ಕಾರ್ಮಿಕ ಹಕ್ಕುಗಳ ಮೇಲಿನ ದಾಳಿಯನ್ನು ವಿರೋಧಿಸಿ ಹಾಗೂ ನಾಲ್ಕು ಕಾರ್ಮಿಕ ವಿರೋಧಿ ಲೇಬರ್ ಕೋಡ್
ಗಳನ್ನು ವಿರೋಧಿಸಿ ರದ್ದು ಪಡಿಸಲು ಒತ್ತಾಯಿಸಿ ದಾವಣಗೆರೆಯಲ್ಲಿ ಎಐಯುಟಿಯುಸಿ ನೆೇತೃತ್ವದಲ್ಲಿ
ಕಾರ್ಮಿಕರು ವಿಶ್ವೇಶ್ವರ ಪಾರ್ಕ್ ನಿಂದ ಮೆರವಣಿಗೆಯಲ್ಲಿ ವಿಶ್ವ ಕಾರ್ಮಿಕರ ಸಂದೇಶಗಳ ಘೋಷಣೆ ಕೂಗುತ್ತಾ ರೋಟರಿ ಬಾಲ ಭವನ ತಲುಪಿದ ನಂತರ ಧ್ವಜಾರೋಹಣ ನೆರವೇರಿಸಿ 139ನೆೇ ವಿಶ್ವ ಕಾರ್ಮಿಕ ದಿನಾಚರಣೆಯನ್ನು ನಗರದ ರೋಟರಿ ಬಾಲಭವನದಲ್ಲಿ ಆಚರಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಮಾತನಾಡಿದ ಎಐಯುಟಿಯುಸಿ ಜಿಲ್ಲಾಧ್ಯಕ್ಷ ಮಂಜುನಾಥ್ ಕೆೈದಾಳೆ “ಮೇ ದಿನಾಚರಣೆಯು ಜಗತ್ತಿನಾದ್ಯಂತ ಕಾರ್ಮಿಕರು ಅತ್ಯಂತ ಸಂಭ್ರಮ, ಉತ್ಸಾಹಗಳಿಂದ, ಕೆಚ್ಚಿನಿಂದ ಆಚರಿಸುವ ದಿನವಾಗಿದೆ. ಮೇ ಎಂಟರ 1886 ರಲ್ಲಿ ಅಮೆರಿಕದಲ್ಲಿ ಕಾರ್ಮಿಕರು ಎಂಟು ಗಂಟೆಗಳ ಕೆಲಸ ಮತ್ತು ಇತರ ಸವಲತ್ತುಗಳು, ಜೀವನದ ಭದ್ರತೆಗಾಗಿ ಆರಂಭಿಸಿದ ಹೋರಾಟ ಜಗತ್ತಿನಾದ್ಯಂತ ಗಮನಸೆಳೆಯಿತು.
ಇದರಿಂದ ಬಂಡವಾಳಶಾಹಿಗಳು ಆತಂಕಗೊಂಡು ನೂರಾರು ಸಾವಿರಾರು ಕಾರ್ಮಿಕರ, ಮುಖಂಡರ ಕಗ್ಗೊಲೆ ಮಾಡಲಾಯಿತು. ರಕ್ತದಿಂದ ಬಿಳಿ ಧ್ವಜ ಕೆಂಪು ಬಣ್ಣವಾಯಿತು. ಐತಿಹಾಸಿಕ ಹೋರಾಟದ ಪರಿಣಾಮವಾಗಿ ಕಾರ್ಮಿಕರಿಗೆ ಎಂಟು ತಾಸುಗಳ ಕೆಲಸ ಮತ್ತು ಗೌರವಯುತವಾಗಿ ಜೀವನ ಭದ್ರತೆಗಳು, ಬಂಡವಾಳ ಶಾಹಿ ತೆಗೆದುಹಾಕಿ ಸಮಾಜವಾದಿ ವ್ಯವಸ್ಥೆಗೆ ನಾಂದಿ ಹಾಡಿತು. ಇದು ಮುಂದುವರೆದು ರಷ್ಯಾ, ಚೀನಾ, ವಿಯೆಟ್ನಾಂ, ಕೊರಿಯಾ, ಕ್ಯೂಬಾ ಸೇರಿದಂತೆ ಹಲವು ರಾಷ್ಟ್ರಗಳಲ್ಲಿ ಕಾರ್ಮಿಕರ ನೇತೃತ್ವದಲ್ಲಿ ಸಮಾಜವಾದಿ ಕ್ರಾಂತಿ ನೆರವೇರಿತು” ಎಂದು ತಿಳಿಸಿದರು.

