ದಾವಣಗೆರೆ ನಗರದ ಯಾವುದಾದರೂ ಪ್ರಮುಖ ವೃತ್ತಕ್ಕೆ ಶರಣ ಮಡಿವಾಳ ಮಾಚಿದೇವ ಹೆಸರಿಡುವಂತೆ ಒತ್ತಾಯಿಸಿ ಮಡಿವಾಳ ಮಾಚಿದೇವ ಅಭಿವೃದ್ಧಿ ಸೇವಾ ಸಮಿತಿ ಪದಾಧಿಕಾರಿಗಳು, ದಸಂಸ ಮುಖಂಡ ಮಂಜುನಾಥ್ ಕುಂದವಾಡ ನೇತೃತ್ವದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ವಿವಿಧ ಕಾರ್ಯಕ್ರಮಗಳ ನಿಮಿತ್ತ ಸೋಮವಾರ ನಗರಕ್ಕಾಗಮಿಸಿದ್ದ ವೇಳೆ ಡಿ ಎಸ್ ಎಸ್ ಮುಖಂಡ ಮಂಜುನಾಥ್ ಕುಂದವಾಡ ನೇತೃತ್ವದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಬೇಡಿಕೆಗಳುಳ್ಳ ಮನವಿ ಪತ್ರವನ್ನು ಸಲ್ಲಿಸುವ ಮೂಲಕ 12ನೇ ಶತಮಾನದ ವೈಚಾರಿಕ ಶರಣರಲ್ಲಿ ಬಸವಣ್ಣನವರ ನೆರಳಿನಂತೆ ಇರುತ್ತಿದ್ದ ಮಾಚಿದೇವರ ಹೆಸರನ್ನು ಇಡಬೇಕು ಎಂದು ಒತ್ತಾಯಿಸಿದರು.

12ನೇ ಶತಮಾನದ ಶರಣರ ಅಗ್ರ ಗಣ್ಯ ಬಳಗದಲ್ಲಿ ಶರಣ ಮಡಿವಾಳ ಮಾಚಿದೇವರ ಹೆಸರು ಪ್ರಕಾಶಮಾನವಾಗಿ ಕಂಗೊಳಿಸುತ್ತದೆ. ಅಣ್ಣ ಬಸವಣ್ಣನವರ ವೈಚಾರಿಕತೆಗೆ ಮಾರು ಹೋಗಿ ಕಾಯಕ ಸಿದ್ಧಾಂತದ ಮೌಲ್ಯವನ್ನು ಹೆಚ್ಚಿಸಿದ ಶರಣ ಮಡಿವಾಳ ಮಾಚಿದೇವರು ಶರಣರ ಬಟ್ಟೆಗಳನ್ನು ಮಡಿ ಮಾಡುವ ಮೂಲಕ ಸಮಾಜದ ಮೈಲಿಗೆಯನ್ನು ತೊಡೆದು ಹಾಕಿದ ದಿಟ್ಟ ವಚನಕಾರರಾಗಿದ್ದಾರೆ.
ಕಲ್ಯಾಣ ಕ್ರಾಂತಿಯಲ್ಲಿ ವಚನ ಸಾಹಿತ್ಯವನ್ನು ಸಂರಕ್ಷಿಸಿದ ಮಾಚಿದೇವರ ಕೊಡುಗೆ ಅನುಪಮ ಮತ್ತು ಚಿರಸ್ಮರಣೀಯ. ಹಾಗಾಗಿ ದಾವಣಗೆರೆ ನಗರದ ಯಾವುದಾದರೂ ಪ್ರಮುಖ ವೃತ್ತಕ್ಕೆ ಶ್ರೀ ಮಡಿವಾಳ ಮಾಚಿದೇವ ವೃತ್ತ ಎಂದು ನಾಮಕರಣ ಮಾಡುವಂತೆ ಮನವಿ ಮಾಡಲಾಯಿತು.
ಈ ಸುದ್ದಿ ಓದಿದ್ದೀರಾ? ದಾವಣಗೆರೆ | ಮುಖ್ಯಮಂತ್ರಿ ಸಿದ್ದರಾಮಯ್ಯ ಕಾರಿಗೆ ಅಡ್ಡ ಮಲಗಿ ಘೇರಾವ್ ಹಾಕಿದ ರೈತರು; ಅಹವಾಲು ಸಲ್ಲಿಸುವ ವೇಳೆ ಘಟನೆ
ಈ ಸಂದರ್ಭದಲ್ಲಿ ಮುಖಂಡರಾದ ನವೀನ್ ಕುಂದುವಾಡ, ಲಿಂಗರಾಜ್, ಎಂ. ದಿವಾಕರ, ಎಂ. ಗಂಗಾಧರ, ಹನುಮಂತಪ್ಪ, ನಿಂಗಪ್ಪ ಸೇರಿದಂತೆ ಸಮಾಜದ ಮುಖಂಡರು ಹಾಜರಿದ್ದರು.