್ದಿ ಓದಿದ್ದೀರಾ? ದಾವಣಗೆರೆ | ಪಹಲ್‌ಗಾಮ್‌ನಲ್ಲಿ ಪ್ರವಾಸಿಗರ ಮೇಲೆ ಭಯೋತ್ಪಾದಕ ದಾಳಿಗೆ ಎಸ್‌ಯುಸಿಐ(ಸಿ) ಖಂಡನೆ,
ರಾಜ್ಯದ ಮೂಲೆ ಮೂಲೆಗಳಿಂದ ಕನಿಷ್ಠ 15 ರಿಂದ 20 ಸಾವಿರ ಸಂರಕ್ಷಕರು ಸಮಾವೇಶಕ್ಕೆ ಆಗಮಿಸುತ್ತಿದ್ದು ಕಾರ್ಯಕ್ರಮದಲ್ಲಿ ಬೆಳಿಗ್ಗೆ 11 ಗಂಟೆಗೆ ಸಂವಿಧಾನ ಪೆರೇಡ್ ನೆಡೆಯಲಿದೆ. ಬೀರಲಿಂಗೇಶ್ವರ ದೇವಸ್ಥಾನ ಆವರಣದಿಂದ ಹೊರಟು ಎ ವಿ ಕೆ ಕಾಲೇಜು ರಸ್ತೆ, ಅಂಬೇಡ್ಕರ್ ವೃತ್ತ, ಜಯದೇವ ವೃತ್ತ, ಗಾಂಧಿ ವೃತ್ತ ಮಾರ್ಗವಾಗಿ ಪುನಃ ಬೀರಲಿಂಗೇಶ್ವರ ದೇವಸ್ಥಾನ ಆವರಣದಲ್ಲಿ ಸಮಾವೇಶಗೊಳ್ಳಲಿದೆ. ಮಧ್ಯಾಹ್ನ 2 ಗಂಟೆಗೆ ಬಹಿರಂಗ ಸಮಾವೇಶ ನಡೆಯಲಿದೆ. ಕಾರ್ಯಕ್ರಮದಲ್ಲಿ ಗುಜರಾತ್ ಶಾಸಕ ಜಿಗ್ನೇಶ್ ಮೇವಾನಿ, ನಟ ಪ್ರಕಾಶ್ ರೈ, ಸಾಹಿತಿಗಳಾದ ಪುರುಷೋತ್ತಮ್ ಬಿಳಿಮಲೆ, ಬರಗೂರು ರಾಮಚಂದ್ರಪ್ಪ, ಆರ್ಥಿಕ ತಜ್ಞ ಪರಕಾಲ ಪ್ರಭಾಕರ, ಸಮಾಜವಾದಿ ನಾಯಕ ಶಾಸಕ ಬಿ ಆರ್ ಪಾಟೀಲ್, ಮಲ್ಲಿಕಾ ಘಂಟಿ, ಸಬಿಹಾ ಭೂಮಿಗೌಡ, ಷರೀಫಾ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿರಲಿದ್ದಾರೆ.
ಸಂವಿಧಾನ ಸಂರಕ್ಷಕರ ಪಡೆ ಕಟ್ಟುವ ಮಹತ್ವದ ಕಾರ್ಯಕ್ಕೆ ಸಂವಿಧಾನ ಸಂರಕ್ಷಕರ ಸಮಾವೇಶ ನೆಡೆಯುತ್ತಿದ್ದು ಯಶಸ್ವಿಯಾಗಲಿ. ಸಂವಿಧಾನದ ಪರ ದೊಡ್ಡ ಧ್ವನಿಯಾಗಿ ಹೊರಹೊಮ್ಮಲಿ. ಸಂವಿಧಾನ ಶಿಲ್ಪಿ ಅಂಬೇಡ್ಕರ್ ಅವರ ಚಿಂತನೆಯಂತೆ ಭಾರತದ ಪ್ರತಿಯೊಬ್ಬ ಪ್ರಜೆಯೂ ಸಮಾನತೆಯ ಬದುಕು, ಘನತೆಯ ಬದುಕು ಸಿಗುವಂತಾಗಲಿ ಎನ್ನುವುದು ಸಂವಿಧಾನ ಪ್ರಿಯರು, ಸಂವಿಧಾನ ಸಂರಕ್ಷಕರ ಆಶಯ ಹಾಗೂ ಈದಿನ ಡಾಟ್ ಕಾಮ್ ಆಶಯವೂ ಹೌದು.

ವಿನಾಯಕ್ ಚಿಕ್ಕಂದವಾಡಿ
ದಾವಣಗೆರೆ, ಚಿತ್ರದುರ್ಗ ಜಿಲ್ಲಾ ಸಂಯೋಜಕರು