“ಕ್ರಾಂತಿಕಾರಿ ರಥಯಾತ್ರೆ ಮಾದಿಗ ಮೀಸಲಾತಿ ಹೋರಾಟ ಸಮಿತಿಯಿಂದ ಚಾಮುಂಡಿ ಬೆಟ್ಟದಿಂದ ಮೈಸೂರಿಗೆ ಬರುವ ರಥಯಾತ್ರೆ ಚಾಮುಂಡಿ ಬೆಟ್ಟದಲ್ಲಿ ದಿನಾಂಕ: 24-05-2025 ರಂದು ಶಾಂತಿಯುತವಾಗಿ ಅರೆಬೆತ್ತಲೆ, ಧರಣಿ ಮಾಡುವ ಸಂದರ್ಭದಲ್ಲಿ ಕಲ್ಲು ತೂರಲು ಪ್ರಯತ್ನಿಸಿದ 4 ಜನ ರಾಜಕೀಯದ ಬೆಂಬಲಿಗರನ್ನು ಬಂಧಿಸಿ ಜೈಲಿಗಟ್ಟುವ ಬದಲು ಶಾಂತಿಯುತವಾಗಿ ರಥಯಾತ್ರೆ ಮಾಡುವವರನ್ನು ಬಂಧಿಸಿರುವ ಪೊಲೀಸರ ಕ್ರಮ ಸಂದೇಹಾಸ್ಪದ ಮತ್ತು ಮಾದಿಗ ಮೀಸಲಾತಿ ಹೋರಾಟ ಹತ್ತಿಕ್ಕುವ ಕೆಲಸ” ಎಂದು ದಾವಣಗೆರೆ ದಲಿತ ಸಂಘಟನೆಗಳ ಒಕ್ಕೂಟದ ಮುಖಂಡರು ಕಿಡಿಕಾರಿದರು.

ದಾವಣಗೆರೆಯಲ್ಲಿ ಮಾದಿಗ ಮೀಸಲಾತಿಗಾಗಿ ಕ್ರಾಂತಿಕಾರಿ ರಥಯಾತ್ರೆ ಮಾಡುತ್ತಿರುವವರನ್ನು ಬಂಧಿಸಿದ ಕ್ರಮ ವಿರೋಧಿಸಿ, ದಾವಣಗೆರೆ ಉಪವಿಭಾಗಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದ ವೇಳೆ ಮಾತನಾಡಿದ ಒಕ್ಕೂಟದ ಮುಖಂಡ ಬಸವರಾಜು, “ಕಲ್ಲು ತೂರಾಟಕ್ಕೆ ಪ್ರಯತ್ನಿಸಿದ ರಾಜಕೀಯ ಬೆಂಬಲಿಗರನ್ನು ಕಾನೂನು ಕ್ರಮವಾಗಿ ಬಂಧಿಸಬೇಕಿತ್ತು. ಆದರೆ ಕ್ರಾಂತಿಕಾರಿ ರಥಯಾತ್ರೆಯನ್ನು ಶಾಂತಿಯುತವಾಗಿ ಅರಬೆತ್ತಲೆ, ಧರಣಿ ಮಾಡುವವರನ್ನು ಬಂಧಿಸಿರುತ್ತಾರೆ” ಎಂದು ಕಿಡಿಕಾರಿದರು.
ಒಕ್ಕೂಟದ ಮುಖಂಡ ದುಗ್ಗಪ್ಪ ಮಾತನಾಡಿ “ಬಂಧನಕ್ಕೊಳಪಡಿಸಿರುವುದು ಯಾವ ಕಾರಣಕ್ಕೆ ಎಂಬುವುದರ ಬಗ್ಗೆ ಸ್ಪಷ್ಟತೆ ಇಲ್ಲ. ನಿಖರ ಮಾಹಿತಿ ಜನಗಳಿಗೆ ತಿಳಿಸಬೇಕು. ಶಾಂತಿಯುತ ಅರೆಬೆತ್ತಲೆ ಮೈಸೂರಿಗೆ ಹೋಗುವ ಸಂದರ್ಭದಲ್ಲಿ ಅರೆಸ್ಟ್ ಮಾಡಿದ್ದಾರೆ. ಕೆಲವರು ವಿರೋಧ ಮಾಡುತ್ತಿದ್ದಾರೆಂದು ಪೊಲೀಸರು ಹೇಳುತ್ತಿದ್ದಾರೆ. ನಿಖರವಾದ ಮಾಹಿತಿ ಇಲ್ಲ ಒಳಮೀಸಲಾತಿ ಹೋರಾಟದ ಪಾದಯಾತ್ರೆ ಅಡ್ಡಿ ಮಾಡುವವರನ್ನು ಕಾನೂನು ಕ್ರಮ ಜಾರಿ ಮಾಡಿ ತಕ್ಷಣ ಬಂಧಿಸಬೇಕು. ಚಾಮುಂಡಿ ಬೆಟ್ಟದಲ್ಲಿ ಕಾರ್ಯಕ್ರಮ ಮಾಡುವ ಸಂದರ್ಭದಲ್ಲಿ ಗಲಾಟೆ, ಗಲಭೆ ಎಬ್ಬಿಸಲು ಕುತಂತ್ರ ನಡೆಸಲು ಬಂದಿರುವ 4 ಜನರನ್ನು ಬಂಧಿಸಿ ಕಾನೂನು ಕ್ರಮ ಕೈಗೊಳ್ಳಬೇಕು” ಎಂದು ಆಗ್ರಹಿಸಿದರು.