“ಇಂತಹ ಅಪಾರವಾದ ತ್ಯಾಗ ಬಲಿದಾನಗಳಿಂದ ಪಡೆದುಕೊಂಡ ಕಾರ್ಮಿಕ ಹಕ್ಕುಗಳು ಪ್ರತಿ ದಿನ ದಮನಕ್ಕೆ ಒಳದಾಗುತ್ತಿವೆ. 8 ತಾಸು ದುಡಿಮೆ ಎನ್ನುವುದು ಕೇವಲ ಪುಸ್ತಕಕ್ಕೆ ಸೀಮಿತವಾಗಿದೆ. ಕನಿಷ್ಠ 10- 14 ತಾಸುಗಳ ಕೆಲಸ ಇಂದು ಅಲಿಖಿತ ನಿಯಮವಾಗಿಬಿಟ್ಟಿದೆ. ಪ್ರಬಲವಾದ ಕಾರ್ಮಿಕ ಹೋರಾಟದ ಅನುಪಸ್ಥಿತಿಯಲ್ಲಿ ದೊಡ್ಡ ಕಾರ್ಪೊರೇಟ್ ಮಾಲೀಕರು ಎಲ್ಲಾ ಕಾರ್ಮಿಕ ಕಾನೂನುಗಳನ್ನು ಗಾಳಿಗೆ ತೂರಿ, ಮನಸ್ಸಿಗೆ ಬಂದಂತೆ ಮಾತನಾಡುತ್ತಿದ್ದಾರೆ. ವಾರದಲ್ಲಿ 48 ಗಂಟೆಯ ದುಡಿಮೆಯ ಬದಲಿಗೆ ಇನ್ಫೋಸಿಸ್ ನ ಮಾಲೀಕ ನಾರಾಯಣಮೂರ್ತಿ 72 ಗಂಟೆ ಕೆಲಸ ಮಾಡಿ ಎಂದರೆ,
ಮತ್ತೊಬ್ಬರು ಎಲ್ ಆ್ಯಂಡ್ ಟಿ ಕಂಪನಿಯ ಮಾಲೀಕ 90 ಗಂಟೆ ಕೆಲಸ ಮಾಡಿ ಎಂದು ಕಾರ್ಮಿಕರಿಗೆ ‘ಉಪದೇಶ’ ಮಾಡುತ್ತಿದ್ದಾರೆ. ಇಂತಹ ಮಾಲೀಕರಿಗೆ ಕಾರ್ಮಿಕರ ಆರೋಗ್ಯ, ಕೌಟುಂಬಿಕ ಜೀವನದ ಬಗ್ಗೆ ಎಳ್ಳಷ್ಟೂ ಕಾಳಜಿ ಇಲ್ಲ. ಗರಿಷ್ಠ ಲಾಭವನ್ನು ಗಳಿಸುವುದು ಬಿಟ್ಟರೆ ಈ ಮಾಲೀಕರಿಗೆ ಬೇರೆ ಏನಾದರೂ ಗೊತ್ತು ಗುರಿಯಿಲ್ಲ” ಎಂದು ಆರೋಪಿಸಿದರು.

