“ಬಹು ಸಂಖ್ಯಾತ ಅಸ್ಪೃಶ್ಯ, ದಲಿತ ಸಮುದಾಯಕ್ಕೆ ಇಂದು ಕನಿಷ್ಠ 4 ರಿಂದ 5 ಪ್ರತಿಶತ ಪ್ರಾತಿನಿಧ್ಯವಿಲ್ಲ. ದಲಿತರಿಗೆ, ಶೋಷಿತ, ಹಿಂದುಳಿದ ಜನಾಂಗಗಳ ಜನಸಂಖ್ಯೆಗೆ ಅನುಗುಣವಾಗಿ ಪ್ರಾತಿನಿಧ್ಯ ಸಿಕ್ಕರೆ ಮೀಸಲಾತಿಯನ್ನು ರದ್ದು ಮಾಡಿ ಬಿಡಿ ಎಂದು ನಾನೇ ಹೇಳುತ್ತೇನೆ” ಎಂದು ಖ್ಯಾತ ಅಂಕಣಕಾರ ಪತ್ರಕರ್ತ ದಿನೇಶ್ ಅಮೀನ್ ಮಟ್ಟು ಪ್ರತಿಪಾದಿಸಿದರು. ದಾವಣಗೆರೆಯಲ್ಲಿ ಮಾಜಿ ಶಾಸಕ, ನೇತ್ರತಜ್ಞ ಡಾ.ಬಿಎಂ ತಿಪ್ಪೇಸ್ವಾಮಿ ಬದುಕಿನ ಕುರಿತು ಲೇಖಕಿ ಜಾಹ್ನವಿ ಅವರ ಸಂಪಾದಿತ “ಮುಟ್ಟಿಸಿಕೊಂಡವರು” ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಪುಸ್ತಕ ಬಿಡುಗಡೆಗೊಳಿಸಿ ಮಾತನಾಡಿದ ಅವರು “ಡಾ.ಬಿ ಎಂ ತಿಪ್ಪೇಸ್ವಾಮಿ ಅವರು ಮೀಸಲಾತಿಯಲ್ಲಿ ಮೇಲ್ಪದರ ಬೇಕು, ಮೀಸಲಾತಿ ಅನುಭವಿಸಿದವರು ಮೀಸಲಾತಿಯನ್ನು ಬೇರೆಯವರಿಗೆ ಬಿಟ್ಟು ಕೊಡಬೇಕು ಎಂದು ಪ್ರತಿಪಾದಿಸಿದವರು. ಇದು ಸಮಾಜದಲ್ಲಿಯೇ ಆಕ್ರೋಶಕ್ಕೆ ಗುರಿಯಾಗಿತ್ತು” ಎಂದು ತಿಳಿಸಿದರು.

“ಇಂದು ಸಮಾಜದಲ್ಲಿ ‘ರಿವರ್ಸ್ ಅನ್ ಟಚಬಿಲಿಟಿ’ ಎನ್ನುವುದು ಮೂಡುತ್ತಿದೆ. ಯಾರನ್ನು ಯಾರು ಮುಟ್ಟಬೇಕು ಎನ್ನುವ ಬಗ್ಗೆ ಅರಿವು ಮೂಡುತ್ತಿದೆ. ದೇವಸ್ಥಾನ ಮತ್ತು ಅಸ್ಪೃಶ್ಯತೆ ಬಗ್ಗೆ ಬಹಳ ಹಿಂದೆ ನಾರಾಯಣಗುರುಗಳು ಬಹಿಷ್ಕಾರ ಚಳುವಳಿ ತಂದರು. ಅವರು ಯಾರು ನನ್ನ ಮುಟ್ಟೋದಿಲ್ಲವೋ ಅವರನ್ನು ನಾನು ಮುಟ್ಟುವುದಿಲ್ಲ ಎಂದು ಹೇಳಬೇಕು ಎನ್ನುವ ವಾದವನ್ನು ಜನರ ಮುಂದಿಟ್ಟರು. ಈ ರೀತಿಯ ಅರಿವನ್ನು ತುಳಿತಕ್ಕೊಳಗಾಗಿರುವ ಸಮಾಜಗಳು ರೂಡಿಸಿಕೊಳ್ಳಬೇಕು” ಎಂದು ಅಭಿಪ್ರಾಯಪಟ್ಟರು.

