6,200ಕ್ಕೂ ಹೆಚ್ಚು ಸರ್ಕಾರಿ ಶಾಲೆಗಳನ್ನು ಮುಚ್ಚುತ್ತಿರುವುದನ್ನ ಖಂಡಿಸಿ ಆಲ್ ಇಂಡಿಯಾ ಡೆಮಾಕ್ರಟಿಕ್ ಸ್ಟೂಡೆಂಟ್ ಆರ್ಗನೈಜೇಷನ್ – ಎಐಡಿಎಸ್ಓ ದಾವಣಗೆರೆ ಜಿಲ್ಲಾ ಸಮಿತಿ ವತಿಯಿಂದ ದಾವಣಗೆರೆ ನಗರದ ರೈಲ್ವೆ ನಿಲ್ದಾಣದ ಮುಂಭಾಗ ಸಹಿ ಸಂಗ್ರಹ ಅಭಿಯಾನ ಹಮ್ಮಿಕ್ಕೊಳ್ಳಲಾಗಿತ್ತು.

ಸರ್ಕಾರಿ ಶಾಲೆಗಳನ್ನು ಮುಚ್ಚುವ ನಿರ್ಧಾರ ವಿರೋಧಿಸಿ ಜನಜಾಗೃತಿ ಮೂಡಿಸಿದ ಎಐಡಿಎಸ್ಓ ಮುಖಂಡರು “ರಾಜ್ಯಾದ್ಯಂತ 6,200ಕ್ಕೂ ಹೆಚ್ಚು ಸರ್ಕಾರಿ ಶಾಲೆಗಳನ್ನು ಕರ್ನಾಟಕ ರಾಜ್ಯ ಸರ್ಕಾರವು ಹಬ್ ಅಂಡ್ ಸ್ಪೋಕ್ ಮಾದರಿಯಡಿ ಮುಚ್ಚಲು ಮುಂದಾಗಿದೆ. ರಾಜ್ಯದ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೂ ಬರುವ ಮುನ್ನ ನಾವು ಬಡವರ ಪರ, ಕಾರ್ಮಿಕರ ಪರ, ಜನಸಾಮಾನ್ಯರ ಸರ್ಕಾರ ಎಂದು ಅಧಿಕಾರದ ಗದ್ದುಗೆ ಏರಿದರು. ಬಂದ ನಂತರ ಹಲವಾರು ವಿದ್ಯಾರ್ಥಿ ವಿರೋಧಿ, ಜನ ವಿರೋಧಿ ನೀತಿಗಳನ್ನು ಜಾರಿಮಾಡುತ್ತಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ಸುದ್ದಿ ಓದಿದ್ದೀರಾ? ದಾವಣಗೆರೆ | ಓದಿನ ಕಡೆ ಗಮನಕೊಟ್ಟು ವಿದ್ಯಾರ್ಥಿಗಳು ಸಾಮಾಜಿಕ ಜಾಲತಾಣ ಉತ್ತಮ ಕೆಲಸಕ್ಕೆ ಬಳಸಿ; ಮಹಾವೀರ ಕರೆಣ್ಣನವರ್
“ಬಹುತೇಕ ಬಡವರಿರುವ ನಮ್ಮ ದೇಶದಲ್ಲಿ ಅವರ ದುಡಿಮೆಯೇ ಅವರಿಗೆ ಆಸರೆ. ‘ಇವತ್ತು ದುಡಿದರೆ ಇಂದಿಗೆ ರೊಟ್ಟಿ’ ಹೀಗಿರುವ ಪರಿಸ್ಥಿತಿಯಲ್ಲಿ ಸರ್ಕಾರಿ ಶಾಲೆಗಳನ್ನು ಬಲಪಡಿಸಿ ಬಡವರ ಮಕ್ಕಳಿಗೆ ಬೆಳಕಾಗಬೇಕಿತ್ತು. ದುರಂತವೆಂದರೆ, ಎಲ್ಲ ಸರ್ಕಾರಗಳು ಸೇರಿಕೊಂಡು ಸರ್ಕಾರಿ ಶಾಲೆಗಳನ್ನ ಮುಚ್ಚಲು ಮುಂದಾಗಿದೆ. ‘ಬೇಲಿ ಎದ್ದು ಹೊಲ ಮೇಯ್ದಂತೆ ಸರ್ಕಾರವೇ ಶಾಲೆಗಳನ್ನು ನುಂಗುತ್ತಿದೆ. ರಾಜ್ಯವನ್ನಾಳುವ ಎಲ್ಲ ಪಕ್ಷದ ನಾಯಕರು ತಮ್ಮ ತಮ್ಮದೇ ಶಾಲೆಗಳಿಂದ ಹಿಡಿದು ವೈದ್ಯಕೀಯ ಕಾಲೇಜು ಇಂಜಿನಿಯರಿಂಗ್ ಕಾಲೇಜುಗಳನ್ನು ಹಾಗೂ ವಿಶ್ವವಿದ್ಯಾಲಯಗಳು ನಡೆಸುತ್ತಿದ್ದಾರೆ. ಈ ಅನ್ಯಾಯವನ್ನು ಪ್ರಶ್ನಿಸುವವರು ಯಾರು?” ಎಂದು ಕಿಡಿಕಾರಿದರು.