“ಸ್ವಾತಂತ್ರ್ಯ ಬಂದಾಗಿನಿಂದ ನಮ್ಮನ್ನು ಆಳ್ವಿಕೆ ಮಾಡಿರುವ ಎಲ್ಲಾ ಸರ್ಕಾರಗಳು ಈ ಬಂಡವಾಳಶಾಹಿ ಮಾಲೀಕರ ತಾಳಕ್ಕೆ ತಕ್ಕಂತೆ ಕುಣಿಯುತ್ತಿವೆ. ಅವರ ಲಾಭವನ್ನು ನೂರಾರು ಪಟ್ಟು ಹೆಚ್ಚಿಸಲು ಕಾರ್ಮಿಕ ಕಾನೂನುಗಳನ್ನೇ ಬದಲಾವಣೆ ಮಾಡುತ್ತಿದ್ದಾರೆ” ಎಂದು ಅಸಮಾಧಾನ ವ್ಯಕ್ತಪಡಿಸಿದರು
ಈ ಸುದ್ದಿ ಓದಿದ್ದೀರಾ? ದಾವಣಗೆರೆ | ಪಾಕಿಸ್ತಾನಿ ಮಹಿಳೆಯ ಅಧ್ಯಯನ ವೀಸಾ, ಭಾರತ ಬಿಡುವ ಅಗತ್ಯವಿಲ್ಲ; ಎಸ್ಸಿ ಉಮಾ ಪ್ರಶಾಂತ್.
“ಕೇಂದ್ರ ಸರ್ಕಾರ ದೇಶದಲ್ಲಿ ವ್ಯಾಪಾರ ಸ್ನೇಹಿ ವಾತಾವರಣ ಸೃಷ್ಟಿಸುವ ನೆಪದಲ್ಲಿ ನಾಲ್ಕು ಲೇಬರ್ ಕೋಡ್ ಗಳನ್ನು ಜಾರಿಗೆ ತಂದಿದೆ. ಈ ಮೂಲಕ 29 ಕಾರ್ಮಿಕ ಪರವಾದ ಕಾನೂನುಗಳನ್ನು ನೆಲಸಮ ಮಾಡುತ್ತಿವೆ. ಇನ್ನು ಮುಂದೆ ಕಾಯಂ ಉದ್ಯೋಗಗಳ ಸ್ಥಾನವನ್ನು ನಿಗದಿತ ಅವಧಿಯ ಉದ್ಯೋಗಗಳು ಆಕ್ರಮಿಸಲಿವೆ. ಅಷ್ಟೇ ಅಲ್ಲದೆ ಲೇಬರ್ ಕೋಡ್ ಹೆಸರಲ್ಲಿ ಕಾರ್ಮಿಕ ಸಂಘಟನೆ ಹಾಗೂ ಪ್ರಜಾತಾಂತ್ರಿಕ ಹಕ್ಕುಗಳನ್ನು ಧಮನ ಮಾಡುತ್ತಿದ್ದಾರೆ. ಹೋರಾಟದ ಧ್ವನಿಗಳನ್ನು ಹತ್ತಿಕ್ಕುತ್ತಿವೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.

