“ರಾಜ್ಯದಲ್ಲಿ ವಿದ್ಯುತ್ ಕೊರತೆ ಇಲ್ಲ. ಕೃಷಿಗೆ 7 ತಾಸು, ಗೃಹ ಮತ್ತು ಕೈಗಾರಿಕೆಗೆ ನಿರಂತರ ವಿದ್ಯುತ್ ಪೂರೈಕೆಗೆ ಸರ್ಕಾರ ಬದ್ದ, ಸೋಲಾರ್ ವಿದ್ಯುತ್ ಉತ್ಪಾದನೆಗೆ ಒತ್ತು ನೀಡುತ್ತಿದ್ದೇವೆ. ವಿದ್ಯುತ್ ಗುಣಮಟ್ಟ ಕಾಯ್ದುಕೊಳ್ಳಲು ಶೀಘ್ರ 3000 ಪವರ್ ಮ್ಯಾನ್ ನೇಮಕ ಮಾಡಲಾಗುವುದು. ನಿರುದ್ಯೋಗಿಗಳಿಗೆ , ಉದ್ಯೋಗ ಆಕಾಂಕ್ಷಿಗಳಿಗೆ ಅನುಕೂಲವಾಗಲಿದೆ” ಎಂದು ದಾವಣಗೆರೆಯಲ್ಲಿ ಇಂಧನ ಸಚಿವರಾದ ಕೆ.ಜೆ.ಜಾರ್ಜ್ ತಿಳಿಸಿದರು.
ಮಂಗಳವಾರ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಇಂಧನ ಇಲಾಖೆ ಅಧಿಕಾರಿಗಳು ಹಾಗೂ ಶಾಸಕರೊಂದಿಗೆ ನಡೆಸಿದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು “ಕುಸುಮ್-ಸಿ ಯೋಜನೆಯ ಮೂಲಕ ಮುಂದಿನ ಒಂದೂವರೆ ವರ್ಷದಲ್ಲಿ ಸೋಲಾರ್‍ನಿಂದ 3 ಸಾವಿರ ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆಯ ಗುರಿಯಡಿ ಕುಸುಮ್ ಯೋಜನೆಯಲ್ಲಿ ಸಂಸ್ಥೆಗಳಿಗೆ ಕಾರ್ಯಾದೇಶ ನೀಡಿದ್ದು ಸೋಲಾರ್ ಪ್ಯಾನಲ್ ಅಳವಡಿಕೆ, ವಿದ್ಯುತ್ ಉತ್ಪಾದನೆ ಹಂತ, ಭೂಮಿ ಸಮತಟ್ಟು ಮಾಡುವ ಕೆಲಸ ಪ್ರಗತಿಯಲ್ಲಿದ್ದು ಬರುವ ಏಪ್ರಿಲ್‍ನಲ್ಲಿ 300 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆ ಮಾಡಿ ಗ್ರಿಡ್‍ಗೆ ಕಳುಹಿಸಲು ಕಾರ್ಯಕ್ರಮ ರೂಪಿಸಲಾಗಿದೆ” ಎಂದರು.

“ಇಂಧನ ಇಲಾಖೆಯಿಂದ ಈಗಾಗಲೇ ಗುಣಮಟ್ಟದ ವಿದ್ಯುತ್ ಪೂರೈಕೆಗಾಗಿ ಇಂಧನ ಇಲಾಖೆಗೆ ಅಗತ್ಯವಿರುವ 3000 ಪವರ್ ಮ್ಯಾನ್ ಹುದ್ದೆಗಳ ಭರ್ತಿ ಪ್ರಕ್ರಿಯೆ ನಡೆಯುತ್ತಿದ್ದು 3 ಲಕ್ಷ ಅರ್ಜಿಗಳು ಸ್ವೀಕೃತವಾಗಿವೆ. ಈಗಾಗಲೇ ಅರ್ಜಿಗಳ ಪರಿಶೀಲನಾ ಹಂತ ಮುಗಿದಿದ್ದು 1 ಲಕ್ಷ ಅಭ್ಯರ್ಥಿಗಳು ಅರ್ಹತೆ ಪಡೆದಿದ್ದಾರೆ. ಇದರಲ್ಲಿ 1;5 ರನ್ವಯ ದೈಹಿಕ ಪರೀಕ್ಷೆಗೆ ಆಯ್ಕೆ ಮಾಡಿ ಅಂತಿಮವಾಗಿ ಅತ್ಯಂತ ಪಾರದರ್ಶಕವಾಗಿ ಮೀಸಲಾತಿ ಹಾಗೂ ಅಂಕಗಳ ಆಧಾರದ ಮೇಲೆ ಏಪ್ರಿಲ್ ಒಳಗಾಗಿ ನೇಮಕಾತಿ ನಡೆಯಲಿದೆ” ಎಂದು ಉದ್ಯೋಗಾಕಾಂಕ್ಷಿಗಳಿಗೆ ಸಿಹಿ ಸುದ್ದಿ ನೀಡಿದರು.