ಮುಖಂಡ ಜಿಗಳಿ ಹಾಲೇಶ್ ಮಾತನಾಡಿ “ಮಾದಿಗ ಮೀಸಲಾತಿ ಹೋರಾಟ ಸಮಿತಿಯವರು ಬೀದಿಗಳಿದು ಹೋರಾಟ ಮಾಡಿದರೆ ಬಂಧಿಸುತ್ತೇವೆ ಎಂದು ಪೊಲೀಸರು ಹೇಳುತ್ತಿದ್ದಾರೆ. ಟ್ರಾಫಿಕ್ ಸಮಸ್ಯೆ ಮೈಸೂರಲ್ಲಿ ಆಗುತ್ತೆ ಅಂತ ನೆಪ ಹೇಳುತ್ತಿದ್ದಾರೆ. ಕ್ರಾಂತಿಕಾರಿ ರಥಯಾತ್ರೆ ಕಾರ್ಯಕರ್ತರನ್ನು ಕೈ, ಮೈ ಮುಟ್ಟಿ ಎಳೆದಾಡುತ್ತಿದ್ದಾರೆ. ಪೊಲೀಸರು ಕಾರಣ ಇಲ್ಲದೆ ಬಂಧನ, ಆಧಾರವಿಲ್ಲದೆ ರಥಯಾತ್ರೆ ತಡೆಯುತ್ತಿದ್ದಾರೆ. ಸರ್ಕಾರ ಬಡ್ತಿ ಮೀಸಲಾತಿ ನಿಲ್ಲಿಸಬೇಕು. ಸರ್ಕಾರ ತುಳಿತಕ್ಕೊಳಗಾಗಿರುವ ಮಾದಿಗ ಸಮಾಜಕ್ಕೆ ರಕ್ಷಣೆ ಕೊಡುವುದು ಬಿಟ್ಟು ಮಾದಿಗರ ಹೋರಾಟ ಹತ್ತಿಕ್ಕುವ ದುಸ್ಸಾಹಸ ಮಾಡುತ್ತಿದೆ. ನ್ಯಾಯ ಒದಗಿಸಲು ಮಾದಿಗ ಮೀಸಲಾತಿ ಹೋರಾಟದ ಕ್ರಾಂತಿಕಾರಿ ಪಾದಯಾತ್ರೆ ಜೂನ್-09, 2025 ರಂದು ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಮಾದಿಗ ಮೀಸಲಾತಿ ಹೋರಾಟ ಸಮಿತಿ ಪಾದಯಾತ್ರೆ ಬರುವ ತನಕ ಪೊಲೀಸ್ ಬಂದೋಬಸ್ತು ಮಾಡಲು ರಾಜ್ಯ ಸರ್ಕಾರಕ್ಕೆ ಆಗ್ರಹ ಮಾಡುತ್ತೇವೆ” ಎಂದು ತಿಳಿಸಿದರು.
ಈ ಸುದ್ದಿ ಓದಿದ್ದೀರಾ? ದಾವಣಗೆರೆ | ನಟ ಅಹಿಂಸಾ ಚೇತನ್ ರ ಸಮಾನತೆಯ ಸಭೆ, ಪಾಲ್ಗೊಳ್ಳಲು ಸಮಾನ ಮನಸ್ಕರಿಗೆ ಆಹ್ವಾನ.
ಪ್ರತಿಭಟನೆಯಲ್ಲಿ ದಲಿತ ಸಂಘಟನೆಗಳ ಒಕ್ಕೂಟದ ಮುಖಂಡರಾದ ಹೆಗ್ಗೆರೆ ರಂಗಪ್ಪ, ಉದಯಪ್ರಕಾಶ್, ನಾಗರಾಜ್, ನಿರಂಜನ್ ಮೂರ್ತಿ, ಮಂಜುನಾಥ್, ಹನುಮಂತಪ್ಪ, ಅಂಜನಿ, ಸಂತೋಷ್, ಮಂಜುನಾಥ್ ಬಿ, ಸದಾನಂದ, ಕಿರಣ್, ಮಂಜುನಾಥ್ ಕೆ. ಸೇರಿದಂತೆ ಇತರರು ಹಾಜರಿದ್ದರು.