ಸಂಯುಕ್ತ ಹೋರಾಟ ಕರ್ನಾಟಕದ ನೇತೃತ್ವದಲ್ಲಿ ದೇವನಹಳ್ಳಿಯಲ್ಲಿ ಶಾಂತಿಯುತವಾಗಿ ನಡೆಯುತ್ತಿದ್ದ ಬಲವಂತದ ಭೂ ಸ್ವಾಧೀನ ವಿರೋಧಿ ಹೋರಾಟದಲ್ಲಿ ರೈತರು, ನಾಯಕರನ್ನು, ಹೋರಾಟಗಾರರನ್ನು ಪೊಲೀಸರು ದೌರ್ಜನ್ಯದಿಂದ ಬಂಧಿಸಿರುವ ಕ್ರಮವನ್ನು ಖಂಡಿಸಿ ಸಂಯುಕ್ತ ಹೋರಾಟ ಕರ್ನಾಟಕ (SKM) ದಾವಣಗೆರೆ ಜಿಲ್ಲಾ ಸಮಿತಿ ನಗರದ ಜಯದೇವ ವೃತ್ತದಲ್ಲಿ ಪ್ರತಿಭಟನೆ ನಡೆಸಿತು.
ಈ ವೇಳೆ ಮಾತನಾಡಿದ ಕಾರ್ಮಿಕ ಮುಖಂಡ, ಸಿಪಿಐ ಜಿಲ್ಲಾ ಕಾರ್ಯದರ್ಶಿ ಆವರಗರೆ ಚಂದ್ರು “ಕಳೆದ 1,180 ದಿನಗಳಿಂದಲೂ 13 ಹಳ್ಳಿಗಳ ರೈತರು ತಮ್ಮ 1,770 ಎಕರೆ ಫಲವತ್ತಾದ ಭೂಮಿಯನ್ನು ರಾಜ್ಯ ಸರ್ಕಾರವು ಕೈಗಾರಿಕಾ ಅಭಿವೃದ್ಧಿಯ ಹೆಸರಿನಲ್ಲಿ ಸ್ವಾಧೀನ ಪಡಿಸಿಕೊಳ್ಳಲು ಯತ್ನಿಸುತ್ತಿರುವದರ ವಿರುದ್ಧ ಈ ಭಾಗದ ರೈತರು ಹೋರಾಡುತ್ತಿದ್ದಾರೆ. ಈ ಭೂಮಿಯ ಮೇಲೆ ಅವಲಂಬಿತರಾಗಿ ಯಥೇಚ್ಛವಾದ ಹಾಲು ಉತ್ಪಾದನೆ, ಹೈನುಗಾರಿಕೆ ಹಾಗೂ ಹಣ್ಣು ಮತ್ತು ತರಕಾರಿಗಳನ್ನು ಬೆಳೆಯುತ್ತಿದ್ದಾರೆ. ಸಮೃದ್ಧವಾಗಿರುವ ಈ ಭೂಮಿಯ ಮೇಲೆ ಈಗ ಭೂಗಳ್ಳರ ಕರಿನೆರಳು ಬಿದ್ದಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.