“ಗುತ್ತಿಗೆ- ಹೊರಗುತ್ತಿಗೆ ಪದ್ಧತಿ ಹೆಸರಲ್ಲಿ ಕನಿಷ್ಠ ವೇತನ, ಇಪಿಎಫ್, ಇಎಸ್ಐ, ರಜೆ ಮುಂತಾದ ಸೌಲಭ್ಯಗಳಿಂದ ಕಾರ್ಮಿಕರನ್ನು ನಿರಂತರವಾಗಿ ವಂಚಿಸುತ್ತಿವೆ. ಸ್ಟೀಮ್ ಅಡಿಯಲ್ಲಿ ಕೆಲಸ ಮಾಡುವ ಆಶಾ, ಅಂಗನವಾಡಿ ಹಾಗೂ ಬಿಸಿಊಟ ಕಾರ್ಯಕರ್ತೆಯರನ್ನು ಸರ್ಕಾರಿ ನೌಕರರೆಂದು ಪರಿಗಣಿಸುವುದು ದೂರದ ಮಾತು, ಕನಿಷ್ಠ ಪಕ್ಷ ಅವರನ್ನು ಕಾರ್ಮಿಕರೆಂದು ಸರ್ಕಾರಗಳು ಪರಿಗಣಿಸುತ್ತಿಲ್ಲ. ಸಮಾಜದ ಸ್ವಾಸ್ಥ್ಯಕ್ಕೆ, ಮಹಿಳಾ ಮತ್ತು ಮಕ್ಕಳ ಆರೋಗ್ಯಕ್ಕಾಗಿ ಕಷ್ಟಪಟ್ಟು ದುಡಿಯುವ ಈ ಕಾರ್ಯಕರ್ತೆಯರಿಗೆ ಸರ್ಕಾರಗಳು ಪುಡಿಗಾಸು ವೇತನ ನೀಡುತ್ತಿರುವುದು ಅತ್ಯಂತ ನಾಚಿಕೆಗೇಡಿನ ಸಂಗತಿ. ಒಟ್ಟಾರೆಯಾಗಿ ಇಂದಿನ ಬೆಲೆ ಏರಿಕೆ, ನಿರುದ್ಯೋಗ, ಕೋಮುವಾದ, ಶಿಕ್ಷಣ-ಆರೋಗ್ಯದ ದುಬಾರಿ ವೆಚ್ಚಗಳು ಕಾರ್ಮಿಕರ ಬದುಕನ್ನು ಅತೀವ ಸಂಕಷ್ಟಕ್ಕೆ ಗುರಿಯಾಗಿಸಿವೆ. ಹಾಗಾಗಿ ಕಾರ್ಮಿಕರು ಸದೃಢವಾದ ಕಾರ್ಮಿಕ ಸಂಘಟನೆಯ ನೇತೃತ್ವದಲ್ಲಿ ಸಂಧಾನ ರಹಿತವಾದ ಹೋರಾಟಗಳನ್ನು ಬೆಳೆಸಿ ಈ ಶೋಷಕ ಬಂಡವಾಳಶಾಹಿ ವ್ಯವಸ್ಥೆ ವಿರುದ್ಧ ಸಮಾಜವಾದಿ ಕ್ರಾಂತಿಗೆ ಮತ್ತೊಮ್ಮೆ ಮುಂದಾಗಬೇಕು” ಎಂದು ಕರೆ ನೀಡಿದರು.
ಈ ಸುದ್ದಿ ಓದಿದ್ದೀರಾ? ಚಿತ್ರದುರ್ಗ | ಗಂಡು ಮಗುವಿಗೆ ಜನ್ಮ ನೀಡದಕ್ಕೆ ಪತ್ನಿ ಮೇಲೆ ಗಂಭೀರ ಹಲ್ಲೆ.