ಸ್ಥಳೀಯ ಸಂಸ್ಥೆಗಳು ಸೇರಿದಂತೆ ಪಂಚಾಯತ್ ರಾಜ್ ಹಾಗೂ ಗ್ರಾಮೀಣಾಭಿವೃದ್ದಿ ಇಲಾಖೆಯಿಂದ ಎಸ್ಕಾಂಗಳಿಗೆ ಬರಬೇಕಾದ ಹಣ ಬಾಕಿ ಇದೆ. ಗ್ರಾಮ ಪಂಚಾಯಿತಿಗಳು ಸ್ವಂತವಾಗಿ ವಿದ್ಯುತ್ ಉತ್ಪಾದನೆ ಮಾಡಿಕೊಳ್ಳುವ ಯೋಜನೆ ಇದ್ದು ದಾವಣಗೆರೆ ಜಿಲ್ಲೆಯಲ್ಲಿ ಸೋಲಾರ್ ವಿದ್ಯುತ್ ಉತ್ಪಾದನೆ ಮಾಡಿಕೊಳ್ಳಲು ಉದ್ದೇಶಿಸಿ ಇದನ್ನು ಪೈಲೆಟ್ ಕಾರ್ಯಕ್ರಮವಾಗಿ ರೂಪಿಸಲಾಗುತ್ತದೆ. ಪಂಚಾಯಿತಿಗಳು ಕುಡಿಯುವ ನೀರು ಪೂರೈಕೆ, ಬೀದಿದೀಪಗಳಿಗೆ ಅಗತ್ಯವಿರುವ ವಿದ್ಯುತ್‍ನ್ನು ಉತ್ಪಾದನೆ ಮಾಡಿಕೊಂಡು ಸ್ವಾವಲಂಬಿಯಾಗಬೇಕು. ಇದಕ್ಕಾಗಿ 400 ಎಕರೆ ಜಾಗವನ್ನು ಗುರುತಿಸಿ ಸೋಲಾರ್ ಪ್ಯಾನಲ್ ಅಳವಡಿಸಿ ಗ್ರಿಡ್‍ಗೆ ವಿದ್ಯುತ್ ನೀಡಿ ಅಷ್ಟೆ ವಿದ್ಯುತ್‍ನ್ನು ವಾಪಸ್ ನೀಡಲಾಗುತ್ತದೆ. ಇದರಿಂದ ವಿದ್ಯುತ್ ಉಳಿತಾಯವಾಗಲಿದೆ ಮತ್ತು ಪಂಚಾಯಿತಿಗಳ ಮೇಲಿನ ಆರ್ಥಿಕ ಹೊರೆ ಕಡಿಮೆಯಾಗಲಿದೆ” ಎಂದರು.
ಈ ಸುದ್ದಿ ಓದಿದ್ದೀರಾ? ಚಿಗಟೇರಿ ಜಿಲ್ಲಾಸ್ಪತ್ರೆಯಲ್ಲಿ ಔಷಧಿ ಚೀಟಿಯ ಹಾವಳಿ; ಚಿಕಿತ್ಸೆಗೆ ಹೊರಗಿನಿಂದ ಔಷಧಿ ತರಿಸಿದ ಆರೋಪ
ಸಭೆಯಲ್ಲಿ ಶಾಸಕರಾದ ಕೆ.ಎಸ್.ಬಸವಂತಪ್ಪ, ಲತಾ ಮಲ್ಲಿಕಾರ್ಜುನ್, ಬಿ.ದೇವೇಂದ್ರಪ್ಪ, ಕೆಪಿಟಿಸಿಎಲ್ ಎಂಡಿ ಪಂಕಜ್‍ಕುಮಾರ್ ಪಾಂಡೆ, ಬೆಸ್ಕಾಂ ಎಂಡಿ ಡಾ; ಶಿವಶಂಕರ್ ಎನ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸುರೇಶ್ ಬಿ.ಇಟ್ನಾಳ್, ಅಪರ ಜಿಲ್ಲಾಧಿಕಾರಿ ಪಿ.ಎನ್.ಲೋಕೇಶ್, ಬೆಸ್ಕಾಂ ಅಧೀಕ್ಷಕ ಇಂಜಿನಿಯರ್ ಪಾಟೀಲ್ ಹಾಗೂ ಬೆಸ್ಕಾಂ, ಕೆಪಿಟಿಸಿಎಲ್ ಅಧಿಕಾರಿಗಳು ಉಪಸ್ಥಿತರಿದ್ದರು.