ಎಐಟಿಯುಸಿ, ಸಿಪಿಐ ಮುಖಂಡರಾದ ಆವರಗೆರೆ ಉಮೇಶ್ ಮಾತನಾಡಿ “ರೈತರ ಮನಸ್ಸನ್ನು ಒಲಿಸಲು ರಾಜ್ಯ ಸರ್ಕಾರವು ಕೈಗಾರಿಕಾ ಅಭಿವೃದ್ಧಿ ಹೆಸರಿನಲ್ಲಿ ರೈತರೊಂದಿಗೆ ಮೂರು ಸುತ್ತಿನ ಸಭೆಯನ್ನು ನಡೆಸಿ ನಿನ್ನೆ ಅಂತಿಮವಾಗಿ ತನ್ನ ನಿರ್ಧಾರವನ್ನು ಪ್ರಕಟಿಸಿದೆ. ರೈತರ ಜೀವನದೊಂದಿಗೆ ಚೆಲ್ಲಾಟವಾಡುವ ಈ ನಿರ್ಧಾರವು ಸಂಪೂರ್ಣವಾಗಿ ರೈತ ವಿರೋಧಿಯಾಗಿದೆ. ಹಾಗೂ ಸರ್ಕಾರವು ಯಾರ ಪರವಾಗಿ ಕೆಲಸ ಮಾಡುತ್ತಿದೆ ಎನ್ನುವ ಪ್ರಶ್ನೆ ಉದ್ಭವಿಸುತ್ತದೆ” ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಮುಖಂಡ ಮಧುತೊಗಲೇರಿ ಮಾತನಾಡಿ “ಒಂದು ಸಮಯದಲ್ಲಿ ರಾಜ್ಯದಲ್ಲಿ ಬಿಜೆಪಿ ಸರ್ಕಾರವು ಆಡಳಿತದಲ್ಲಿದ್ದಾಗ ಕೇಂದ್ರ ಬಿಜೆಪಿ ಸರ್ಕಾರವು ಜಾರಿಗೊಳಿಸಿದ್ದ ಭೂ ಸುಧಾರಣಾ ನೀತಿಯನ್ನು ಇಂದು ಅಧಿಕಾರದಲ್ಲಿದ್ದ ಕಾಂಗ್ರೆಸ್ ಪಕ್ಷವು ವಿರೋಧಿಸಿ ‘ರೈತರೊಂದಿಗೆ ನಾವಿದ್ದೇವೆ, ಈ ನೀತಿಯನ್ನು ಹಿಮ್ಮೆಟ್ಟಿಸುತ್ತೇವೆ’ ಎಂದು ಹೇಳಿ ಈಗ ಇದೇ ನೀತಿಯನ್ನು ತಾವು ಅಧಿಕಾರಕ್ಕೆ ಬಂದಮೇಲೆ ಜಾರಿಗೊಳಿಸುತ್ತಿರುವುದು ರೈತರ ಬೆನ್ನಿಗೆ ಚೂರಿ ಹಾಕಿದಂತಿದೆ” ಎಂದು ಕಿಡಿಕಾರಿದರು
ಜನಶಕ್ತಿ ಮುಖಂಡ ಸತೀಶ್ ಅರವಿಂದ್ ಮಾತನಾಡಿ “ರೈತರ ಒಪ್ಪಿಗೆ ಇಲ್ಲದೆ ಭೂಮಿ ಪಡೆಯುವಂತಿಲ್ಲ ಎನ್ನುವ ಕಾನೂನಿದ್ದರೂ ಸಹ ಒಂದು ಕಡೆ ದೌರ್ಜನ್ಯದಿಂದ, ಇನ್ನೊಂದು ಕಡೆ ಭೂಮಿಯ ಕಾನೂನುಗಳನ್ನು ತಮಗೆ ಬೇಕಾದ ರೀತಿಯಲ್ಲಿ ಬದಲಿಸಿ ಸ್ವಾಧೀನ ಪಡಿಸಿಕೊಳ್ಳಲು ಯತ್ನಿಸುತ್ತಿರುವ ರಾಜ್ಯ ಸರ್ಕಾರವು ರಾಜ್ಯದ ರೈತರಿಗೆ ಮಾಡಿರುವ ಮಹಾ ದ್ರೋಹ ಇದಾಗಿದೆ” ಎಂದು ಆಕ್ಷೇಪ ವ್ಯಕ್ತಪಡಿಸಿದರು.
