ಡಾ. ಬಿಆರ್ ಅಂಬೇಡ್ಕರ್ ಅವರ 134 ನೇ ಜಯಂತ್ಯುತ್ಸವದ ಅಂಗವಾಗಿ ದಾವಣಗೆರೆಯಲ್ಲಿ ದಲಿತ ಸಂಘಟನೆಗಳು ಸೇರಿದಂತೆ ವಿವಿಧ ಸಂಘಟನೆಗಳು ಅಂಬೇಡ್ಕರ್ ಜಯಂತಿಯನ್ನು ಉತ್ಸಾಹ ಸಂಭ್ರಮದಿಂದ ಆಚರಿಸಿದರು. ವಿಶೇಷವಾಗಿ ಅಲಂಕರಿಸಿದ ದಾವಣಗೆರೆಯ ಅಂಬೇಡ್ಕರ್ ವೃತ್ತದಲ್ಲಿರುವ ಡಾ. ಬಿ ಆರ್ ಅಂಬೇಡ್ಕರ್ ಪ್ರತಿಮೆ ಬಳಿ ಬೆಳಗಿನಿಂದಲೇ ಅಂಬೇಡ್ಕರ್ ಅಭಿಮಾನಿಗಳು ನೂರಾರು ಸಾವಿರಾರು ಸಂಖ್ಯೆಯಲ್ಲಿ ಆಗಮಿಸಿ ಮಾಲಾರ್ಪಣೆ ಮಾಡಿ, ಪುಷ್ಪ ನಮನ ಸಲ್ಲಿಸಿ ಗೌರವ ಸಲ್ಲಿಸಿದರು.
ಸಂವಿಧಾನ ಶಿಲ್ಪಿ ಡಾ.ಅಂಬೇಡ್ಕರ್ ಪ್ರತಿಮೆ ಬಳಿ ಆಗಮಿಸಿದ ಎಲ್ಲರೂ ವಿಶೇಷವಾಗಿ ಅಲಂಕೃತಗೊಂಡಿದ್ದ ಸಂವಿಧಾನ ಶಿಲ್ಪಿ ಡಾ. ಅಂಬೇಡ್ಕರ್ ಪ್ರತಿಮೆ ಮುಂದೆ ನಿಂತು ಸಂಭ್ರಮದಿಂದ ಫೋಟೋ ತೆಗೆದು ತೆಗೆಸಿಕೊಳ್ಳುತ್ತಿದ್ದು ಸಾಮಾನ್ಯವಾಗಿತ್ತು. ಅಲ್ಲದೆ ಪರಸ್ಪರ ಶುಭಾಷಯ ವಿನಿಮಯ ಮಾಡಿಕೊಂಡು ಸಿಹಿ ಹಂಚಿ ಸಂಭ್ರಮಿಸುತ್ತಿದ್ದರು. ಹತ್ತಾರು ವಿವಿಧ ಸಂಘಟನೆಗಳ ಕಾರ್ಯಕರ್ತರು, ಮುಖಂಡರು ಅಂಬೇಡ್ಕರ್ ಅಭಿಮಾನಿಗಳು ಸಂಭ್ರಮದಲ್ಲಿ ಭಾಗಿಯಾಗಿದ್ದರು.

ಕರ್ನಾಟಕ ಭೀಮಸೇನೆ ವತಿಯಿಂದ ಡಾ.ಅಂಬೇಡ್ಕರ್ ಅವರ ಜಯಂತಿ ಪ್ರಯುಕ್ತ ಬೆಳಿಗ್ಗೆ 8.30ರಿಂದಲೇ ಪಥಸಂಚಲನ ಕಾರ್ಯಕ್ರಮ ನಡೆಯಿತು. ನಗರದ ಹೈಸ್ಕೂಲು ಮೈದಾನದಿಂದ ಜಯದೇವ ವೃತ್ತದ ಮಾರ್ಗವಾಗಿ ಅಂಬೇಡ್ಕರ್ ವೃತ್ತದವರೆಗೆ ಪಥಸಂಚಲನ ನಡೆಸಿದ ಕಾರ್ಯಕರ್ತರು ಅಂಬೇಡ್ಕರ್ ಪ್ರತಿಮೆಗೆ ಗೌರವ ಸಲ್ಲಿಸಿದರು.
ದಾವಣಗೆರೆ ನಗರದ ದೊಡ್ಡ ಬೂದಿಹಾಳು, ಯರಗುಂಟೆ, ಜಾಲಿನಗರ, ಅಶೋಕನಗರ, ಎಸ್ಪಿಎಸ್ ನಗರ ಸೇರಿದಂತೆ ನಗರದ ಹಲವೆಡೆಗಳಲ್ಲಿ ಹಲವು ದಲಿತ ಸಂಘಟನೆಗಳು, ಮಾನವ ಬಂಧುತ್ವ ವೇದಿಕೆ ಸೇರಿದಂತೆ ಹಲವು ಸಂಘಟನೆಗಳು ಅಂಬೇಡ್ಕರ್ ಜಯಂತಿಯ ಕಾರ್ಯಕ್ರಮಗಳನ್ನು ಆಯೋಜಿಸಿ ಶಾಲಾ ಮಕ್ಕಳಿಗೆ ಪುಸ್ತಕ ವಿತರಣೆಯಂತಹ ಕಾರ್ಯಕ್ರಮಗಳನ್ನು ಆಯೋಜಿಸಿ ಅಂಬೇಡ್ಕರ್ ಜಯಂತಿ ಕಾರ್ಯಕ್ರಮದಲ್ಲಿ ಗೌರವ ಸಲ್ಲಿಸಿದರು.