“ಡಾ.ಬಿ ಎಂ ತಿಪ್ಪೇಸ್ವಾಮಿ ಅವರ ವ್ಯಕ್ತಿ ಚಿತ್ರಣವನ್ನು ಈ ಕೃತಿಯಲ್ಲಿ ಲೇಖಕರು ರೂಪಿಸಿಕೊಟ್ಟಿದ್ದಾರೆ. ಪೂರ್ಣ ಪ್ರಮಾಣದ ಆತ್ಮಚರಿತ್ರೆ ಬರೆಯುವ ಅವಶ್ಯಕತೆ ಇದೆ.ಇಂತಹ ಸರಳ ನಾಯಕರೊಬ್ಬರು ಸಮಾಜದಲ್ಲಿ ಇದ್ದರು ಎಂದು ಯುವ ಪೀಳಿಗೆಗೆ ತಿಳಿಸುವ ಅವಶ್ಯಕತೆ ಇದೆ. 1980 ರ ನಂತರ ಸಿದ್ದಲಿಂಗಯ್ಯ, ಅರವಿಂದ ಮಾಲಗಿತ್ತಿ ಮುಂತಾದವರು ಸೇರಿದಂತೆ ಬಹಳ ಜನ ದಲಿತ ನಾಯಕರು ಚಿಂತಕರು ಬರೆದಿರುವ ಆತ್ಮಕಥೆಗಳು ಬಹಳ ಸುದ್ದಿ ಮಾಡುತ್ತಿವೆ. ಹಾಗಾಗಿ ಬರೆಯಬೇಕಿದೆ” ಎಂದು ಅಭಿಪ್ರಾಯಪಟ್ಟರು.

“ಬದುಕಿನಲ್ಲಿ ಅವಮಾನಗಳು ಸಾಮಾನ್ಯವಾಗಿರುತ್ತದೆ, ಆದರೆ ಅದರಲ್ಲಿ ಕೂಡ ವೈವಿಧ್ಯತೆ ಇರುತ್ತದೆ. ಹಟ್ಟಿಯಲ್ಲಿ ಹುಟ್ಟಿ ಸೌಲಭ್ಯಗಳಿಲ್ಲದೆ, ಇರುವ ಅವಕಾಶಗಳಲ್ಲಿ ಓದಿ ಡಾಕ್ಟರ್ ಆಗಿ ಲಂಡನ್ ಗೆ ಹೋಗಿ ನಂತರ ಶಾಸಕರಾಗಿ ಬೆಳೆಯುವಂತದ್ದನ್ನು ನಾವು ಸಿನಿಮಾಗಳಲ್ಲಿ ಒಂದು ಚಿತ್ರಣವಾಗಿ ನೋಡುತ್ತೇವೆ. ಆದರೆ ಡಾ.ಬಿಎಂ ತಿಪ್ಪೇಸ್ವಾಮಿ ಅವರು ಆ ರೀತಿ ಅವಕಾಶಗಳನ್ನು ತಮ್ಮದಾಗಿಸಿಕೊಂಡರು. ಅಸ್ಪೃಶ್ಯತೆಯ ಕರಾಳತೆ, ನಿರ್ಲಕ್ಷ್ಯ, ಅವಮಾನ ಸಹಿಸಿಕೊಂಡೇ ಬೆಳೆದವರು. ಅದನ್ನು ಸಹಿಸಿಕೊಂಡು ಬೆಳೆಯುವುದು ಬಹಳ ಕಷ್ಟದ ಕೆಲಸ. ಈ ರೀತಿ ನಿರ್ಲರ್ಕ್ಷ್ಯ, ಅವಮಾನ, ಅಸ್ಪೃಶ್ಯತೆ ಎದುರಿಸಿ ಬದುಕನ್ನು ದಾಟಿ ಸಾಧಿಸಿ ಬಂದವರಲ್ಲಿ ಕೆಲವರಿಗೆ ಸಮಾಜದ ಬಗ್ಗೆ ಒಂದು ರೀತಿ ಆಕ್ರೋಶ ಇರುತ್ತದೆ. ಆದರೆ ಅದಕ್ಕೆ ತದ್ವಿರುದ್ಧವಾಗಿ ಡಾ.ಬಿಎಂ ತಿಪ್ಪೇಸ್ವಾಮಿ ಶಾಂತಿ, ಸಹನೆ ಮೈಗೂಡಿಸಿಕೊಂಡು ಬದುಕಿದವರು. ಹುಟ್ಟಿದ ಜಾತಿಯ ಬಗ್ಗೆ ಕೀಳರಿಮೆ ಇರಬಾರದು ಎಂದವರು ಡಾ.ತಿಪ್ಪೇಸ್ವಾಮಿ” ಎಂದು ಸ್ಮರಿಸಿದರು.

