ಜೀವನದಲ್ಲಿ ಬೇಸರಗೊಂಡು ತುಂಗಭದ್ರಾ ನದಿಯಲ್ಲಿ ಆತ್ಮಹತ್ಯೆ ಮಾಡಿಕೊಳ್ಳಲು ಹೋಗಿದ್ದ ವಯೋವೃದ್ಧೆಯನ್ನು ರಕ್ಷಿಸಿದ ದಾವಣಗೆರೆ ಜಿಲ್ಲೆ ಹರಿಹರ ಪೊಲೀಸರು, ಉಪಚರಿಸಿ ವಿಳಾಸ ಪತ್ತೆ ಮಾಡಿ ಸುರಕ್ಷಿತವಾಗಿ ಮಗನೊಂದಿಗೆ ಕಳುಹಿಸಿದ ಮಾನವೀಯ ಘಟನೆ ಹರಿಹರದಲ್ಲಿ ನಡೆದಿದೆ.
ಹರಿಹರ ತಾಲೂಕಿನ 87 ವರ್ಷದ ವಯೋವೃದ್ಧೆಯೊಬ್ಬರು ಮನೆಯಲ್ಲಿ ಬೇಸರಗೊಂಡು ನಗರದ ಪಕ್ಕದಲ್ಲಿ ಹರಿಯುವ ತುಂಗಭದ್ರಾ ನದಿ ಹತ್ತಿರ ಬಂದು ನದಿಯಲ್ಲಿ ಬಿದ್ದು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಹೊಳೆ ಹತ್ತಿರದಲ್ಲೇ ಇದ್ದ ಅಫ್ತಾಬ್ ಎನ್ನುವವರು ಇದನ್ನು ಗಮನಿಸಿ, ಕೂಡಲೇ ಹರಿಹರ ನಗರ ಠಾಣೆಯ ಸಿಬ್ಬಂದಿ ಎಂ ಕೋಟೇಶ್ವರಗೆ ತಿಳಿಸಿದ್ದಾರೆ.

ಈ ಸುದ್ದಿ ಓದಿದ್ದೀರಾ? ದಾವಣಗೆರೆ | ಬೆಸಗರಹಳ್ಳಿ ರಾಮಣ್ಣ ಪ್ರತಿಷ್ಠಾನದಿಂದ ಪ್ರೊ.ಬಿ.ವಿ.ವೀರಭದ್ರಪ್ಪ ವೈಚಾರಿಕ ಸಾಹಿತ್ಯ ಸಂವಾದ
ಕೂಡಲೇ ಎಂ ಕೋಟೇಶ್ವರ ತಕ್ಷಣ ನದಿ ಹತ್ತಿರ ಹೋಗಿ ಸದರಿ ವಯೋವೃದ್ದೆಯನ್ನು ಸ್ಥಳೀಯರೊಂದಿಗೆ ರಕ್ಷಣೆ ಮಾಡಿದ್ದು, ನಂತರ ಸಹಾಯವಾಣಿ 112 ಗೆ ಕರೆ ಮಾಡಿ, 112 ಕರ್ತವ್ಯ ಅಧಿಕಾರಿಗಳಾದ ಗುತ್ಯಪ್ಪ ಹಾಗೂ ಚಾಲಕ ನಾಗಪ್ಪ ರವರ ಸಹಾಯದಿಂದ ಸದರಿ ನೊಂದ ವಯೋವೃದ್ಧೆಯನ್ನು ರಕ್ಷಿಸಿ, ಠಾಣೆಗೆ ಕರೆತಂದಿದ್ದಾರೆ. ನಂತರ ವಿಳಾಸ ಪತ್ತೆ ಮಾಡಿ ನಂತರ ವೃದ್ದೆಯ ಮಗ ಶಿವಕುಮಾರ್ ಜೊತೆ ಸುರಕ್ಷಿತವಾಗಿ ಮನೆಗೆ ಕಳಿಸಿ ಕೊಟ್ಟಿದ್ದಾರೆ. ಹರಿಹರ ನಗರದ ಪೊಲೀಸರ ಕಾರ್ಯವನ್ನು ಪೊಲೀಸ್ ಅಧೀಕ್ಷಕಿ ಉಮಾ ಪ್ರಶಾಂತ್ ರವರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.