ಮಧ್ಯ ರಾತ್ರಿ ಸಂಭವಿಸಿದ ಬೆಂಕಿ ಅವಘಡದಿಂದ ಜೂಜಿನ ಪೈಲ್ವಾನ್ ಕುರಿ ಮತ್ತು ಇತರ ಕುರಿಗಳು, ದನಗಳ ಮೇವಿನ ಹುಲ್ಲಿನ ಬಣವೆ ಮತ್ತು ತ್ರಿಚಕ್ರದ ಸ್ಕೂಟರ್ ಭಸ್ಮವಾಗಿರುವ ಘಟನೆ ದಾವಣಗೆರೆ ಜಿಲ್ಲೆ ಹದಡಿ ಗ್ರಾಮದಲ್ಲಿ ನಡೆದಿದ್ದು, ಲಕ್ಷಾಂತರ ರೂಪಾಯಿ ನಷ್ಟ ಸಂಭವಿಸಿದೆ.
ಶುಕ್ರವಾರ ಮಧ್ಯರಾತ್ರಿ ಸುಮಾರು 2 ಗಂಟೆಯಲ್ಲಿ ಬೆಂಕಿ ಅವಘಡ ಸಂಭವಿಸಿದ್ದು, ಗ್ರಾಮಸ್ಥರು ಕೂಡಲೇ ಬೆಂಕಿ ನಂದಿಸಲು ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲ. ಅಗ್ನಿಶಾಮಕ ದಳ ಸಿಬ್ಬಂದಿಗೆ ಈ ಬಗ್ಗೆ ಮಾಹಿತಿ ನೀಡಿದ್ದು, ಅಗ್ನಿಶಾಮಕ ದಳ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾದರು.
ಹದಡಿ ಗ್ರಾಮದ ಗಿಡ್ಡಜ್ಜರ ಮಲ್ಲಿಕಾರ್ಜುನಪ್ಪನವರಿಗೆ ಸೇರಿದ ಗೋದಾಮು, ಮರದ ಮುಟ್ಟು, ಕರಿಮಾಳ್ಳರ ಮಂಜಪ್ಪನ ಪೈಲ್ವಾನ್ ಕುರಿ, ಎಂ ಡಿ ನಿಂಗಪ್ಪನ ಭತ್ತದ ಹುಲ್ಲಿನ ಬಣವೆ ಸುಟ್ಟು ಭಸ್ಮವಾಗಿದೆ.
ರೈತ ಮುಖಂಡ ಕೊಳೇನಹಳ್ಳಿ ಬಿ ಎಂ ಸತೀಶ್ ಸ್ಥಳಕ್ಕೆ ಭೇಟಿ ನೀಡಿ, ತಹಶೀಲ್ದಾರ್ ಡಾ ಅಶ್ವಥ್ ಅವರೊಂದಿಗೆ ದೂರವಾಣಿ ಮೂಲಕ ಸಂಪರ್ಕಿಸಿ ಮಾತನಾಡಿದರು. ಸ್ಥಳಕ್ಕೆ ಭೇಟಿ ನೀಡಿದ ಬಳಿಕ ಮಾತನಾಡಿದ ಸತೀಶ್ ಅವರು, ಸರ್ಕಾರ ನೊಂದ ರೈತರಿಗೆ ಸೂಕ್ತ ಪರಿಹಾರ ನೀಡಬೇಕೆಂದು ಎಂದು ಒತ್ತಾಯಿಸಿದರು.
ತಕ್ಷಣ ತಹಶೀಲ್ದಾರ್ ಡಾ.ಆಶ್ವಥ್, ರೆವೆನ್ಯೂ ಇನ್ಸ್ಪೆಕ್ಟರ್ ಬಸವರಾಜಪ್ಪ, ಪಶು ವೈದ್ಯಾಧಿಕಾರಿ ಹೇಮಂತಕುಮಾರ್ ರವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಸೂಕ್ತ ಪರಿಹಾರ ನೀಡಲು ಕ್ರಮ ವಹಿಸುವ ಭರವಸೆ ನೀಡಿದರು.
ಈ ಸುದ್ದಿ ಓದಿದ್ದೀರಾ? ಗ್ರಾಮ ಭಾರತಕ್ಕೆ ಬೇಕಿರುವುದು ಯೋಗ, ಧ್ಯಾನ ಕೇಂದ್ರಗಳಲ್ಲ ಬಡವರಿಗೆ ನೆರವಾಗುವ ಆರೋಗ್ಯ ಕೇಂದ್ರಗಳು
ಹದಡಿ ಠಾಣೆ ಸಬ್ ಇನ್ಸ್ಪೆಕ್ಟರ್ ಸಂಜೀವ್ ಕುಮಾರ್ ಸ್ಥಳಕ್ಕೆ ಭೇಟಿ ನೀಡಿ, ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.
ಈ ಸಂದರ್ಭದಲ್ಲಿ ರೈತ ಕೊಳೇನಹಳ್ಳಿ ಬಿ ಎಂ ಸತೀಶ್, ಹದಡಿ ಗ್ರಾಮದ ಮುಖಂಡ ಎಂ ಡಿ ನಿಂಗಪ್ಪ, ಟಿ ಬಿ ಮಹಾಂತೇಶ, ಜಿ ಸಿ ನಾಗರಾಜ್, ಎ ಎಚ್ ನಾಗರಾಜ್, ಜಿ ಸಿ ಬಸವರಾಜಪ್ಪ, ಆರ್ ಬಿ ಹನುಮಂತಪ್ಪ, ಗ್ರಾಮ ಪಂಚಾಯಿತಿ ಸುರೇಶ್ ಸೇರಿದಂತೆ ಇತರರು ಇದ್ದರು.