ಮಾಜಿ ಸೈನಿಕರ ಕಾರ್ಯ ಚಟುವಟಿಕೆಗಳಿಗಾಗಿ, ಅವರ ಕುಟುಂಬದ ಸಭೆ ಸಮಾರಂಭಗಳಿಗಾಗಿ ಅವಳಿ ತಾಲ್ಲೂಕಿನಲ್ಲಿ ಸೈನಿಕರ ಭವನ ನಿರ್ಮಾಣ ಮಾಡಬೇಕು, ಎಂಬ ಉದ್ದೇಶದಿಂದ 2 ಎಕರೆ ಜಮೀನು ಕೊಡಬೇಕು ಎಂದು ಆಗ್ರಹಿಸಿ ಹೊನ್ನಾಳಿ ಮತ್ತು ನ್ಯಾಮತಿ ತಾಲೂಕು ಮಾಜಿ ಸೈನಿಕರ ಕ್ಷೇಮಾಭಿವೃದ್ಧಿ ಸಂಘ(ರಿ) ದಿಂದ ಇಂದು ತಹಶೀಲ್ದಾರ್ ಮತ್ತು ಪುರಸಭೆಯ ಅಧ್ಯಕ್ಷರು, ಮುಖ್ಯಾಧಿಕಾರಿಗಳಿಗೆ ಮನವಿ ಸಲ್ಲಿಸಿ ಒತ್ತಾಯಿಸಲಾಯಿತು.

ಈ ವೇಳೆ ಮಾತನಾಡಿದ ಮಾಜಿ ಸೈನಿಕರ ಕ್ಷೇಮಾಭಿವೃದ್ಧಿ ಸಂಘದ ಮುಖಂಡರು, “ಹಲವು ವರ್ಷಗಳಿಂದ ಸೈನಿಕರ ಭವನ ನಿರ್ಮಾಣಕ್ಕೆ ವಿನಂತಿಸಿ ಸಂಬಂಧಪಟ್ಟ ಎಲ್ಲಾ ಇಲಾಖೆಯ ಅಧಿಕಾರಿಗಳಿಗೂ ಮತ್ತು ಜನಪ್ರತಿನಿಧಿ ಗಳಿಗೂ ಮನವಿಯನ್ನು ಕೊಡುತ್ತಾ ಬಂದಿದ್ದೇವೆ. ಆದರೂ ಇದರ ಬಗ್ಗೆ ಕ್ರಮ ಕೈಗೊಂಡಿಲ್ಲ. ಹಾಗಾಗಿ ಮತ್ತೊಮ್ಮೆ ಕೊಟ್ಟ ಮನವಿಯ ಬಗ್ಗೆ ಎಲ್ಲರ ಗಮನಕ್ಕೆ ತಂದು ಮಂಜೂರು ಮಾಡಲು ಒತ್ತಾಯಿಸಿದ್ದೇವೆ. ಸೈನಿಕರ ಭವನ ಮತ್ತು ಸೈನಿಕರ ನಗರದ ಬಗ್ಗೆ ಅಧಿಕಾರಿಗಳಿಗೆ ಮನವರಿಕೆ ಮಾಡಿಕೊಡಲಾಗಿದೆ” ಎಂದು ತಿಳಿಸಿದರು.

“ಮನವಿಗೆ ಎಲ್ಲಾ ಅಧಿಕಾರಿಗಳೂ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಕೂಡಲೇ ಕ್ರಮ ಕೈಗೊಳ್ಳಲು ಒತ್ತಾಯಿಸಿದ್ದು ಮುಂದಿನ ಹಂತಕ್ಕೆ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ” ಎಂದು ತಿಳಿಸಿದರು.
ಈ ಸುದ್ದಿ ಓದಿದ್ದೀರಾ? ದಾವಣಗೆರೆ | ಜಾತಿ ಗಣತಿ ಸಮೀಕ್ಷೆ ಮಂಡಿಸಿ, ಅಧಿವೇಶನದಲ್ಲಿ ಒಳಮೀಸಲಾತಿ ಜಾರಿಗೊಳಿಸಿ; ದಲಿತ ಸಂಘರ್ಷ ಸಮಿತಿ
ಈ ಸಂದರ್ಭದಲ್ಲಿ ತಾಲ್ಲೂಕಿನ ತಹಶೀಲ್ದಾರ್ ಹಾಗೂ ದಂಡಾಧಿಕಾರಿಗಳಾದ ಸಿ ರಾಜೇಶ್ ಕುಮಾರ್, ಪುರಸಭೆಯ ಅಧ್ಯಕ್ಷರಾದ ಮೈಲಪ್ಪ, ಮುಖ್ಯಾಧಿಕಾರಿಗಳಾದ ಲೀಲಾವತಿ, ಪುರಸಭೆ ಸದಸ್ಯ ರಾಜೇಂದ್ರ, ಮಂಜು ಇಂಚರ, ವಿಜೇಂದ್ರಪ್ಪ, ಸೈನಿಕರ ಕ್ಷೇಮಾಭಿವೃದ್ಧಿ ಸಂಘದ ಸಂಘದ ಸಂಸ್ಥಾಪಕ ಅಧ್ಯಕ್ಷರು ಹಾಗೂ ಹಾಲಿ ಗೌರವಾಧ್ಯಕ್ಷರಾದ ವಾಸಪ್ಪ ಎಂ, ಉಪಾಧ್ಯಕ್ಷರಾದ ರಾಮಪ್ಪನವರು, ಕಾರ್ಯದರ್ಶಿಗಳಾದ ಗಂಗಾಧರ್, ಖಜಾಂಚಿ ತೋಟಪ್ಪ, ನಿರ್ದೇಶಕ ಜಯಪ್ಪ, ರವಿಕುಮಾರ್ ಸೂರಗೊಂಡನಕೊಪ್ಪ ಸೇರಿದಂತೆ ಹಲವರು ಉಪಸ್ಥಿತರಿದ್ದರು.