ಹಿರಿಯರಿಗೆ ಪೂಜೆ, ಗೌರವ ಸೂಚಿಸುವ ಹಾಗೂ ತ್ಯಾಗ ಬಲಿದಾನದ ಸಂಕೇತವಾಗಿರುವ ಈದ್ ಅಲ್-ಅಧಾ ಅಥವಾ ಬಕ್ರೀದ್ ಹಬ್ಬವನ್ನು ದಾವಣಗೆರೆಯಲ್ಲಿ ಮುಸಲ್ಮಾನ ಬಾಂಧವರು ಈದ್ಗಾ ಮೈದಾನ ಸೇರಿದಂತೆ ಹಲವು ಭಾಗಗಳಲ್ಲಿ ಪ್ರಾರ್ಥನೆ ನಡೆಸಿ, ಪ್ರವಾದಿ ಹಜರತ್ ಇಬ್ರಾಹಿಂ ಅವರ ತ್ಯಾಗವನ್ನು ಸ್ಮರಿಸುವ ಮೂಲಕ ಬಕ್ರೀದ್ ಹಬ್ಬದ ಸಂಭ್ರಮಾಚರಣೆಯನ್ನು ಮಾಡಿದರು.
ದಾವಣಗೆರೆಯ ಹರಿಹರ ರಸ್ತೆಯಲ್ಲಿರುವ ಖಬರ್ಸ್ಥಾನ್ ಬಳಿಯ ಈದ್ಗಾಮೈದಾನದಲ್ಲಿ ಸಾವಿರಾರು ಮುಸಲ್ಮಾನರು ಸೇರಿ ಸಾಮೂಹಿಕ ಪ್ರಾರ್ಥನೆ ನಡೆಸುವ ಮೂಲಕ ಬಲಿದಾನದ ಸಂಕೇತವಾಗಿ ಆಚರಿಸುವ ಬಕ್ರಿದ್ ಹಬ್ಬವನ್ನು ಆಚರಿಸಿ ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡು ಸಂಭ್ರಮಿಸಿದರು.

ಅಲ್ಲದೆ ನಗರದ ಬೇರೆ ಬೇರೆ ಭಾಗಗಳ ಖಬರ್ಸ್ಥಾನ್ ಗಳ ಬಳಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದ್ದಾರೆ. ರಂಜಾನ್ ನಂತರದ ಬರುವ ಎರಡನೆಯ ಹಬ್ಬವಾಗಿ ಬಕ್ರೀದ್ ವಿಶೇಷ ಹಬ್ಬವಾಗಿದೆ. ಈ ಹಬ್ಬದಲ್ಲಿ ತಮ್ಮ ಹಿರಿಯರಿಗೆ ವಿಶೇಷ ಪ್ರಾರ್ಥನೆಯನ್ನು ಕೂಡ ಸಲ್ಲಿಸಲಾಗುತ್ತದೆ. ಈದ್ ಅಲ್-ಅಧಾ ಎಂದು ಕರೆಯಲಾಗುವ ಬಕ್ರೀದ್ ಹಬ್ಬವನ್ನು ತ್ಯಾಗದ ಹಬ್ಬ ಎಂದು ಕೂಡ ಕರೆಯಲಾಗುತ್ತದೆ.

ಬಕ್ರೀದ್ ಆಚರಣೆಯ ಹಿಂದೆ ಪ್ರವಾದಿ ಹಜರತ್ ಇಬ್ರಾಹಿಂ ಅವರ ತ್ಯಾಗ ಬಲಿದಾನದ ಕಥೆಯಿದೆ. ಹಜರತ್ ಇಬ್ರಾಹಿಂ ಎನ್ನುವವರು ದೇವರ ಮೇಲೆ ಅಪಾರ ನಂಬಿಕೆಯನ್ನು ಹೊಂದಿದ್ದರು. ಒಮ್ಮೆ ಪ್ರವಾದಿ ಹಜರತ್ ಇಬ್ರಾಹಿಂ ತನ್ನ ಮಗನನ್ನು ತ್ಯಾಗ ಮಾಡುತ್ತಿದ್ದಂತೆ ಎಂದು ಕನಸು ಕಾಣುತ್ತಾರೆ. ತಾನು ಕಂಡ ಕನಸನ್ನು ದೇವರ ಸಂದೇಶವೆಂದೇ ಭಾವಿಸಿ, ತನ್ನ ಮಗ ಇಸ್ಮಾಯಿಲ್ ನನ್ನು ಬಲಿ ಕೊಡಲು ಮುಂದಾಗುತ್ತಾರೆ. ಆದರೆ ನಂತರ ದೇವರು ಮಗನ ಬದಲು ಪ್ರಾಣಿಯನ್ನು ಬಲಿ ಕೊಡುವ ಸಂದೇಶವನ್ನು ನೀಡುತ್ತಾನಂತೆ. ಆದ್ದರಿಂದ ಮಗನ ಬದಲಿಗೆ ತನ್ನ ಪ್ರೀತಿಯ ಕುರಿ ಮರಿಯನ್ನು ಬಲಿ ನೀಡುತ್ತಾರೆ. ಇದನ್ನು ಬಕ್ರಾ-ಈದ್’ ಅಂದರೆ ಬಕ್ರೀದ್ ಎಂದು ಕರೆಯಲಾಗುತ್ತದೆ. ಈ ಕಾರಣದಿಂದಲೇ ಈದ್-ಉಲ್-ಅಧಾ ದಿನದಂದು ಮೇಕೆಯನ್ನು ಬಲಿಕೊಡುವ ಸಂಪ್ರದಾಯವು ಪ್ರಾರಂಭವಾಯಿತು.
ಈ ಸುದ್ದಿ ಓದಿದ್ದೀರಾ? ಚಿತ್ರದುರ್ಗ | ಪಾವಗಡ ರಸ್ತೆ ಮೇಲ್ಸೇತುವೆ ನಿರ್ಮಾಣಕ್ಕೆ ರೈತ ಸಂಘ ಇತರೆ ಸಂಘಟನೆಗಳ ಅನಿರ್ದಿಷ್ಟ ಮುಷ್ಕರ
ಹೀಗೆ ಬಲಿ ಕೊಟ್ಟ ಮೇಕೆ, ಟಗರು ಅಥವಾ ಕುರಿಯ ಮಾಂಸವನ್ನು ಮೂರು ಭಾಗಗಳಾಗಿ ವಿಂಗಡಿಸಿ ಒಂದು ಭಾಗವನ್ನು ತಮ್ಮ ನೆರೆಹೊರೆಯವರಿಗೆ, ಸ್ನೇಹಿತರಿಗೆ ಬಾಂಧವರಿಗೆ ನೀಡಿ, ಮತ್ತೊಂದು ಭಾಗವನ್ನು ಬಡವರಿಗೆ, ದೀನರಿಗೆ, ನಿರ್ಗತಿಕರಿಗೆ, ಅಸಹಾಯಕರಿಗೆ ನೀಡಿ, ಮೂರನೇ ಭಾಗವನ್ನು ತಾವು ಇಟ್ಟುಕೊಂಡು ದೇವರ ಪ್ರಸಾದ ಎಂದು ಸೇವಿಸುವ ಸಂಪ್ರದಾಯವು ಬಕ್ರೀದ್ ಹಬ್ಬದ ಆಚರಣೆಯಲ್ಲಿ ಮುಂದುವರೆದುಕೊಂಡು ಬಂದಿದೆ.