ಕೆನರಾ ಬ್ಯಾಂಕ್ ಸ್ಪಾಫ್ ಫೆಡರೇಷನ್ ನ ಹಿರಿಯ ಕಾರ್ಮಿಕ ಮುಖಂಡ ಎಮ್.ಆರ್.ಹಿರೇಮರ್ ಮಾತನಾಡಿ, “ಐತಿಹಾಸಿಕ ಮೇ ದಿನಾಚರಣೆಯನ್ನು ಪ್ರತಿ ವರ್ಷ ಕೇವಲ ಸಂಪ್ರದಾಯದಂತೆ ಆಚರಿಸುವ ಬದಲಿಗೆ ಕಾರ್ಮಿಕ ಹಕ್ಕುಗಳ ಹರಣದ ವಿರುದ್ಧ, ಬಂಡವಾಳಶಾಹಿ ನೀತಿಗಳ ವಿರುದ್ಧ ಹೋರಾಟಗಳನ್ನು ಮತ್ತಷ್ಟು ತೀವ್ರಗೊಳಿಸುವ ಹೋರಾಟದ ಸಂಕಲ್ಪ ದಿನವನ್ನಾಗಿ ಆಚರಿಸಬೇಕು. ಕಾರ್ಮಿಕರು ತಮ್ಮ ಒಗ್ಗಟ್ಟನ್ನು ಮತ್ತಷ್ಟು ಗಟ್ಟಿಯಾಗಿಸುತ್ತಾ ಜಾತಿ, ಧರ್ಮ, ಭಾಷೆ, ಜನಾಂಗದ ಹೆಸರಲ್ಲಿ ಕಾರ್ಮಿಕರನ್ನು ಹೊಡೆದಾಡುವ ಪಿತೂರಿಗಳನ್ನು ಸೋಲಿಸಬೇಕಿದೆ. ಮೇ ದಿನದ ಈ ಸಂದರ್ಭದಲ್ಲಿ ಅಮೇರಿಕಾದ ಕುಮ್ಮಕ್ಕಿನಿಂದ ಪ್ಯಾಲೇಸ್ತೀನ್ ಮೇಲೆ ಇಸ್ರೇಲ್ ನಡೆಸುತ್ತಿರುವ ಬಾಂಬ್ ದಾಳಿಯನ್ನು, ಉಕ್ರೇನ್ ಮೇಲೆ ರಷ್ಯಾ ನಡೆಸುತ್ತಿರುವ ಯುದ್ಧ ದಾಳಿಯನ್ನು ತೀವ್ರವಾಗಿ ವಿರೋಧಿಸಬೇಕಿದೆ. ಇಡೀ ಜಗತ್ತಿನ ಕಾರ್ಮಿಕ ವರ್ಗ ‘ನಾವೆಲ್ಲ ಒಂದು’, ಸಾಮ್ರಾಜ್ಯಶಾಹಿಗಳು ನಡೆಸುತ್ತಿರುವ ಮಾನವತೆಯ ಈ ಕಗ್ಗೊಲೆಯನ್ನು ಸಹಿಸಿಕೊಳ್ಳುವುದಿಲ್ಲ ಎಂಬ ಸಂದೇಶವನ್ನು ನೀಡಬೇಕಿದೆ. ಈ ಹಿನ್ನೆಲೆಯಲ್ಲಿ ಮೇ ದಿನಾಚರಣೆಯನ್ನು ಅತ್ಯಂತ ಯೋಗ್ಯ ರೀತಿಯಲ್ಲಿ ಆಚರಿಸಬೇಕು” ಎಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ತಿಪ್ಪೇಸ್ವಾಮಿ ಅಣಬೇರು, ಮಂಜುನಾಥ್ ಕುಕ್ಕುವಾಡ ಮಾತನಾಡಿದರು. ಜಿಲ್ಲಾ ಕಾರ್ಯದರ್ಶಿ ಮಂಜುನಾಥ್ ಕುಕ್ಕುವಾಡ , ಉಪಾಧ್ಯಕ್ಷ ಶಿವಾಜಿ ರಾವ್ ಹಾಗೂ ಎಲ್.ಹೆಚ್.ಪ್ರಕಾಶ್ , ಹಾಸ್ಟೆಲ್ ಸಂಘಟನೆಯ ಕಾರ್ಯದರ್ಶಿ ನಿಂಗರಾಜು, ಯುಬಿಡಿಟಿ ಕಾಲೇಜು ಸಂಘದ ಉಪಾಧ್ಯಕ್ಷ ಪರಮೇಶ್ವರಪ್ಪ, ಆಶಾ ಸಂಘಟನೆಯ ಜಿಲ್ಲಾ ಮುಖಂಡರು ಶ್ರೀಮತಿ ಇಂದಿರಾ , ವಿಂಡ್ ಎನರ್ಜಿ ಸಂಘಟನೆಯ ಮುಖಂಡ ಲೋಕೇಶ್ ಸೇರಿದಂತೆ ಹಲವು ಮುಖಂಡರು ಕಾರ್ಮಿಕರು ಭಾಗವಹಿಸಿದ್ದರು. .