ಯುವಜನರೇ ದೇಶದ ಆಸ್ತಿ. ಅವರ ಉತ್ತಮ ಚಿಂತನೆ ಮತ್ತು ಧನಾತ್ಮಕ ವರ್ತನೆಯ ಮೂಲಕ ದೇಶದ ಬೆಳವಣಿಗೆಗೆ ಸಹಕಾರಿಯಾಗಬೇಕು ಎಂದು ದಾವಣಗೆರೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್ ಅಭಿಪ್ರಾಯಪಟ್ಟರು.
ನಗರದ ಪ್ರತಿಷ್ಠಿತ ಜಿಎಂ ತಾಂತ್ರಿಕ ಮಹಾವಿದ್ಯಾಲಯದ ಪ್ರಸಕ್ತ ಸಾಲಿನ ಮೊದಲ ವರ್ಷದ ಎಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡಿದ್ದ ಇಂಡಕ್ಷನ್ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
“ಯುವಜನರು ಯಾವುದೇ ಅನಗತ್ಯ ಚಟುವಟಿಕೆಗಳಲ್ಲಿ ಭಾಗವಹಿಸದೆ, ಮದ್ಯ ಮತ್ತು ಮಾದಕ ವ್ಯಸನಿಗಳಾಗದೆ ಉತ್ತಮ ಜೀವನ ರೂಢಿಸಿಕೊಂಡು, ನಾಡಿನ ಉತ್ತಮ ಪ್ರಜೆಗಳಾಗಿ, ಮನೆಯ ಪ್ರೀತಿಯ ಮಕ್ಕಳಾಗಿ ಬೆಳೆಯಬೇಕು” ಎಂದು ಕರೆ ಕೊಟ್ಟರು.
“ಪ್ರತಿ ವರ್ಷದಂತೆ ಈ ವರ್ಷವೂ ಮೊದಲ ವರ್ಷದ ಎಂಜಿನಿಯರಿಂಗ್ ಕೋರ್ಸ್‌ಗಳಿಗೆ ಪ್ರವೇಶಾತಿ ಪಡೆದ ವಿದ್ಯಾರ್ಥಿಗಳಿಗೆ ತರಗತಿಗಳು ಪ್ರಾರಂಭವಾಗುವ ಮುನ್ನ 10 ದಿನಗಳ ಇಂಡಕ್ಷನ್ ಪ್ರೋಗ್ರಾಮ್ ಮಾಡುವುದರ ಮೂಲಕ ಹಲವು ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರುಗಳನ್ನು ಆಹ್ವಾನಿಸಿ ವಿದ್ಯಾರ್ಥಿಗಳಿಗೆ ಮನೋಸ್ಥೈರ್ಯ ಮತ್ತು ಆತ್ಮವಿಶ್ವಾಸ ಬೆಳೆಸುವುದಾಗಿದೆ” ಎಂದರು.
ಶ್ರೀಶೈಲ ಎಜುಕೇಶನಲ್ ಟ್ರಸ್ಟ್‌ನ ಖಜಾಂಚಿ ಅನಿತ್ ಕುಮಾರ್ ಜಿ ಎಸ್ ಮಾತನಾಡಿ, ಎಲ್ಲ ವಿದ್ಯಾರ್ಥಿಗಳು ಮತ್ತು ಅವರ ಪೋಷಕ ವೃಂದದವರಿಗೆ ಧನ್ಯವಾದ ತಿಳಿಸಿದ್ದು, ಜಿಎಂಐಟಿ ಆಯ್ಕೆ ಮಾಡುವುದರ ಮೂಲಕ ತಮ್ಮ ವೃತ್ತಿ ಬೆಳವಣಿಗೆಯನ್ನು ಪ್ರಾರಂಭಿಸುತ್ತಿರುವ ಎಲ್ಲ ವಿದ್ಯಾರ್ಥಿಗಳಿಗೆ ಅಭಿನಂದನೆ ತಿಳಿಸಿದರು.
ಜಿಎಂ ವಿಶ್ವವಿದ್ಯಾಲಯದ ಉಪಕುಲಪತಿ ಡಾ ಎಚ್ ಡಿ ಮಹೇಶಪ್ಪ ಮಾತನಾಡಿದರು. ಕಾರ್ಯಕ್ರಮದಲ್ಲಿ ಹಲವು ವಿಭಾಗದ ಮುಖ್ಯಸ್ಥರು, ಅಧ್ಯಾಪಕ ವರ್ಗದವರು, ವಿದ್ಯಾರ್ಥಿಗಳು ಮತ್ತು ಅವರ ಪೋಷಕ ವರ್ಗದವರು ಇದ್ದರು.