ಕರ್ನಾಟಕ ರಾಜ್ಯ ಸರ್ಕಾರವು 6,200 ಸರ್ಕಾರಿ ಶಾಲೆಗಳನ್ನು “ವಿಲೀನ”ಗೊಳಿಸುವ ಹೆಸರಿನಲ್ಲಿ ಮುಚ್ಚಲು ಹೊರಟಿರುವುದನ್ನು ವಿರೋಧಿಸಿ ಎಐಡಿಎಸ್‍ಒ-ಆಲ್ ಇಂಡಿಯಾ ಡೆಮಾಕ್ರಟಿಕ್ ಸ್ಟೂಡೆಂಟ್ಸ್ ಆರ್ಗನೈಸೇಷನ್ (AIDSO) ಕರ್ನಾಟಕ ರಾಜ್ಯ ಸಮಿತಿಯು ಹಮ್ಮಿಕೊಂಡಿದ್ದ ಐತಿಹಾಸಿಕ 50 ಲಕ್ಷ ಸಹಿ ಸಂಗ್ರಹ ಅಭಿಯಾನವು ಯಶಸ್ವಿಯಾಗಿ ಪೂರ್ಣಗೊಂಡಿದೆ. ದಾವಣಗೆರೆ ಜನತೆಯಿಂದ “ಸರ್ಕಾರಿ ಶಾಲೆಗಳನ್ನು ಉಳಿಸ ಮತ್ತು ಬಲಪಡಿಸಿ” ಎಂಬ ಹೋರಾಟಕ್ಕೆ ಅಭೂತಪೂರ್ವ ಬೆಂಬಲ ದೊರೆತಿದೆ. ಆಗಸ್ಟ್ 21 ರಂದು ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಬೃಹತ್ ರಾಜ್ಯವ್ಯಾಪಿ ಚಳುವಳಿಯ ಸಮಾರೋಪ ಸಭೆ ನಡೆಯಲಿದ್ದು ಮುಖ್ಯಮಂತ್ರಿಗಳಿಗೆ ಸಹಿಗಳ ಪತ್ರ ನೀಡಿ ಶಾಲೆಗಳನ್ನು ಮುಚ್ಚದಂತೆ ಒತ್ತಾಯಿಸಲಾಗುವುದು ಎಂದು ದಾವಣಗೆರೆ ಎಐಡಿಎಸ್ಓ ಜಿಲ್ಲಾ ಕಾರ್ಯದರ್ಶಿ ಪೂಜಾ ನಂದಿಹಳ್ಳಿ ತಿಳಿಸಿದರು.
“ದಾವಣಗೆರೆಯ 60ಕ್ಕೂ ಹೆಚ್ಚು ಹಳ್ಳಿ ಶಾಲೆಗಳ ಸಮೀಕ್ಷೆ ನಡೆದಿದೆ. ನರಸೀಪುರ,ಸಿದ್ಧನೂರು ಲಂಬಾಣಿಹಟ್ಟಿ, ಪವಾಡರಂಗನಹಳ್ಳಿ, ಹುಳಪನ ಕಟ್ಟೆ ಇನ್ನೂ ಹಲವು ಹಳ್ಳಿಗಳಲ್ಲಿ ಸಾರ್ವಜನಿಕ ಹೋರಾಟ ಸಮಿತಿಯನ್ನು ರಚನೆ ಮಾಡಲಾಗಿದೆ. ಕಾರಿಗನೂರು, ಕಂಚುಗಾರನಹಳ್ಳಿಯಲ್ಲಿ ಯಶಸ್ವೀ ಹೋರಾಟಗಳೇ ನಡೆದಿವೆ. “ಸರ್ಕಾರಿ ಶಾಲೆಗಳನ್ನು ಉಳಿಸ ಮತ್ತು ಬಲಪಡಿಸಿ” ಎಂಬ ಕರೆಯೊಂದಿಗೆ ಪ್ರಾರಂಭವಾದ ಈ ಅಭಿಯಾನವು ರಾಜ್ಯದ ಇತಿಹಾಸದಲ್ಲಿಯೇ ಅತಿದೊಡ್ಡ ವಿದ್ಯಾರ್ಥಿ ಚಳುವಳಿಗಳಲ್ಲಿ ಒಂದಾಗಿ ಹೊರಹೊಮ್ಮಿದೆ” ಎಂದು ಹರ್ಷ ವ್ಯಕ್ತಪಡಿಸಿದರು.
“50,000 ಕ್ಕೂ ಹೆಚ್ಚು ಸ್ವಯಂಸೇವಕರು ರಾಜ್ಯಾದ್ಯಂತ ಈ ಅಭಿಯಾನದಲ್ಲಿ ಭಾಗವಹಿಸಿದ್ದು, ಪೋಷಕರು, ವಿದ್ಯಾರ್ಥಿಗಳು ಸ್ಥಳೀಯ ನಾಗರಿಕರ ಜೊತೆ ಸೇರಿ ನೂರಾರು ಪ್ರತಿಭಟನಾ ಸಭೆಗಳನ್ನು ನಡೆಸಿದ್ದಾರೆ. ಹಲವು ಜಿಲ್ಲೆಗಳಲ್ಲಿ, ಈ ಹೋರಾಟವು, ಅಧಿಕಾರಿಗಳು ಅನೇಕ ಶಾಲೆಗಳಲ್ಲಿ ಮೂಲಸೌಕರ್ಯಗಳನ್ನು ಸುಧಾರಿಸುವಂತೆ ಮಾಡಿದೆ. ಅಲ್ಲದೆ, ಕರ್ನಾಟಕದಾದ್ಯಂತ ಹಲವಾರು ಶಿಕ್ಷಕರು, ಮುಖ್ಯೋಪಾಧ್ಯಾಯರು ಮತ್ತು ಶಿಕ್ಷಣ ತಜ್ಞರಿಂದ ಈ ಚಳುವಳಿಗೆ ಬೆಂಬಲ ವ್ಯಕ್ತವಾಗಿದೆ. ರಾಜ್ಯದ 30 ಜಿಲ್ಲೆಗಳ 150 ಕ್ಕೂ ಹೆಚ್ಚು ತಾಲೂಕುಗಳನ್ನು ಈ ಅಭಿಯಾನವು ತಲುಪಿದ್ದು, 1000 ಕ್ಕೂ ಹೆಚ್ಚು ಶೈಕ್ಷಣಿಕ ಸಂಸ್ಥೆಗಳ ವಿದ್ಯಾರ್ಥಿಗಳು ಇದರಲ್ಲಿ ಭಾಗವಹಿಸಿದ್ದರು” ಎಂದು ಮಾಹಿತಿ ನೀಡಿದರು.
