ಸ್ಥಳೀಯ ನಿವಾಸಿಗಳಿಗೆ ಅನಾರೋಗ್ಯ ಉಂಟುಮಾಡುವ ದಾವಣಗೆರೆ ನಗರದ 9 ನೇ ವಾರ್ಡಿನ ಭಾಷಾನಗರದಲ್ಲಿರುವ ರೋಷ್ಟರ್ ಮಷಿನ್, ಅವಲಕ್ಕಿ ಮಿಲ್, ಮಂಡಕ್ಕಿ ಭಟ್ಟಿಗಳನ್ನು ಸ್ಥಳಾಂತರಿಸಬೇಕು. ಇವುಗಳಿಂದ ಬರುವ ಸಣ್ಣ ಸಣ್ಣ ಧೂಳು, ಹೊಗೆ ಇತರ ತ್ಯಾಜ್ಯಗಳಿಂದಾಗಿ ಶ್ವಾಸಕೋಶದ ಆರೋಗ್ಯ ಸಮಸ್ಯೆಗೆ ಜನ ಗುರಿಯಾಗುತ್ತಿದ್ದು, ಮಂಡಕ್ಕಿ ಭಟ್ಟಿ ಸುತ್ತ ಮುತ್ತಲಿನ ಪರಿಸರದಲ್ಲಿ ಜನರಿಗೆ ಆರೋಗ್ಯಕರ ವಾತಾವರಣ ಕಲ್ಪಿಸಬೇಕು ಎಂದು ಆಗ್ರಹಿಸಿ ಸ್ಲಂ ಜನಾಂದೋಲನ ಕರ್ನಾಟಕ ಸಂಘಟನೆ ಮುಖಂಡರು, ಕಾರ್ಯಕರ್ತರು ಹಾಗೂ ಸ್ಥಳೀಯ ನಿವಾಸಿಗಳು ದಾವಣಗೆರೆ ಜಿಲ್ಲಾಡಳಿತ ಭವನದ ಬಳಿ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿ ಒತ್ತಾಯಿಸಿದರು.

ಇದೇ ವೇಳೆ ಮಾತನಾಡಿದ ಸಂಘಟನೆಯ ರಾಜ್ಯ ಗೌರವಾಧ್ಯಕ್ಷ ಆನಂದ್ ಎಸ್ ಎಲ್ “ಇಲ್ಲಿನ ಹಲವಾರು ಜನ ಅಸ್ತಮಾ, ಉಸಿರಾಟ, ಶ್ವಾಸಕೋಶ ಸಂಬಂಧಿ ಕಾಯಿಲೆಗೆ ಅಲ್ಲಿನ ನಿವಾಸಿಗಳು ತುತ್ತಾಗಿದ್ದಾರೆ. ಇಲ್ಲಿನ ಸುತ್ತಮುತ್ತಲಿನ ನಿವಾಸಿಗಳು, ಪಾದಚಾರಿಗಳು ವಾಹನ ಸವಾರರು, ಚಾಲಕರಿಗೆ ಭಟ್ಟಿ, ಮಿಲ್‌ಗಳಿಂದ ಹೊರ ಬರುವ ಧೂಳು, ಬತ್ತದ ಸಿಪ್ಪೆ ಕಣ್ಣುಗಳಲ್ಲಿ ಸೇರಿಕೊಂಡು ತೊಂದರೆ ಅನುಭವಿಸುತ್ತಿದ್ದಾರೆ. ಅನೇಕರು ಕಣ್ಣಿನ ಸಮಸ್ಯೆಗೆ ತುತ್ತಾಗಿದ್ದಾರೆ. ಮಿಲ್‌ನಿಂದ ಬರುವ ತ್ಯಾಜ್ಯ, ಭತ್ತದ ಧೂಳು, ತೌಡುನಿಂದಾಗಿ ಚರಂಡಿ, ಒಳಚರಂಡಿ ಕಟ್ಟಿಕೊಂಡು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಇಡೀ ಸಮಸ್ಯೆಗಳಿಗೆ ಮಂಡಕ್ಕಿ ಭಟ್ಟಿಗಳು, ಅವಲಕ್ಕಿ ಮಿಲ್‌ಗಳು, ರೋಸ್ಟರ್ ಯಂತ್ರಗಳೇ ಕಾರಣವಾಗಿವೆ” ಎಂದು ಆರೋಪಿಸಿದರು.

