ಯೂರಿಯಾ ರಸಗೊಬ್ಬರ ಕೊರತೆ ವಿರೋಧಿಸಿ ರಾಜ್ಯ ರೈತ ಸಂಘ ಹಸಿರು ಸೇನೆ ಹುಚ್ಚವ್ವನಹಳ್ಳಿ ಮಂಜುನಾಥ್ ಬಣದಿಂದ ದಾವಣಗೆರೆ ನಗರದಲ್ಲಿ ರಾಜ್ಯಮಟ್ಟದ ರಸಗೊಬ್ಬರ ವಿತರಕ ಏಜೆನ್ಸಿ ಕಚೇರಿ ಎದುರು ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಲಾಯಿತು.
ದಾವಣಗೆರೆ ನಗರದ ಜಯದೇವ ವೃತ್ತದಿಂದ ಬೈಕ್ ರ‍್ಯಾಲಿ ಮೂಲಕ ಸಾಗಿದ ರೈತರು ನಗರದ ಕೆ.ಆರ್.ಮಾರುಕಟ್ಟೆಯಲ್ಲಿರುವ ರಾಜ್ಯಮಟ್ಟದ ರಸಗೊಬ್ಬರ ವಿತರಕ ಏಜೆನ್ಸಿಯಾದ ಆಶಾಪೂರಿ ಮತ್ತು ರಾಥೋಡ್ ಏಜೆನ್ಸಿಗಳ ಎದುರು ಘೋಷಣೆ ಕೂಗಿ ಪ್ರತಿಭಟನೆ ನಡೆಸಿದರು. ಈ ಸಂದರ್ಭದಲ್ಲಿ ಮಾರುಕಟ್ಟೆ ಪ್ರದೇಶದಲ್ಲಿ ವಾಹನ ಸಂಚಾರಕ್ಕೆ ಅಡ್ಡಿ ಉಂಟಾಯಿತು.

ನಂತರ ಕೃಷಿ ಇಲಾಖೆ ಜಂಟಿ ನಿರ್ದೇಶಕರ ಕಚೇರಿಗೆ ತೆರಳಿದ ರೈತರು, ಜಿಲ್ಲೆಯಲ್ಲಿ ಯೂರಿಯಾ ಗೊಬ್ಬರ ಕೊರತೆ ಉಂಟಾಗಲು ನಿಖರ ಕಾರಣಗಳನ್ನು ಮನವರಿಕೆ ಮಾಡಿಕೊಡಲಾಯಿತು. “ದಾವಣಗೆರೆ ಜಿಲ್ಲೆಗೆ ಬಂದಿದ್ದ ಸುಮಾರು 2500 ಮೆಟ್ರಿಕ್ ಟನ್ ಯೂರಿಯಾವನ್ನು ಶಿವಮೊಗ್ಗ ಜಿಲ್ಲೆಗೆ ಸ್ಥಳೀಯ ವಿತರಕರು ಕಳುಹಿಸಿಕೊಟ್ಟಿರುವುದೇ ಜಿಲ್ಲೆಯಲ್ಲಿ ಯೂರಿಯಾ ಗೊಬ್ಬರದ ಕೊರತೆಗೆ ಪ್ರಮುಖ ಕಾರಣ” ಎಂದು ರೈತ ಸಂಘದ ಅಧ್ಯಕ್ಷ ಹುಚ್ಚವ್ವನಹಳ್ಳಿ ಮಂಜುನಾಥ್ ಆರೋಪಿಸಿದರು.