“ಸಮಾಜವನ್ನು ಬದಲಾಯಿಸುವಲ್ಲಿ ಎರಡು ರೀತಿಯ ವಿಧಾನಗಳಿವೆ. ಒಂದು ಸಂಧಾನ ಮತ್ತು ಇನ್ನೊಂದು ಸಂಘರ್ಷದ ಹಾದಿ. ಆದರೆ ಡಾ.ತಿಪ್ಪೇಸ್ವಾಮಿ ಅವರು ಸಂಧಾನದ ಮೂಲಕವೇ ಸಾಧಿಸಬೇಕು ಎಂದು ಹೇಳುತ್ತಿದ್ದರು. ಅವರದ್ದು ಒಂದು ಬಗೆಯ ನಿಷ್ಠೆಯ ವೃತ್ತಿ ಧರ್ಮವಾಗಿತ್ತು. ಆದರೆ ಸಂದಿಗ್ದ ಪರಿಸ್ಥಿತಿಯಲ್ಲಿ ಈ ಸಮಾಜ ಬದುಕುತ್ತಿದೆ. ಇಂದು ಯಾರನ್ನು ನಂಬುವುದು ಎನ್ನುವುದು ಕೂಡ ಪ್ರಶ್ನೆಯಾಗಿದೆ” ಎಂದು ಬೇಸರ ವ್ಯಕ್ತಪಡಿಸಿದರು.
“ಡಾ.ಬಿಎಂ ತಿಪ್ಪೇಸ್ವಾಮಿ ಅವರು ಮೀಸಲಾತಿಯಲ್ಲಿ ಮೇಲ್ಪದರ ಬೇಕು, ಮೀಸಲಾತಿ ಅನುಭವಿಸಿದವರು ಮೀಸಲಾತಿಯನ್ನು ಬೇರೆಯವರಿಗೆ ಬಿಟ್ಟು ಕೊಡಬೇಕು ಎಂದು ಪ್ರತಿಪಾದಿಸಿದವರು. ಇದು ಸಮಾಜದಲ್ಲಿಯೇ ಆಕ್ರೋಶಕ್ಕೆ ಗುರಿಯಾಗಿತ್ತು. ಅಸ್ಪೃಶ್ಯ, ದಲಿತ ಸಮುದಾಯಕ್ಕೆ ಇಂದು ಕನಿಷ್ಠ 4 ರಿಂದ 5 ಪ್ರತಿಶತ ಪ್ರಾತಿನಿಧ್ಯವಿಲ್ಲ. ದಲಿತರಿಗೆ, ಶೋಷಿತ, ಹಿಂದುಳಿದ ಜನಾಂಗಗಳ ಜನಸಂಖ್ಯೆಗೆ ಅನುಗುಣವಾಗಿ ಪ್ರಾತಿನಿಧ್ಯ ಸಿಕ್ಕರೆ ಮೀಸಲಾತಿಯನ್ನು ರದ್ದು ಮಾಡಿ ಎಂದು ನಾನೇ ಹೇಳುತ್ತೇನೆ” ಎಂದು ಪ್ರತಿಪಾದಿಸಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಲೇಖಕಿ ಬಿಟಿ ಜಾಹ್ನವಿ, “ಶಾಸಕರಾಗಿ ನೇತ್ರ ತಜ್ಞರಾಗಿ ಬದುಕಿದ ಡಾ.