“ಚರಂಡಿ, ತ್ಯಾಜ್ಯ ನೀರು ಕುಡಿಯುವ ನೀರಿನ ಪೈಪ್‌ನೊಳಗೆ ಸೇರಿಸಿಕೊಂಡು ಸರಬರಾಜು ಆಗುತ್ತಿದೆ. ಇದೇ ನೀರನ್ನೇ ಅಡುಗೆಗೆ, ದಿನನಿತ್ಯಕ್ಕೆ ಬಳಸುತ್ತಿದ್ದಾರೆ. ಇದರಿಂದಾಗಿ ಕಲುಷಿತ ನೀರು, ಆಹಾರ ಸೇವಿಸಿ. ಜನರು ಆಸ್ಪತ್ರೆಗೆ ಅಲೆದಾಡುವಂತಾಗಿದೆ. ಮಕ್ಕಳು, ಮಹಿಳೆಯರು, ಹಿರಿಯ ನಾಗರೀಕರು ಹೀಗೆ ಜನ ಬದುಕುವುದು ದುಸ್ತರವಾಗಿದೆ”ಎಂದು ಕಿಡಿಕಾರಿದರು.

ಸಂಘಟನೆಯ ಪ್ರಧಾನ ಕಾರ್ಯದರ್ಶಿ ರೇಣುಕಾ ಯಲ್ಲಮ್ಮ ಮಾತನಾಡಿ, “ಈ ಹಿಂದೆ ಸ್ಥಳಾಂತರಕ್ಕೆ ಮನವಿ ಸಲ್ಲಿಸಿದ ವೇಳೆ ಜಿಲ್ಲಾಡಳಿತ ಮಂಡಕ್ಕಿ, ಅವಲಕ್ಕಿ ಭಟ್ಟಿ, ಮಿಲ್‌ಗಳಿಗೆ ಪರ್ಯಾಯ ಜಾಗ ಕಲ್ಪಿಸುವುದಾಗಿ 2021ರಲ್ಲಿ ಜಿಲ್ಲಾಡಳಿತ ಮತ್ತು ಶಾಸಕರು ಭರವಸೆ ನೀಡಿದ್ದರು. ಇದಕ್ಕೆ ಪ್ರತಿಯಾಗಿ ಹೊಸದಾಗಿ ಮತ್ತಷ್ಟು ಮಿಲ್ ಗಳನ್ನು ಹಾಕುತ್ತಿದ್ದಾರೆ. ದಿನೇ ದಿನೇ ಸಮಸ್ಯೆಗಳು ಹೆಚ್ಚುತ್ತಿವೆ. ಇಲ್ಲಿನ ಸುತ್ತಮುತ್ತಲಿನ ನಿವಾಸಿಗಳು ದಲಿತರು, ಅಲ್ಪಸಂಖ್ಯಾತರೇ ಆಗಿದ್ದು, ಎಲ್ಲರೂ ಶ್ರಮಿಕರು, ಕೂಲಿಯವರಾಗಿದ್ದು, ದುಡಿದ ಹಣವನ್ನು ಅನಾರೋಗ್ಯ, ಚಿಕಿತ್ಸೆಗೆ ಖರ್ಚು ಮಾಡಿ ಉಪವಾಸ ಮಲಗುವ ಸ್ಥಿತಿ ಇಲ್ಲಿನ ಬಡವರ್ಗದ ಜನರದ್ದಾಗಿದೆ.
ಇಲ್ಲಿ ಜನರ ಆರೋಗ್ಯ ಕಾಪಾಡಲು ಜಿಲ್ಲಾಧಿಕಾರಿಗಳು ಕ್ರಮ ಕೈಗೊಳ್ಳಬೇಕು” ಎಂದು ಒತ್ತಾಯಿಸಿದರು.
ಈ ಸುದ್ದಿ ಓದಿದ್ದೀರಾ? ಚಿತ್ರದುರ್ಗ | ಚಳ್ಳಕೆರೆ, ಗೋಸಿಕೆರೆ ಸೇರಿ ಜಿಲ್ಲೆಯಲ್ಲಿ ಹಿಂದೂ ಮುಸ್ಲಿಮರ ಭಾವೈಕ್ಯತಾ ಹಬ್ಬ ಮೊಹರಂ ಆಚರಣೆಯ ಸಡಗರ
ಈ ವೇಳೆ ಸಂಘಟನೆಯ ಮುಖಂಡರಾದ ರಾಮಚಂದ್ರ ಅಕ್ಕಿ, ಮಂಜುಳಾ, ಎನ್.ದಾದಾಪೀರ, ಬೀಬೀಜಾನ್, ಬಾಲರಾಜ, ಎಂ.ಮಹಬೂಬ್ ಶಾಹೀನಾಬಾನು, ತಸೀಮಾ ಬಾನು, ಅಸ್ಮಾ ಬಾನು, ಗುಲ್ದಾರ್ ಬಾನು, ನಗೀನಾ, ಸಿರೋಜ್ ಖಾನ್, ಜಾಕೀರಾ ಬೀ, ಜಬೀ, ತಸ್ಲಿಮಾ, ಜ್ಯೋತಿ, ರಹತ್, ಶಾಹೀನಾ, ಗೌಸಿಯಾ ತಾಜ್, ಮುಬೀನಾ ಬೀ, ಶಭೀನಾ, ಸನಾವುಲ್ಲಾ, ಜಾಕೀರ್, ಸೈಯದ್ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.