ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮಿ ಚೌಧರಿ ದಾವಣಗೆರೆ ಜಿಲ್ಲೆ ಜಗಳೂರು ತಾಲೂಕಿಗೆ ಭೇಟಿ ನೀಡಿದ್ದು ತಾಲೂಕು ಆಸ್ಪತ್ರೆ, ತಾಲೂಕು ಕಚೇರಿ ಸೇರಿದಂತೆ ವಿವಿಧೆಡೆ ಪರಿಶೀಲನೆ ನಡೆಸಿದರು. ಈ ವೇಳೆ ಮಹಿಳಾ ಆಯೋಗದ ಅಧ್ಯಕ್ಷರನ್ನು ಭೇಟಿ ಮಾಡಿದ ಗ್ರಾಕೂಸ್- ಗ್ರಾಮೀಣ ಕೂಲಿಕಾರರ ಸಂಘಟನೆಯ ಕಾರ್ಯಕರ್ತರು ಭೂಮಿ, ವಸತಿರಹಿತರಿಗೆ ನಿವೇಶನ ಸೇರಿದಂತೆ ಹಲವು ಸೌಲಭ್ಯಕ್ಕಾಗಿ ಒತ್ತಾಯಿಸಿ ಮನವಿ ನೀಡಿದರು.
“ಬಿಳಿಚೋಡು ಗ್ರಾಮದಲ್ಲಿ ಸರ್ವೇ ನಂಬರ್ 14ರಲ್ಲಿ ಸೇಂದಿವನ ಇದ್ದು , ಅದನ್ನು ಗ್ರಾಮದ ವಸತಿರಹಿತರಿಗೆ ನಿವೇಶನ ಹಂಚಿಕೆಗೆ ಮೀಸಲಿಡಬೇಕು ಹಾಗೂ ಆಂಜನೇಯ ಬಡಾವಣೆಯ ನೂರಕ್ಕೂ ಹೆಚ್ಚು ಕುಟುಂಬಗಳಿಗೆ ಮೂಲಸೌಕರ್ಯ ಒದಗಿಸಬೇಕು. ಕೆಚ್ಚೇನಹಳ್ಳಿ ಮತ್ತು ಪಲ್ಲಾಗಟ್ಟೆ ಗ್ರಾಮದಲ್ಲಿ ವಸತಿ ರಹಿತರಿಗೆ ನಿವೇಶನ ಮತ್ತು ವಸತಿ ಸೌಲಭ್ಯ ಕಲ್ಪಿಸಬೇಕು. ಅಲ್ಲದೇ ಕೆಚ್ಚೇನಹಳ್ಳಿ ಗ್ರಾಮದಲ್ಲಿ ಸ್ಮಶಾನಕ್ಕೆ ಭೂಮಿ ಒದಗಿಸಬೇಕು” ಎಂದು ಮನವಿ ಮಾಡಿದರು.

“ಪಲ್ಲಾಗಟ್ಟೆಯಿಂದ ಜಗಳೂರು, ದಾವಣಗೆರೆ, ಕೊಟ್ಟೂರು ಮಾರ್ಗಗಳಿಗೆ ವಿದ್ಯಾಭ್ಯಾಸಕ್ಕಾಗಿ ನೂರಾರು ವಿದ್ಯಾರ್ಥಿಗಳು ದಿನ ನಿತ್ಯ ತೆರಳುತ್ತಿದ್ದು, ಬಸ್ಗಳಿಲ್ಲದೇ ಪರದಾಟವಾಗಿದೆ. ವಿದ್ಯಾರ್ಥಿಗಳಿಗೆ ಸಮಯಕ್ಕೆ ಸರಿಯಾಗಿ ಸೂಕ್ತ ಬಸ್ ಸೌಲಭ್ಯ ಒದಗಿಸಬೇಕು. ಉದ್ಯೋಗ ಖಾತ್ರಿಯಲ್ಲಿ ಅಂಗವಿಕಲರಿಗೂ ಕೂಡ ವಿಶೇಷ ಕೆಲಸ ಮತ್ತು ಸೌಲಭ್ಯ ಕಲ್ಪಿಸಬೇಕು. ಗ್ರಾಮ ಪಂಚಾಯಿತಿಗಳಲ್ಲಿ ಗ್ರಂಥಾಲಯಗಳು ಸರಿಯಾಗಿ ನಡೆಯುತ್ತಿಲ್ಲ. ಕೂಸಿನ ಮನೆಗಳಲ್ಲಿ ಮಕ್ಕಳಿಲ್ಲದಿದ್ದರೂ ಆನ್ಲೈನ್ ಹಾಜರಾತಿಯಲ್ಲಿ 30-20 ಮಕ್ಕಳನ್ನು ತೋರಿಸುತ್ತಾರೆ. ಈ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಬೇಕು. ವಿದವೆಯರಿಗೆ, ವೃದ್ಧರಿಗೆ ಸರಿಯಾದ ಸಮಯಕ್ಕೆ ಮಾಶಾಸನ ದೊರಕುವಂತೆ ಕ್ರಮ ಕೈಗೊಳ್ಳಬೇಕು” ಎಂದು ಒತ್ತಾಯಿಸಿದರು.
