“ಕಾಶ್ಮೀರದಲ್ಲಿ ಮಂಗಳವಾರ ಪ್ರವಾಸಿಗರ ಮೇಲೆ ನಡೆದಂತಹ ಕೃತ್ಯವನ್ನು ಖಂಡಿಸಿ, ಕೂಡಲೇ ಉಗ್ರರ ವಿರುದ್ಧ ಕಾರ್ಯಾಚರಣೆಗೆ ಒತ್ತಾಯಿಸಿ, ದಾವಣಗೆರೆ ಜಿಲ್ಲೆ ಚನ್ನಗಿರಿ ತಾಲ್ಲೂಕಿನ ಯುವ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಚನ್ನಗಿರಿ ನಗರದ ಗಾಂಧಿ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು. ಈ ವೇಳೆ ಮಾನವ ಸರಪಳಿ ರಚಿಸಿ ಮೇಣದ ದೀಪ ಬೆಳಗಿಸಿ ದಾಳಿಯಲ್ಲಿ ಮೃತರಾದ ಜೀವಗಳಿಗೆ ಗೌರವ ಸೂಚಿಸಲಾಯಿತು.

ಈ ವೇಳೆ ಮಾತನಾಡಿದ ಮುಖಂಡರು “ಪ್ರವಾಸಕ್ಕೆ ತೆರಳಿದ್ದ ನಮ್ಮ ಕರ್ನಾಟಕ ರಾಜ್ಯದ ಮತ್ತು ಇತರ ಪ್ರವಾಸಿಗರ ಮೇಲೆ ಉಗ್ರ ಕೃತ್ಯ ಎಸಗಿ ಕೊಲ್ಲಲಾಗಿದೆ. ಈ ಕೃತ್ಯ ಎಸಗಿದ ಉಗ್ರರನ್ನು ರಾಜ್ಯ ಮತ್ತು ಕೇಂದ್ರ ಸರ್ಕಾರವು ಕೂಡಲೇ ಪತ್ತೆ ಹಚ್ಚಿ ಬಂಧಿಸಬೇಕು. ಅಂದು ಪುಲ್ವಾಮಾ ದಾಳಿ ಆಗಿತ್ತು . ಇಂದು ಅದೇ ಪ್ರದೇಶದಲ್ಲಿ ಪಹಲ್ಗಾಮ್ ದಾಳಿ ನಡೆಸಿದ್ದಾರೆ. ಈ ಭದ್ರತಾ ವೈಫಲ್ಯಕ್ಕೆ ಯಾರು ಕಾರಣ. ಕೂಡಲೇ ಭದ್ರತೆ ಹೆಚ್ಚಿಸಬೇಕು” ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ಸುದ್ದಿ ಓದಿದ್ದೀರಾ? ದಾವಣಗೆರೆ | ಪಹಲ್‌ಗಾಮ್‌ನಲ್ಲಿ ಪ್ರವಾಸಿಗರ ಮೇಲೆ ಭಯೋತ್ಪಾದಕ ದಾಳಿಗೆ ಎಸ್‌ಯುಸಿಐ(ಸಿ) ಖಂಡನೆ,
ಈ ವೇಳೆ ಚನ್ನಗಿರಿ ತಾಲ್ಲೂಕಿನ ಯೂತ್ ಕಾಂಗ್ರೆಸ್ ಅಧ್ಯಕ್ಷ ಅನೀಸ್ ಮತ್ತು ಪುರಸಭೆ ಸದಸ್ಯ ಗೌಸ್ ಪೀರ್ ತನ್ವೀರ್, ಇಮ್ರಾನ್, ಮಧು, ಜಾವಿದ್, ಜೀಲಾನಿ ಹಾಗೂ ಎ ಐ ಟಿ ಯು ಸಿ ಹಾಗು ವಿವಿಧ ಸಂಘಟನೆಯ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಭಾಗವಹಿಸಿದ್ದರು.