“ಎಐಡಿಎಸ್ಓ ವಿದ್ಯಾರ್ಥಿ ಸಂಘಟನೆಯು ದಶಕಗಳಿಂದ ಸರ್ಕಾರಿ ಶಾಲೆಯ ಉಳಿವಿಗಾಗಿ, ಶಿಕ್ಷಣದ ಖಾಸಗೀಕರಣವನ್ನು ನಿಲ್ಲಿಸಿ ಎಂಬ ಘೋಷಣೆಯೊಂದಿಗೆ ನಿರಂತರ ಹೋರಾಟವನ್ನು ಬೆಳೆಸುತ್ತಿದೆ. ಕಿವುಡು ಸರ್ಕಾರಗಳಿಗೆ ಕೇಳಿಸುವಂತೆ ಮಾಡುವುದು ಪ್ರಸ್ತುತ ಸಂದರ್ಭದ ಶೈಕ್ಷಣಿಕ ಅವಶ್ಯಕತೆಯಾಗಿದೆ. ಜಿಲ್ಲಾದ್ಯಂತ ಬೀದಿ ಬೀದಿಗಳಲ್ಲಿ, ಬಸ್ ನಿಲ್ದಾಣದಲ್ಲಿ, ಹಳ್ಳಿಗಳಲ್ಲಿ, ಹಾಸ್ಟೆಲುಗಳಲ್ಲಿ, ಶಾಲಾಕಾಲೇಜುಗಳಲ್ಲಿ ಸರ್ಕಾರಿ ಶಾಲೆಗಳ ಮುಚ್ಚದಂತೆ ಸಹಿ ಸಂಗ್ರಹ ಅಭಿಯಾನವನ್ನು ಹಮ್ಮಿಕೊಳ್ಳಲಾಗುತ್ತಿದೆ” ಎಂದು
ತಿಳಿಸಿದರು.
ರೈಲ್ವೆ ನಿಲ್ದಾಣದ ಮುಂಭಾಗ ಸಾರ್ವಜನಿಕರಿಂದ ಸಹಿ ಸಂಗ್ರಹ ಅಭಿಯಾನವನ್ನು ಹಮ್ಮಿಕೊಳ್ಳಲಾಗಿತ್ತು. ಸಹಸ್ರಾರು ಸಂಖ್ಯೆಯಲ್ಲಿ ಸಾರ್ವಜನಿಕರು ಬಂದು ಸಹಿ ಹಾಕುವ ಮೂಲಕ ಹೋರಾಟವನ್ನು ಬೆಂಬಲಿಸಿದರು.
ಈ ಸುದ್ದಿ ಓದಿದ್ದೀರಾ ? ದಾವಣಗೆರೆ | ತ್ಯಾಗ ಬಲಿದಾನದ ಸಂಕೇತ ಬಕ್ರೀದ್; ಈದ್ಗಾ ಮೈದಾನದಲ್ಲಿ ಮುಸ್ಲಿಂ ಬಾಂಧವರ ಸಾಮೂಹಿಕ ಪ್ರಾರ್ಥನೆ
ಈ ಸಂದರ್ಭದಲ್ಲಿ ಎಐಡಿಎಸ್ಓ ಅಧ್ಯಕ್ಷರಾದ ಪೂಜಾ ನಂದಿಹಳ್ಳಿ, ಜಿಲ್ಲಾ ಕಾರ್ಯದರ್ಶಿ ಸುಮನ್ ಟಿ ಎಸ್, ಕಾರ್ಯಕರ್ತರಾದ ಗಂಗಾಧರ, ನಂದೀಶ, ಶ್ರೀನಿವಾಸ, ಸೃಷ್ಟಿ ಹಾಗೂ ಇತರ ಕಾರ್ಯಕರ್ತರು ಭಾಗವಹಿಸಿದ್ದರು.