ಈ ಸುದ್ದಿ ಓದಿದ್ದೀರಾ? ದಾವಣಗೆರೆ | ವಿವಾಹೇತರ ಸಂಬಂಧದ ಶಂಕೆ; ಮಸೀದಿ ಎದುರು ಮಹಿಳೆಯ ಮೇಲೆ ಹಲ್ಲೆ
“ಜಗಳೂರು ತಾಲ್ಲೂಕಿನ ವಿವಿಧ ಹಳ್ಳಿಗಳಲ್ಲಿ ಈಗಾಗಲೇ ನರೇಗಾ ಉದ್ಯೋಗ ಖಾತ್ರಿ ಯೋಜನೆಯಡಿಯಲ್ಲಿ ಒಂದು ಕುಟುಂಬಕ್ಕೆ 100 ಮಾನವ ದಿನಗಳು ಪೂರೈಸಿದ್ದು , ನರೇಗಾ ಯೋಜನೆ ಅವಲಂಬಿತವಾಗಿರುವ ಕಾರ್ಮಿಕರಾದ ನಮಗೆ ಹೆಚ್ಚುವರಿ 190 ಮಾನವ ದಿನಗಳ ಜಾರಿಗೊಳಿಸಬೇಕು. ಇದು ಬೇಸಿಗೆಯ ಅತಿ ಹೆಚ್ಚಿನ ಬಿಸಿಲು ಇರುವ ಕಾಲವಾದ್ದರಿಂದ ಬೆಳಿಗ್ಗೆ, ಸಂಜೆಯ ಹಾಜರಾತಿಯ ಬದಲು ಬೆಳಗ್ಗೆ ಹಾಜರಾತಿಯನ್ನು ಮಾತ್ರ ಕಡ್ಡಾಯಿಗೊಳಿಸಬೇಕು. ನರೇಗಾ ಕಾರ್ಮಿಕರಿಗೆ ಪ್ರಾಣ ಹಾನಿಯಾದರೆ ಪರಿಹಾರ ಧನ ಎರಡು ಲಕ್ಷ ರೂ. ಬದಲಾಗಿ ಐದು ಲಕ್ಷಕ್ಕೆ ಏರಿಸಬೇಕು” ಎನ್ನುವುದು ಸೇರಿದಂತೆ ಹಲವು ಬೇಡಿಕೆಗಳ ಈಡೇರಿಕೆಗಾಗಿ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.
ಮನವಿ ಸಲ್ಲಿಸುವ ವೇಳೆ ಗ್ರಾಕೂಸ್ ಸಂಘಟನೆಯ ತಾಲೂಕು ಸಂಚಾಲಕಿ ಸುಧಾ ಪಲ್ಲಾಗಟ್ಟೆ, ನಾಗರತ್ನ, ಕೃಷ್ಣಾ ನಾಯ್ಕ ಸೇರಿದಂತೆ ಇತರ ಕಾರ್ಮಿಕರು ಹಾಜರಿದ್ದರು.