ರೈತರನ್ನು ಉದ್ದೇಶಿಸಿ ಮಾತನಾಡಿದ ಮಂಜುನಾಥ್ “ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಕುರ್ಚಿ ಉಳಿಸಿಕೊಳ್ಳುವ ಕಸರತ್ತಿನಲ್ಲಿ ರಾಜ್ಯದ ರೈತರ ಹಿತಚಂತನೆಯನ್ನೇ ಮರೆತಿದ್ದಾರೆ. ಮತ್ತೊಂದೆಡೆ ಕೃಷಿ ಸಚಿವ ಚೆಲುವರಾಯ ಸ್ವಾಮಿ ಅವರು ಇಲಾಖೆಗೂ ನನಗೂ ಸಂಬಂಧವೇ ಇಲ್ಲ ಎನ್ನುವಂತೆ ಯೂರಿಯಾ ಗೊಬ್ಬರ ಕುರಿತು ಮಾತನಾಡುತ್ತಿದ್ದಾರೆ. ಕೃಷಿ ಇಲಾಖೆ ಅಧಿಕಾರಿಗಳು ಆಯಾ ಜಿಲ್ಲೆಗಳಿಗೆ ಅಗತ್ಯವಾಗಿ ಬೇಕಾದ ಗೊಬ್ಬರದ ಬಗ್ಗೆ ಸರ್ಕಾರಕ್ಕೆ ಮಾಹಿತಿ ನೀಡುವಲ್ಲಿ ವಿಫರಾಗಿದ್ದಾರೆ. ಇದಕ್ಕೆಲ್ಲ ರಾಜ್ಯ ಸರ್ಕಾರದ ಬೇಜವಬ್ದಾರಿಯೇ ಕಾರಣ” ಎಂದು ಆರೋಪಿಸಿದರು.

ಈ ಸಂದರ್ಭದಲ್ಲಿ ಇಲಾಖೆ ಜಂಟಿ ನಿರ್ದೇಶಕರು ಆಶಾಪೂರಿ ಮತ್ತು ರಾಥೋಡ್ ಏಜೆನ್ಸಿಗಳ ರಾಜ್ಯಮಟ್ಟದ ಪರವಾನಿಗೆಯನ್ನು ಸ್ಥಳದಲ್ಲಿಯೇ ರದ್ದುಪಡಿಸಿ ಕೇವಲ ದಾವಣಗೆರೆ ಜಿಲ್ಲೆಗೆ ಸೀಮಿತಗೊಂಡಂತೆ ಪರವಾನಿಗೆಗೆ ಅವಕಾಶ ಕಲ್ಪಿಸಿದರು. ನಂತರ ಪ್ರತಿಭಟನಾಕಾರರು ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಹೆಚ್ಚುವರಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಹೆಚ್ಚುವರಿ ಜಿಲ್ಲಾಧಿಕಾರಿಗಳು “ಈಗಾಗಲೇ ಜಿಲ್ಲೆಗೆ ಇಷ್ಟು ಮೆ.ಟನ್ ಯೂರಿಯಾ ಸರಬರಾಜು ಆಗಿದೆ” ಎಂದು ಮಾಹಿತಿ ನೀಡಿದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ರೈತರು ವಿತರಣೆಯಾದ ಡೀಲರ್‌ಗಳ ಮನೆ, ಗೋದಾಮುಗಳಿಗೆ ಭೇಟಿ ನೀಡಿ ಸ್ಥಳ ಪರಿಶೀಲನೆ ನೆಡೆಸಿ ಎಷ್ಟು ರೈತರಿಗೆ ನ್ಯಾಯುತವಾಗಿ ಗೊಬ್ಬರ ವಿತರಣೆಯಾಗಿದೆ ಎನ್ನುವುದನ್ನು ದಾಖಲೆಸಹಿತ ಪರಿಶೀಲನೆ ನಡೆಸಿ ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.

ಯೂರಿಯಾ ಗೊಬ್ಬರಕ್ಕೆ ಉಪಯೋಗ ಇಲ್ಲದ ಕ್ರಿಮಿನಾಶಕವೊಂದನ್ನು ಲಿಂಕ್ ಮಾಡಿ ಮಾರಾಟ ಮಾಡುವ ಮೂಲಕ ರೈತರನ್ನು ಸುಲಿಗೆ ಮಾಡುತ್ತಿದ್ದಾರೆ. ಉಪಯೋಗವಿಲ್ಲದ ಕ್ರಿಮಿನಾಶಕಕ್ಕೆ 300ರಿಂದ 500 ರು ತನಕ ರೈತರು ವೆಚ್ಚಮಾಡಬೇಕಿದೆ. ಕೂಡಲೇ ಈ ಲಿಂಕ್ ಸುಲಿಗೆ ನಿಲ್ಲಿಸುವ ಸಂಬಂಧ ಸರ್ಕಾರದ ಅಧಿಕೃತ ಆದೇಶ ಹೊರಡಿಸಬೇಕೆಂದು ಆಗ್ರಹಿಸಿದರು.
