ಕರ್ನಾಟಕದ ಮಾಜಿ ಮುಖ್ಯಮಂತ್ರಿ ಜೆ ಎಚ್ ಪಟೇಲರು ಓದಿದ ದಾವಣಗೆರೆ ತಾಲೂಕಿನ ಕಾರಿಗನೂರಿನ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಹೋರಾಟದ ಕೂಗು ಮೊಳಗಿದ್ದು, ಶೌಚಾಲಯ ವ್ಯವಸ್ಥೆ ಸರಿ ಇಲ್ಲದೇ, ಶಿಥಿಲಗೊಂಡಿರುವ ಕಟ್ಟಡದ ಹೊಸ ನಿರ್ಮಾಣಕ್ಕೆ ಒತ್ತಾಯಿಸಿ ಶಾಲೆಗೆ ಹೊಸ ಕಟ್ಟಡ ಒದಗಿಸುವಂತೆ ಆಗ್ರಹಿಸಿ ಇಂದು ಎಐಡಿಎಸ್‌ಓ ಹಾಗೂ ಎಸ್ ಡಿ ಎಂ ಸಿ ನೇತೃತ್ವದಲ್ಲಿ ಶಾಲೆಯ ವಿದ್ಯಾರ್ಥಿಗಳು, ಪೋಷಕರು ಹಾಗೂ ಊರಿನ ಗ್ರಾಮಸ್ಥರು ಶಾಲೆಯ ಆವರಣದಲ್ಲಿ ಪ್ರತಿಭಟನೆ ನಡೆಸಿದರು.
ಶಾಲೆ ಕುರಿತು ಮಾತನಾಡಿದ ರೈತ ಹೋರಾಟಗಾರ ತೇಜಸ್ವಿ ವಿ. ಪಟೇಲ್ ಮಾತನಾಡಿ, “60 ವರ್ಷಗಳು ತುಂಬಿರುವ ಶಾಲೆ ಇಂದು ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದೆ. ಜೋರಾಗಿ ಮಳೆ ಬಂದರೆ ಎಡೆಬಿಡದೆ ಸುರಿಯುವ ಮೇಲ್ಚಾವಣಿ, ಗೋಡೆಗಳು ನೀರು ಹಿಡಿಯುತ್ತಿದ್ದು, ಯಾವಾಗ ಯಾವ ಹಂಚು ಯಾರ ಮೇಲೆ ಬೀಳುತ್ತೋ ಎಂಬ ಭಯದಲ್ಲೇ ಓದುತ್ತಿರುವ ಮಕ್ಕಳು ಓದುತ್ತಿದ್ದಾರೆ. ಶಿಕ್ಷಕರು ಭಯದಲ್ಲೇ ಪಾಠ ಮಾಡುತ್ತಿದ್ದಾರೆ. ಶಾಲೆಗೆ ಸರಿಯಾದ ಶೌಚಾಲಯದ ವ್ಯವಸ್ಥೆ ಇಲ್ಲ, ಕುಡಿಯುವ ನೀರಿನ ವ್ಯವಸ್ಥೆ ಇಲ್ಲ. ಹೊಸದಾಗಿ ನಿರ್ಮಾಣವಾಗಿರುವ ಕಟ್ಟಡದ ಕಾಮಗಾರಿ ಇನ್ನೂ ಪೂರ್ಣಗೊಂಡಿಲ್ಲ” ಎಂದು ಅಸಮಾಧಾನ ವ್ಯಕ್ತಪಡಿಸಿದರು.
“ಈ ಶಾಲೆಯಲ್ಲಿ ಪ್ರತಿ ವರ್ಷ ಇನ್ನೂರಕ್ಕೂ ಹೆಚ್ಚು ಮಕ್ಕಳು ದಾಖಲಾಗುತ್ತಿದ್ದರು. ಆದರೆ ಈ ಬಾರಿ ಸೋರುತ್ತಿರುವ ಕಟ್ಟಡ ಗಮನಿಸಿದ ಪೋಷಕರು ಶಾಲೆಗೆ ಸೇರಿಸಲು ಹಿಂಜರಿಯುತ್ತಿದ್ದಾರೆ. ಹಾಗಾಗಿ ಶಾಲೆಯ ದಾಖಲಾತಿಯು ಸಹ ಕಡಿಮೆಯಾಗಿದೆ. ಇಂತಹ ಸೋರುತ್ತಿರುವ ಕಟ್ಟಡದಲ್ಲೂ ಸಹ 170 ಬಡ ಮಕ್ಕಳು ಕಲಿಯುತ್ತಿದ್ದಾರೆ. ರಾಜ್ಯದ ಕೆಲವೆಡೆ ಮಕ್ಕಳ ಮೇಲೆ ಮೇಲ್ಚಾವಣಿ ಬಿದ್ದು ಪ್ರಾಣ ಕಳೆಕೊಂಡಿರುವ ಉದಾಹರಣೆಯಿದೆ. ಕೂಡಲೇ ಸರ್ಕಾರ, ಶಿಕ್ಷಣ ಇಲಾಖೆ ನೂತನ ಕಟ್ಟಡಕ್ಕೆ ಕ್ರಮ ಕೈಗೊಳ್ಳಬೇಕು” ಎಂದು ಆಗ್ರಹಿಸಿದರು

ಎಐಡಿಎಸ್ಓ ಜಿಲ್ಲಾಧ್ಯಕ್ಷೆ ಪೂಜಾ ನಂದಿಹಳ್ಳಿ ಮಾತನಾಡಿ “ಇದೇ ಶಾಲೆಯ ಒಬ್ಬ ವಿದ್ಯಾರ್ಥಿನಿಯೋರ್ವರ ಮೇಲೆ ಹಂಚು ಬಿದ್ದಿರುವ ಅವಘಡ ಸಂಭವಿಸಿದೆ. ಹೆಂಚು ಬಿದ್ದು ಹಣೆ ಮತ್ತು ತುಟಿಯಮೇಲೆ ಗಾಯದ ಗುರುತು ಹಾಗೆಯೇ ಉಳಿದಿದೆ. ಕಟ್ಟಡ ಬಿದ್ದು ನಮ್ಮ ಮಕ್ಕಳ ಸಾವಾದಾಗ ಬಂದು ಪರಿಹಾರ ಕೊಡುವ ಬದಲಿಗೆ, ಮುನ್ನೆಚ್ಚರಿಕೆ ವಹಿಸಿ ಸರ್ಕಾರ ಶಾಲೆಗೆ ಹೊಸ ಕಟ್ಟಡ ನಿರ್ಮಿಸಬೇಕು ಎಂದು ಒತ್ತಾಯಿಸಿದರು.
