ಸಿಪಿಐ ಪಕ್ಷ ಮತ್ತು ಎಐಟಿಯುಸಿ ಸಂಘಟನೆಯ ದಾವಣಗೆರೆ ಜಿಲ್ಲೆ ಹರಿಹರ ತಾಲೂಕು ಸಮಿತಿಗಳ ನೇತೃತ್ವದಲ್ಲಿ ಹರಿಹರದ ಸಿಪಿಐ ಕಚೇರಿಯ ಎಂ ಸಿ ನರಸಿಂಹನ್ ಭವನದಲ್ಲಿ 139 ನೇ ಮೇ ಕಾರ್ಮಿಕ ದಿನಾಚರಣೆಯನ್ನು ಆಚರಿಸಲಾಯಿತು. ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಜಿಲ್ಲಾ ಕಾರ್ಯದರ್ಶಿ ಆವರಗೆರೆ ಚಂದ್ರು,”ಸಮಾಜವಾದಿ ಸಮಾಜ ನಿರ್ಮಾಣ ನಮ್ಮ ಗುರಿಯಾಗಿರುವುದರಿಂದ ಕಾರ್ಮಿಕರಲ್ಲಿ ವರ್ಗ ಜಾಗೃತಿ ಮೂಡಿಸುವುದರ ಮೂಲಕ ಸಮಾಜವಾದಿ ಸಮಾಜ ನಿರ್ಮಿಸಲು ಮುಂದಾಗಬೇಕು. ಸಮಸಮಾಜದ ನಿರ್ಮಾಣ ನಮ್ಮ ಗುರಿಯಾಗಿದೆ. ಆ ಮೂಲಕ ಎಲ್ಲರಿಗೂ ಸಮಾನತೆ ದೊರಕಿಸಲು ಹೋರಾಡಬೇಕಿದೆ” ಎಂದು ಕಾರ್ಮಿಕರಿಗೆ ಕರೆ ನೀಡಿದರು.

“ಬ್ರಿಟಿಷರ ಆಳ್ವಿಕೆಯಲ್ಲಿ ಪಡೆದ ಕಾರ್ಮಿಕರ 44 ಕಾನೂನುಗಳನ್ನು ಬಿಜೆಪಿಯ ಕೇಂದ್ರ ಸರ್ಕಾರ ನಾಲ್ಕು ಕೋಡ್ ಗಳನ್ನಾಗಿ ಬದಲಾಯಿಸಿ ಜಾರಿಗೆ ತರಲು ತುದಿಗಾಲ ಮೇಲೆ ನಿಂತಿದೆ. ಇದನ್ನು ಹಿಮ್ಮೆಟ್ಟಿಸಲು ಜುಲೈ 9 ರಂದು ನಡೆಯುವ ಕಾರ್ಮಿಕರ ಅಖಿಲ ಭಾರತ ಸಾರ್ವತ್ರಿಕ ಮುಷ್ಕರದಲ್ಲಿ ಭಾಗವಹಿಸಿ ಆಳುವ ಕೇಂದ್ರ ಸರ್ಕಾರಕ್ಕೆ ಎಚ್ಚರಿಕೆ ನೀಡಬೇಕು” ಎಂದು ತಿಳಿಸಿದರು.
ಈ ಸುದ್ದಿ ಓದಿದ್ದೀರಾ? ಮಳೆ ಬಂದರೆ ಸೋರುವ, ಕುಸಿಯುವಂತಿರುವ ಶಾಲಾ ಕಟ್ಟಡ, ಮಕ್ಕಳನ್ನು ದಾಖಲಿಸಲು ಪೋಷಕರ ಆತಂಕ.
ಕಾರ್ಯಕ್ರಮದಲ್ಲಿ ಹಿರಿಯ ಕಾರ್ಮಿಕ ಮುಖಂಡರಾದ ಪರಮೇಶ್ವರಪ್ಪ, ನರೇಗಾ ರಂಗನಾಥ್, ವೀರಣ್ಣ ಅಂಗಡಿ, ಸಿಪಿಐ ತಾಲೂಕು ಕಾರ್ಯದರ್ಶಿ ಟಿ ಹೆಚ್ ನಾಗರಾಜ್, ಮಹಿಳಾ ಸಂಘಟನೆ ಮುಖಂಡರಾದ ಸರೋಜಾ, ಎಐಟಿಯುಸಿ ಮುಖಂಡರಾದ ಚಂದ್ರಪ್ಪ, ಜಾಫರ್ ಸಾಧಿಕ್, ಕೃಷ್ಣಮೂರ್ತಿ ಬಿಲ್ಲವ, ಸುರೇಶ್, ಶೇಖರಪ್ಪ, ಪಂಪಾಪತಿ ಟ್ರಸ್ಟ್ ನ ಖಜಾಂಚಿ ಜಿ ಎಲ್ಲಪ್ಪ, ಎಐಟಿಯುಸಿ ಮುಖಂಡರುಗಳಾದ ಹೆಚ್ ಸಿ ಮೈದೂರು , ಬಸಪ್ಪ ರೆಡ್ಡಿ, ಗಂಗಾಧರ ಕೊಟಗಿ, ಪರಮೇಶ್ವರಪ್ಪ ಎಂಎನ್, ಶಿವರಾಜ್, ನಾರಾಯಣ ಜಾಡರ್, ಪ್ರದೀಪ ನಲವಾಗಲು, ಕುಮಾರ ನಾಯಕ ಸೇರಿದಂತೆ ಇತರರು ಉಪಸ್ಥಿತರಿದ್ದರು.