ರೈತ ಮುಖಂಡ ಬುಳ್ಳಾಪುರದ ಹನುಮಂತಪ್ಪ ಮಾತನಾಡಿ “ರೈತರನ್ನು ಬೀದಿಗೆ ತಳ್ಳಲಿರುವ ಈ ಸ್ವಾಧೀನ ನಿರ್ಧಾರವು ರದ್ದಾಗಿ ರೈತರ ಭೂಮಿ ರೈತರಿಗೆ ಬರುವವರೆಗೂ ಹೋರಾಟ ನಿಲ್ಲಿಸುವುದಿಲ್ಲ, ಏನೇ ಬಂದರೂ ಎದುರಿಸುತ್ತೇವೆ” ಎನ್ನುವ ರೈತರ ಹೋರಾಟದ ಸ್ಪೂರ್ತಿಯು ಇಡೀ ನಾಡಿನ ಜನತೆಯ ಹೃದಯವನ್ನು ತಟ್ಟುತ್ತಿದೆ. ಈ ಸಂದರ್ಭದಲ್ಲಿ ಸಂಯುಕ್ತ ಹೋರಾಟ ಕರ್ನಾಟಕ ದಾವಣಗೆರೆ ಸಮಿತಿ (SKM) ಸಹ ರೈತರ ಗೆಲುವಿನವರೆಗೂ ಹೋರಾಟದೊಂದಿಗೆ ರೈತರೊಂದಿಗೆ ನಿಲ್ಲುತ್ತದೆ ಎಂದು ಭರವಸೆ, ಬೆಂಬಲ ಘೋಷಿಸಿದರು.
“ಭೂಮಿಗಾಗಿ, ಜೀವನಕ್ಕಾಗಿ ಹೋರಾಡುತ್ತಿರುವ ರೈತರ ಜನತಾಂತ್ರಿಕ ಹಕ್ಕನ್ನು ಪೊಲೀಸ್ ದೌರ್ಜನ್ಯದ ಮೂಲಕ ದಮನ ಮಾಡುವ ಹೀನ ಯತ್ನವನ್ನು ಕೈಬಿಟ್ಟು, ಬಂಧಿಸಿರುವ ಎಲ್ಲಾ ನಾಯಕರನ್ನು ಬೇಷರತ್ತಾಗಿ ಕೂಡಲೇ ಬಿಡುಗಡೆಗೊಳಿಸಬೇಕೆಂದು ಹಾಗೂ ಭೂ ಸ್ವಾದೀನ ಪ್ರಕ್ರಿಯೆಯನ್ನು ಕೈ ಬಿಟ್ಟು ಕೂಡಲೇ ರೈತರ ಭೂಮಿಯನ್ನು ರೈತರಿಗೆ ನೀಡಬೇಕು” ಎಂದು ಸಂಯುಕ್ತ ಹೋರಾಟ ಕರ್ನಾಟಕ ದಾವಣಗೆರೆ ಜಿಲ್ಲಾ ಸಮಿತಿಯ ಮುಖಂಡರು ಒಕ್ಕೊರಲಿನಿಂದ ಸರ್ಕಾರವನ್ನು ಒತ್ತಾಯಿಸಿದರು.
ಈ ಸುದ್ದಿ ಓದಿದ್ದೀರಾ? ಚಿತ್ರದುರ್ಗ | ಕುಡಿಯುವ ನೀರಿನ ಯೋಜನೆಗೆ ಅಡ್ಡಿಪಡಿಸಿ ರಾಜಕೀಯ ಮಾಡುವುದು ಬೇಡ; ಜಿಲ್ಲಾ ನೀರಾವರಿ ಅನುಷ್ಠಾನ ಹೋರಾಟ ಸಮಿತಿ
ಪ್ರತಿಭಟನೆಯಲ್ಲಿ ರೈತ, ಕಾರ್ಮಿಕ ಮತ್ತು ಸಂಯುಕ್ತ ಹೋರಾಟ ಕರ್ನಾಟಕ ಮುಖಂಡರಾದ ಮರುಳಸಿದ್ದಯ್ಯ, ಪವಿತ್ರ ಅರವಿಂದ್, ಶ್ರೀನಿವಾಸ್, ಆನಂದ್ ರಾಜು , ಸಂತೋಷ್ ನಾಯಕ್, ಆಪ್ ಮುಖಂಡ ಆದಿಲ್ ಖಾನ್, ರಾಮಾಂಜನೇಯ, ಸೇರಿದಂತೆ ಹಲವು ಮುಖಂಡರು ಭಾಗವಹಿಸಿದ್ದರು.