ಮುಖ್ಯ ಡೀಲರ್ ಮತ್ತು ಫೆಡರೇಷನ್‌ನಿಂದ ರೈತರಿಗೆ ಗೊಬ್ಬರ ಸಮರ್ಪಕವಾಗಿ ತಲುಪಿದೆಯೇ ಇಲ್ಲವೇ ಎನ್ನುವುದನ್ನು ಗಮನಿಸಲು ಪೊಲೀಸ್, ಕಂದಾಯ ಮತ್ತು ಕೃಷಿ ಇಲಾಖೆ ಅಧಿಕಾರಿಗಳನ್ನು ಒಳಗೊಂಡ ಸಮಿತಿ ರಚಿಸಬೇಕೆಂಬ ಸಂಘಟನೆಯ ಬೇಡಿಕೆಗೆ ಸ್ಪಂದಿಸಿದ ಎಡಿಸಿ ಜಿಲ್ಲಾಧಿಕಾರಿಗಳೊಂದಿಗೆ ಚರ್ಚಿಸಿ ಸಮಿತಿ ರಚಿಸುವುದಾಗಿ ಭರವಸೆ ನೀಡಿದರು.
ಈ ಸುದ್ದಿ ಓದಿದ್ದೀರಾ? ದಾವಣಗೆರೆಯಲ್ಲಿ ಹಿಂದುಳಿದ ವರ್ಗಗಳ ಮಠಾಧೀಶರ ಖಂಡನೆ; ಜಾತಿ ಮಠಗಳ ಹೇಳಿಕೆಗೆ ರಂಭಾಪುರಿ ಶ್ರೀ ಸ್ಪಷ್ಟನೆ
ಪ್ರತಿಭಟನೆಯಲ್ಲಿ ರಾಜನಹಟ್ಟಿರಾಜು, ಹೂವಿನ ಮಡು ನಾಗರಾಜ್, ಚಿಕ್ಕಮಲ್ಲನಹೊಳೆ ಚಿರಂಜೀವಿ, ಆಲೂರು ಪರಶುರಾಮ್ ,ಬೋರಗೊಂಡನಹಳ್ಳಿ ಕಲ್ಲೇಶ್, ಕೊಮಾರನಹಳ್ಳಿ ಪ್ರಭು,ಕಾನನಕಟ್ಟೆ ತಿಪ್ಪೇಸ್ವಾಮಿ, ಚಿನ್ನ ಸಮುದ್ರ ಭೀಮಾನಾಯ್ಕ, ಸುರೇಶ್ ನಾಯ್ಕ, ಕೋಗಲೂರು ಕುಮಾರ, ಕಬ್ಬೂರು ತಿಪ್ಪೇಸ್ವಾಮಿ, ಗುಮ್ಮನೂರು ರುದ್ರೇಶ್, ಎಲೋದಹಳ್ಳಿ ರವಿಕುಮಾರ್, ಮಡ್ರಳ್ಳಿ ತಿಪ್ಪಣ್ಣ, ಆನಗೋಡು ಭೀಮಣ್ಣ, ಸುರೇಶ್ ನಾಯ್ಕ, ಹುಚ್ಚವ್ವನಹಳ್ಳಿ ಪ್ರಕಾಶ್, ಗಿರಿಯಾಪುರದ ಗಂಗಾಧರ ಸ್ವಾಮಿ, ಭರಸಮುದ್ರದ ಗುರುಸಿದ್ದಪ್ಪ ಇತರರು ಭಾಗವಹಿಸಿದ್ದರು.