ಎಐಡಿಎಸ್‍ಒ ಜಿಲ್ಲಾ ಕಾರ್ಯದರ್ಶಿ ಸುಮನ್ ಟಿ ಎಸ್ ಮಾಹಿತಿ ನೀಡಿ, “ಸಂಗ್ರಹಿಸಲಾದ ಸಹಿಗಳನ್ನು ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಆಗಸ್ಟ್ 21 ರಂದು ನಡೆಯಲಿರುವ ಬೃಹತ್ ಸಮಾರೋಪ ಸಮಾರಂಭದಲ್ಲಿ ಮಾನ್ಯ ಮುಖ್ಯಮಂತ್ರಿಗಳಿಗೆ ಔಪಚಾರಿಕವಾಗಿ ಸಲ್ಲಿಸಲಾಗುವುದು. ಈ ಕಾರ್ಯಕ್ರಮದಲ್ಲಿ ಸಾವಿರಾರು ವಿದ್ಯಾರ್ಥಿಗಳು, ಪೋಷಕರು, ಶಿಕ್ಷಕರು ಮತ್ತು ಸಾರ್ವಜನಿಕ ಶಿಕ್ಷಣದ ಹಿತೈಷಿಗಳು ಭಾಗವಹಿಸಲಿದ್ದಾರೆ” ಎಂದು ತಿಳಿಸಿದರು.
“ನಿವೃತ್ತ ಸುಪ್ರೀಂ ಕೋರ್ಟ್ ನ್ಯಾಯಾಧೀಶರು, ಮಾಜಿ ಲೋಕಾಯುಕ್ತರಾದ ಸಂತೋಷ್ ಹೆಗಡೆ ಕಾರ್ಯಕ್ರಮ ಉದ್ಘಾಟನೆ ಮಾಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಸಾಹಿತಿಗಳು ಮತ್ತು ಶಿಕ್ಷಣ ತಜ್ಞರಾದ ಬರಗೂರು ರಾಮಚಂದ್ರಪ್ಪ ಭಾಗವಹಿಸಲಿದ್ದು,
ಅತಿಥಿಗಳಾಗಿ ಹಂಪಿ ಕನ್ನಡ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಪ್ರೊ. ಎ. ಮುರಿಗೆಪ್ಪ, ದಕ್ಷಿಣ ಭಾರತದ ಖ್ಯಾತ ಚಲನಚಿತ್ರ ನಟ ಕಿಶೋರ್ ಕುಮಾರ್, ಎಐಡಿಎಸ್‍ಒ ಕೇಂದ್ರ ಕೌನ್ಸಿಲ್ ಪ್ರಧಾನ ಕಾರ್ಯದರ್ಶಿ ಶಿಬಾಶಿಷ್ ಪ್ರಹರಾಜ್, ಎಐಡಿಎಸ್‍ಒ ರಾಜ್ಯ ಕಾರ್ಯದರ್ಶಿ ಅಜಯ್ ಕಾಮತ್ ಭಾಗವಹಿಸಲಿದ್ದು, ಎಐಡಿಎಸ್‍ಒ ರಾಜ್ಯಾಧ್ಯಕ್ಷೆ ಅಶ್ವಿನಿ ಕೆ ಎಸ್ ಅಧ್ಯಕ್ಷತೆ ವಹಿಸಲಿದ್ದಾರೆ” ಎಂದರು.
ಈ ಸುದ್ದಿ ಓದಿದ್ದೀರಾ? ದಾವಣಗೆರೆ | ಸರ್ಕಾರಿ ಶಾಲೆ ಮಕ್ಕಳಿಗೆ ಸುಸಜ್ಜಿತ ವ್ಯವಸ್ಥೆ ಸಿಕ್ಕರೆ ಅತ್ಯುನ್ನತ ಸಾಧನೆ, ಸಾಮರ್ಥ್ಯ ಅನಾವರಣ
“ಚಳುವಳಿಯು ಕರ್ನಾಟಕದ ವಿದ್ಯಾರ್ಥಿ ಚಳುವಳಿಯ ಇತಿಹಾಸದಲ್ಲಿ ಒಂದು ವಿಶಿಷ್ಟ ಹೆಜ್ಜೆಯಾಗಿದೆ. ಸರ್ಕಾರಿ ಶಾಲೆಗಳ ರಕ್ಷಣೆ ಮತ್ತು ಬಲವರ್ಧನೆಗಾಗಿ ನಡೆಯಲಿರುವ ಈ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಧ್ವನಿ ಎತ್ತಬೇಕೆಂದು ಎಐಡಿಎಸ್‍ಒ ಸಾರ್ವಜನಿಕರಲ್ಲಿ ಮನವಿ ಮಾಡುತ್ತಿದೆ” ಎಂದು ತಿಳಿಸಿದರು.