ಬಿಎಂ ತಿಪ್ಪೇಸ್ವಾಮಿಯವರು ಯಾರನ್ನು ಅಸಡ್ಡೆ ಮಾಡಲಿಲ್ಲ. ಅವರ ಬದುಕಿನ ಕೃತಿ ಇದು. 1968ರಲ್ಲಿ ಚಿಗಟೇರಿಯ ಆಸ್ಪತ್ರೆಯಲ್ಲಿ ನೇತ್ರ ತಜ್ಞರಾಗಿ ನೇತ್ರ ವಿಭಾಗವನ್ನು ಆರಂಭಿಸಿದರು. ಶಾಸಕರಾಗಿದ್ದರೂ ಕೂಡ ಎಲ್ಲ ವರ್ಗದ ಜನರೊಂದಿಗೆ ಬೆರೆತು, ಪ್ರೀತಿಯಿಂದ ಗೆಲ್ಲುತ್ತಿದ್ದರು. ಅವರು ನಮ್ಮನ್ನಗಲಿ 34 ವರ್ಷ ಕಳೆದರೂ ಈ ಕ್ಷಣದಲ್ಲೂ ನಮ್ಮನ್ನು ಮುನ್ನಡೆಸುತ್ತಿರುವುದು ಅವರ ಮಾತುಗಳು. ಇಂದಿನ ಸಾಮಾಜಿಕ ವಿಪ್ಲವಗಳ ನಡುವೆ ಡಾಕ್ಟರ್ ಬಿ.ಎಂ ತಿಪ್ಪೇಸ್ವಾಮಿ ನೆನಪಾಗುತ್ತಾರೆ, ಆದರ್ಶವಾಗುತ್ತಾರೆ” ಎಂದು ನುಡಿದರು.
ಈ ಸುದ್ದಿ ಓದಿದ್ದೀರಾ? ದಾವಣಗೆರೆ | ಮುಖ್ಯಮಂತ್ರಿ ಜೆ ಎಚ್ ಪಟೇಲರು ಓದಿದ ಶಿಥಿಲಾವಸ್ಥೆಯಲ್ಲಿರುವ ಶಾಲೆಗೆ ಹೊಸ ಕಟ್ಟಡಕ್ಕೆ ಆಗ್ರಹ
ಕಾರ್ಯಕ್ರಮದಲ್ಲಿ ನೇತ್ರ ತಜ್ಞ ಡಾ.ರಂಗನಾಥ್, ಪತ್ರಕರ್ತೆ ಪ್ರೀತಿ ನಾಗರಾಜ್, ಸಂಸದೆ ಪ್ರಭಾ ಮಲ್ಲಿಕಾರ್ಜುನ್, ಬಿ ಕಲ್ಚರ್ ನ ವಿಷ್ಣು ಕುಮಾರ್, ನಿವೃತ್ತ ಪೊಲೀಸ್ ಅಧಿಕಾರಿ ರವಿ ನಾರಾಯಣ್, ಮಾಜಿ ಶಾಸಕ ಮಹಿಮ ಪಟೇಲ್, ತೇಜಸ್ವಿ ವಿ ಪಟೇಲ್, ಉಪನ್ಯಾಸಕ ಫಕ್ಕೀರೇಶ್, ಮುರುಘೇಂದ್ರ ಸ್ವಾಮಿ, ಛಾಯ, ಪ್ರೊ. ಸಿಕೆ ಮಹೇಶ್ವರಪ್ಪ, ಜಬೀನಾಖಾನಂ ಸೇರಿದಂತೆ ನೂರಾರು ಸಾಹಿತ್ಯಾಸಕ್ತರು, ತಿಪ್ಪೇಸ್ವಾಮಿ ಅವರು ಅಭಿಮಾನಿಗಳು ಭಾಗವಹಿಸಿದ್ದರು.