ಶಾಲೆಗೆ ತುರ್ತಾಗಿ ಅನುದಾನ ಬಿಡುಗಡೆ ಮಾಡಬೇಕು. ಈ ನಿಟ್ಟಿನಲ್ಲಿ ಅಧಿಕೃತ ಆದೇಶ ಬರುವವರೆಗೂ ಹೋರಾಟ ನಿಲ್ಲಿಸುವುದಿಲ್ಲ ಮತ್ತು ಅಲ್ಲಿಯವರೆಗೂ ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸುವುದಿಲ್ಲ ಎಂಬುದು ಗ್ರಾಮಸ್ಥರ ಆಗ್ರಹವಾಗಿದ್ದು, ಪೋಷಕರು
ಸರ್ಕಾರಕ್ಕೆ ಎಚ್ಚರಿಕೆಯನ್ನು ನೀಡಿದ್ದಾರೆ.
ಮಾಹಿತಿ ತಿಳಿದು ಪ್ರತಿಭಟನಾ ಸ್ಥಳಕ್ಕೆ ಬಂದ ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕರಾದ ಕೊಟ್ರೇಶ್ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಜಯಪ್ಪ ಅವರು ಮನವಿ ಪತ್ರ ಸ್ವೀಕರಿಸಿ, ಶೀಘ್ರವಾಗಿ ಕಟ್ಟಡದ ದುರಸ್ತಿ ಕೈಗೊಳ್ಳಲಾಗುವುದು ಮತ್ತು ಮೇಲಾಧಿಕಾರಿಗಳೊಂದಿಗೆ ಚರ್ಚಿಸಿ ಮೂರು ತಿಂಗಳೊಳಗಾಗಿ ಹೊಸ ಕಟ್ಟಡಕ್ಕೆ ಅನುದಾನ ಜಾರಿಗೊಳಿಸುವುದಾಗಿ ಆಶ್ವಾಸನೆ ನೀಡಿದರು.
ಈ ಸುದ್ದಿ ಓದಿದ್ದೀರಾ? ದಾವಣಗೆರೆ | ಅಧಿಕಾರ ಅನುಭವಿಸಿ ಜಿಡ್ಡುಗಟ್ಟಿರುವ ಹಳಬರ ಬದಲು ಹೊಸಬರಿಗೆ ಸಚಿವ ಸ್ಥಾನ ನೀಡಿ;ಹೈಕಮಾಂಡ್‌ಗೆ ಶಾಸಕ ಬಸವರಾಜು ಶಿವಗಂಗಾ ಸಲಹೆ
ಹೋರಾಟದಲ್ಲಿ ಕಬ್ಬು ಬೆಳೆಗಾರರ ಸಂಘದ ತೇಜಸ್ವಿ ಪಟೇಲ್, ಎಐಡಿಎಸ್ಓನ ಜಿಲ್ಲಾಧ್ಯಕ್ಷರಾದ ಪೂಜಾ ನಂದಿಹಳ್ಳಿ, ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಪ್ರಿಯಾಂಕ ಮಂಜುನಾಥ್, ಎ ಸ್ ಡಿ ಎಂ ಸಿ ಅಧ್ಯಕ್ಷರಾದ ಬಸಣ್ಣ, ಗ್ರಾ ಪಂ. ಸದಸ್ಯರಾದ ಚೇತನ್ ಕುಮಾರ್, ಶರತ್ ಜಿ ಎ, ಸಂದೀಪ್ ನಾಯಕ್, ಉಮಾಬಾಯಿ, ಪೋಷಕರಾದ ನಾಗರಾಜ್, ಹನುಮಂತ, ಲತಾ, ಮಮತ ಎಐಡಿಎಸ್ಓನ ಕಾರ್ಯಕರ್ತರಾದ ಗಂಗಾಧರ, ಶ್ರೀನಿವಾಸ, ಸುಮನ್ ಟಿ ಎಸ್, ಹಾಗೂ ಕಾರಿಗನೂರಿನ ಗ್ರಾಮಸ್ಥರು ಸೇರಿದಂತೆ ನೂರಾರು ವಿದ್ಯಾರ್ಥಿಗಳು, ಪೋಷಕರು, ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು.