ದಾವಣಗೆರೆ ನಗರದ ಹದಡಿ ರಸ್ತೆಯಲ್ಲಿರುವ ಸೋಮೇಶ್ವರ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಮುಂಭಾಗದ ಇನ್ಫಿನಿಟಿ ಕ್ಲಬ್ ನಲ್ಲಿ ವ್ಯಕ್ತಿಯೊಬ್ಬರನ್ನು ಮಾರಕಾಸ್ತ್ರಗಳಿಂದ ದಾಳಿ ನಡೆಸಿ ಬರ್ಬರವಾಗಿ ಕೊಲೆಗೈದ ಘಟನೆ ಸೋಮವಾರ ಸಂಜೆ 5.30ರ ಸುಮಾರಿಗೆ ನೆಡೆದಿದ್ದು, ಹಲ್ಲೆಗೊಳಗಾದ ವ್ಯಕ್ತಿ ಸ್ಥಳದಲ್ಲೇ ಮೃತಪಟ್ಟಿದ್ದಾನೆ ಎಂದು ಮೂಲಗಳು ತಿಳಿಸಿವೆ.
ಹಲ್ಲೆಗೊಳಗಾಗಿ ಕೊಲೆಯಾದ ವ್ಯಕ್ತಿಯನ್ನು ಸಂತೋಷ್ ಅಲಿಯಾಸ್ ಕಣುಮ ಎಂದು ಗುರುತಿಸಲಾಗಿದ್ದು, ಭೀಕರವಾಗಿ ಹತ್ಯೆಯಾಗಿರುವ ರೌಡಿಶೀಟರ್ ಕಣುಮ ಊಟ ಮುಗಿಸಿಕೊಂಡು ಇನ್ಫಿನಿಟಿ ಕ್ಲಬ್ ಗೆ ಬಂದಿದ್ದಾಗ ಆಟೋದಲ್ಲಿ ಬಂದ ಐದರಿಂದ ಆರು ಜನ ದುಷ್ಕರ್ಮಿಗಳು ಮಚ್ಚಿನಿಂದ ಕೊಚ್ಚಿ ಬರ್ಬರವಾಗಿ ಹತ್ಯೆಗೈದಿದ್ದಾರೆ ಎಂದು ಹೇಳಲಾಗಿದೆ.

ಕೊಲೆ ಪ್ರಕರಣಗಳು, ರಿಯಲ್ ಎಸ್ಟೇಟ್, ದೌರ್ಜನ್ಯ, ವಂಚನೆ ಸೇರಿದಂತೆ ಅಪರಾಧ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದ ಆರೋಪಗಳು ರೌಡಿ ಶೀಟರ್ ಕಣುಮ ಆಲಿಯಾಸ್ ಸಂತೋಷ್ ಮೇಲಿದ್ದವು ಎನ್ನುವ ಮಾಹಿತಿಯನ್ನು ಪೊಲೀಸರು ತಿಳಿಸಿದ್ದಾರೆ.
ರೌಡಿಶೀಟರ್ ಬುಳ್‌ನಾಗನ ಹತ್ಯೆಯಲ್ಲಿ ಸಂತೋಷ್ ಆಲಿಯಾಸ್ ಕಣುಮಾನ ಹೆಸರು ಪ್ರಮುಖವಾಗಿ ಕೇಳಿ ಬಂದಿತ್ತು. ಬುಳ್ ನಾಗನನ್ನು ಹತ್ಯೆ ಮಾಡಿದ್ದ ಆರೋಪದಲ್ಲಿ ಸಂತೋಷ್ ಆಲಿಯಾಸ್ ಕಣುಮಾ ಬಂಧನಕ್ಕೊಳಗಾಗಿದ್ದ. ಹಂತಕರು ಕೊಲೆಗೆದ್ದಿರುವ ಉದ್ದೇಶ ಇನ್ನೂ ಸ್ಪಷ್ಟವಾಗಿಲ್ಲದಿದ್ದರೂ ಹಳೆಯ ವೈಷಮ್ಯಕ್ಕೆ ದಾಳಿ ನಡೆಸಿ ಕೊಲೆ ಮಾಡಿರಬಹುದು. ಈ ಹಿನ್ನೆಲೆಯಲ್ಲಿ ಹತ್ಯೆ ನಡೆದಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ದಾವಣಗೆರೆ | ಸಂವಿಧಾನ ಶಿಲ್ಪಿ ಅಂಬೇಡ್ಕರ್ ಜಯಂತಿ ಹಾಗೂ ದಲಿತ ಸಂಘರ್ಷ ಸಮಿತಿಯ ಗ್ರಾಮ ಶಾಖೆ ಉದ್ಘಾಟನೆ.
ಎಸ್ಪಿ ಉಮಾ ಪ್ರಶಾಂತ್, ಹೆಚ್ಚುವರಿ ಎಸ್ಪಿ ವಿಜಯಕುಮಾರ್ ಸಂತೋಷ್ ಸೇರಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಘಟನೆ ಕುರಿತು ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ರೌಡಿಶೀಟರ್ ಹತ್ಯೆ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ದಾವಣಗೆರೆ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್, “ರೌಡಿಶೀಟರ್ ಸಂತೋಷ್ ಆಲಿಯಾಸ್ ಕಣುಮನನ್ನು ದುಷ್ಕರ್ಮಿಗಳು ಬರ್ಬರವಾಗಿ ಹತ್ಯೆ ಮಾಡಿದ್ದಾರೆ. ಇವರ ಮೇಲೆ ಸಾಕಷ್ಟು ಅಪರಾಧ, ಹಲ್ಲೆ ಹಾಗೂ ಕೊಲೆ ಪ್ರಕರಣಗಳು ದಾಖಲಾಗಿದ್ದವು. ಹಳೆಯ ವೈಷಮ್ಯದಿಂದ ಈ ಘಟನೆ ನಡೆದಿರಬಹುದು ಎಂದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ. ಈಗಾಗಲೇ ನಾವು ಡಿವೈಎಸ್ಪಿ ನೇತೃತ್ವದಲ್ಲಿ ದುಷ್ಕರ್ಮಿಗಳ ಬಂಧನಕ್ಕೆ ತಂಡ ರಚಿಸಲಾಗಿದೆ. ಈ ಘಟನೆಯಲ್ಲಿ ಯಾರು ಭಾಗಿಯಾಗಿದ್ದಾರೆ ಅವರ ಪತ್ತೆಹಚ್ಚಲು ಪೊಲೀಸ್
ತಂಡ ಕಾರ್ಯೋನ್ಮುಖವಾಗಿದೆ” ಎಂದು ತಿಳಿಸಿದರು