ನೀರಾವರಿ ಇಲಾಖೆ ಕೊಟ್ಟ ಮಾತಿನಂತೆ ಭದ್ರಾ ಜಲಾಶಯದಿಂದ 100 ದಿನಗಳ ಕಾಲ ನಿರಂತರ ನೀರು ಹರಿಸಬೇಕು. ಮುಂಗಾರು ಹಂಗಾಮಿನ ನೀರು ಹರಿಸುವುದನ್ನು ನಿಲ್ಲಿಸುವ ಸಲುವಾಗಿಯೇ ಗುರುವಾರದಂದು ಕಾಡಾ ಸಭೆ ಕರೆದಿದ್ದಾರೆ ಎಂದು ಭಾರತೀಯ ರೈತ ಒಕ್ಕೂಟದ ರೈತ ಮುಖಂಡರು ಆರೋಪಿಸಿದರು.
ಕಾಡಾ ಸಭೆ ವಿರೋಧಿಸಿ ದಾವಣಗೆರೆಯಲ್ಲಿ ಪ್ರತಿಭಟಿಸಿದ ರೈತರು ಉಪವಿಭಾಗಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದು, “ಈ ಸಭೆ ರದ್ದುಪಡಿಸದಿದ್ದರೆ ತೀವ್ರ ಹೋರಾಟ ಮಾಡಲಾಗುವುದು” ಎಂದು ಎಚ್ಚರಿಕೆ ನೀಡಿದ್ದಾರೆ.
“ಭದ್ರಾ ಜಲಾಶಯ ಶಿವಮೊಗ್ಗ, ದಾವಣಗೆರೆ, ಚಿಕ್ಕಮಗಳೂರು ಜಿಲ್ಲೆಯ ರೈತರ ಬೆಳೆಗೆ ಮುಖ್ಯ ನೀರಿನ ಮೂಲ. ನಿರಂತರ ನೂರು ದಿನಗಳ ಕಾಲ ಮುಂಗಾರು ಹಂಗಾಮಿನ ನೀರು ಹರಿಸುವುದಾಗಿ ನೀರಾವರಿ ಇಲಾಖೆ ಭರವಸೆ ನೀಡಿತ್ತು. ಇದೀಗ ಚನ್ನಗಿರಿ, ಶಿವಮೊಗ್ಗ, ಭದ್ರಾವತಿಯ ತೋಟಗಾರಿಕೆ ಬೆಳೆಯ ರೈತರ ಒತ್ತಡದಿಂದ ನೀರು ನಿಲ್ಲಿಸಲು ಸಭೆ ಕರೆಯಲಾಗಿದೆ” ಎಂದು ಆರೋಪಿಸಿದರು.
“ನೀರು ಹರಿಸಲು ಪ್ರಾರಂಭವಾಗಿ 25 ದಿನ ಕಳೆದಿದ್ದು, ಉಳಿದ 75 ದಿನಗಳ ಕಾಲವೂ ನೀರು ಹರಿಸಬೇಕು. ಈಗಾಗಲೇ ರೈತರು ತಮ್ಮ ಜಮೀನುಗಳಲ್ಲಿ ಭತ್ತ ನಾಟಿ ಮಾಡಿದ್ದು, ಕಾಡಾದಿಂದ ನೀರು ನಿಲ್ಲಿಸಲು ಇದೀಗ ಸಭೆ ಕರೆದಿರುವುದು ರೈತರು ಹೋರಾಟಕ್ಕಿಳಿಯುವಂತೆ ಮಾಡಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ಸುದ್ದಿ ಓದಿದ್ದೀರಾ? ಮಂಡ್ಯ | ಭೂಸ್ವಾಧೀನವಾಗಿರುವ ಭೂಮಿ ಹಸ್ತಾಂತರಿಸದೇ ವಂಚನೆ; ಭೂರಹಿತರ ಆರೋಪ
“ಶಿವಮೊಗ್ಗ ಜಿಲ್ಲೆಯ ಭದ್ರಾವತಿಯ ರೈತರು ಅಕ್ರಮ ಪಂಪ್ಸೆಟ್ ಹಾಕಿಕೊಂಡಿದ್ದು, ಅಡಿಕೆ ತೋಟಗಳಿಗೆ ನೀರು ಹರಿಸುತ್ತಿದ್ದಾರೆ. ಆದರೆ, ದಾವಣಗೆರೆ ಭಾಗದ ಭತ್ತ ಬೆಳೆದ ರೈತರು ನೀರಿಲ್ಲದೇ ಪರದಾಡುತ್ತಿದ್ದಾರೆ. ಕಾಡಾ ಸಭೆಯನ್ನು ದಾವಣಗೆರೆ ರೈತರು ಬಹಿಷ್ಕಾರ ಮಾಡುತ್ತೇವೆ” ಎಂದು ಕಿಡಿಕಾರಿದರು.