ದಾವಣಗೆರೆಯಲ್ಲಿ ಅಂಬೇಡ್ಕರ್ ವೃತ್ತದ ಡಾ.ಬಿ ಆರ್ ಅಂಬೇಡ್ಕರ್ ಪ್ರತಿಮೆ ಬಳಿ ವಿವಿಧ ಸಂಘಟನೆಗಳ ಮುಖಂಡರು ಸೇರಿ ಜನಪರ, ಸಾಮಾಜಿಕ ಮಾಧ್ಯಮ ಈದಿನ ಡಾಟ್ ಕಾಮ್ ಅಂಬೇಡ್ಕರ್ ಅವರ 134 ನೇ ಜಯಂತೋತ್ಸವದ ಅಂಗವಾಗಿ ಅವರ ಹೊರತಂದಿರುವ “ಅರಿವೇ ಅಂಬೇಡ್ಕರ” ವಿಶೇಷ ಸಂಚಿಕೆಯನ್ನು ಬಿಡುಗಡೆಗೊಳಿಸಿ ಸಂಚಿಕೆಗೆ ಮತ್ತು ಮಾಧ್ಯಮಕ್ಕೆ ಶುಭಕೋರಿದರು.
ಈ ಸುದ್ದಿ ಓದಿದ್ದೀರಾ? ಚಿತ್ರದುರ್ಗ | ಕೆಆರ್ಎಸ್ ಪಕ್ಷದಿಂದ ಬಳ್ಳಾರಿಯಲ್ಲಿ ಅಂಬೇಡ್ಕರ್ ಜಯಂತಿಯಂದು ಭೀಮೋತ್ಸವ, ರಾಜ್ಯ ಸಮಾವೇಶ.
ದಾವಣಗೆರೆ ಹೊರವಲಯದ ಯರಗುಂಟೆಯಲ್ಲಿ ಮಾನವ ಬಂಧುತ್ವ ವೇದಿಕೆ, ದಲಿತ ಸಂಘರ್ಷ ಸಮಿತಿ ಆಯೋಜಿಸಿದ ಅಂಬೇಡ್ಕರ್ ಜಯಂತಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಶಿವಕುಮಾರ್ ಮಾಡಾಳು, ಚಿಂತಕ ಆಕಾಶ್, ಹನುಮಂತಪ್ಪ, ಸೇರಿದಂತೆ ಹಲವು ಗಣ್ಯರು ಈದಿನ ಡಾಟ್ ಕಾಮ್ ನ ಅಂಬೇಡ್ಕರರ ವಿಶೇಷ ಬರಹಗಳ ಕುರಿತ “ಅರಿವೇ ಅಂಬೇಡ್ಕರ” ವಿಶೇಷ ಸಂಚಿಕೆಯನ್ನು ಬಿಡುಗಡೆಗೊಳಿಸಿ ಶುಭಹಾರೈಸಿದರು.

ನಗರದ ಅಶೋಕ ರಸ್ತೆಯಲ್ಲಿರುವ ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ ಪಕ್ಷದ ಕಚೇರಿಯಲ್ಲಿ ನಡೆದ ಡಾ. ಬಿಆರ್ ಅಂಬೇಡ್ಕರ್ ಅವರ 134 ನೇ ಜಯಂತಿಯ ಸರಳ ಕಾರ್ಯಕ್ರಮದಲ್ಲಿ ಕಾರ್ಮಿಕ ಮುಖಂಡರಾದ ಆವರಗೆರೆ ಉಮೇಶ್, ಆವರಗೆರೆ ಚಂದ್ರು, ಲಕ್ಷ್ಮಣ್, ಶಿವಕುಮಾರ್ ಹಲವು ಮುಖಂಡರು “ಅರಿವೇ ಅಂಬೇಡ್ಕರ” ಈದಿನ ಡಾಟ್ ಕಾಮ್ ವಿಶೇಷ ಸಂಚಿಕೆಯನ್ನು ಬಿಡುಗಡೆಗೊಳಿಸಿ ಶುಭಹಾರೈಸಿದರು.

ಅಲ್ಲದೆ ನಗರದ ಜಯದೇವ ವೃತ್ತದಲ್ಲಿ ಸಮಗ್ರ ಕರ್ನಾಟಕ ರಕ್ಷಣಾ ವೇದಿಕೆ ಆಯೋಜಿಸಿದ ಡಾಕ್ಟರ್ ಬಿ ಆರ್ ಅಂಬೇಡ್ಕರ್ ಮತ್ತು ಬಾಬು ಜಗಜೀವನ್ ರಾಮ್ ರವರ ಜಯಂತಿಯ ಕಾರ್ಯಕ್ರಮದಲ್ಲಿ ಬಟ್ಟೆ ವಿತರಿಸಿ ಅವರ ಸನ್ಮಾನ ಮಾಡಿ ಅಂಬೇಡ್ಕರ್ ಜಯಂತಿಯನ್ನು ವಿಶೇಷವಾಗಿ ಆಚರಿಸಲಾಯಿತು.