“ಪ್ರಾಮಾಣಿಕತೆ ಎಂಬುದು ಪದರುಗೊಂಡ ಕಾಲ ಇದಾಗಿದೆ. ಭ್ರಷ್ಟಗೊಂಡ ಬೌದ್ಧಿಕತೆಯ ಕಾಲ. ವಿಕೃತವಾಗಿ ವಿಭಜಿತಗೊಂಡ ಬೌದ್ಧಿಕ ವಲಯ ಇಂದು ನಮ್ಮಲ್ಲಿದೆ, ಜಾತಿ, ಧರ್ಮ, ಪಕ್ಷಗಳಾಗಿ ವಿಭಜಿತವಾಗಿದೆ. ಇದು ಭಾರತಕ್ಕೆ ಏನು ದಾರಿ ತೋರಿಸಬಲ್ಲದು” ಎಂದು ದಾವಣಗೆರೆಯಲ್ಲಿ ನಾಡೋಜ ಬರಗೂರು ರಾಮಚಂದ್ರಪ್ಪ ಪ್ರಶ್ನಿಸಿದರು.

ಸಂವಿಧಾನ ಸಂರಕ್ಷಕರ ಪಡೆ ಕಟ್ಟುವ ದಾವಣಗೆರೆಯ ಸಂವಿಧಾನ ಸಂರಕ್ಷಕರ ಸಮಾವೇಶದ ಉದ್ಘಾಟನಾ ಭಾಷಣದಲ್ಲಿ ಮಾತನಾಡಿದ ಅವರು, “ದೇಶದಲ್ಲಿ ಭಯೋತ್ಪಾದನೆ, ದ್ವೇಷೋತ್ಪಾದನೆ ಇದೆ. ಜೊತೆಗೆ ಪ್ರಪಂಚದಲ್ಲಿ ಯುದ್ದೋತ್ಪಾದನೆ ಇವೆ. ಆದರೆ ನಮಗೆ ಇದಾವುದೂ ಬೇಡ. ಧಾರ್ಮಿಕ ಸ್ವಾತಂತ್ರ್ಯ, ಅಭಿವ್ಯಕ್ತಿ ಸ್ವಾತಂತ್ರ್ಯ,ಜನರ ಪ್ರಜಾಪ್ರಭುತ್ವ ಬೇಕಾಗಿದೆ” ಎಂದು ಪ್ರತಿಪಾದಿಸಿದರು.
“ಜಾತಿ ಜಾತಿವಾದವಾಗಬಾರದು, ಧರ್ಮ ಧಾರ್ಮಿಕ ಮೂಲಭೂತವಾಗಬಾರದು, ಪಕ್ಷವು ಎಲ್ಲವನ್ನೂ ನಿಯಂತ್ರಿಸುವ ಸರ್ವಾಧಿಕಾರಿ ಆಗಬಾರದು. ಸಾವಿತ್ರಿಬಾಯಿ ಫುಲೆ ಶಾಲೆಯಲ್ಲಿ ಹೆಣ್ಣುಮಕ್ಕಳಿಗೆ ಪಾಠ ಮಾಡುತ್ತಿದ್ದರೆ, ಫಾತಿಮಾ ಶೇಖ್ ಅವರು ಮನೆಮನೆಗೆ ಹೋಗಿ ಮಕ್ಕಳನ್ನು ಶಾಲೆಗೆ ಕರೆತರುತ್ತಾರೆ. ಅಶ್ವಾಖುಲ್ಲಾ ಖಾನ್ ಮತ್ತು ರಾಂಪ್ರಸಾದ್ ಬಿಸ್ಮಿಲ್ ಇಬ್ಬರೂ ಸ್ವಾತಂತ್ರ್ಯ ಹೋರಾಟಗಾರರು, ಒಂದೇ ದಿನ ಬ್ರಿಟೀಷರಿಂದ ಗಲ್ಲಿಗೇರಿಸಲ್ಪಟ್ಟರು, ಹೀಗೆ ಭಾರತದ ಪ್ರಜಾತಂತ್ರವೇ ಸೌಹಾರ್ದತೆಯುಳ್ಳ ಸ್ವಾತಂತ್ರ್ಯ ಸಂಘರ್ಷದ ಮೂಲಕ ರೂಪುಗೊಂಡದ್ದು. ಆಗ ಜಾತಿ, ಧರ್ಮ ಮೂಲಭೂತವಾಗಿ ರೂಪುಗೊಂಡಿರಲಿಲ್ಲ” ಎಂದು ಅಭಿಪ್ರಾಯಪಟ್ಟರು.
“ಹಿಂದೂ ಧರ್ಮವನ್ನು ಒಪ್ಪುವ ಎಸ್ ರಾಧಾಕೃಷ್ಟನ್ ಅವರು, ಹಿಂದೂ ಧರ್ಮವನ್ನು ಒಪ್ಪದ ಡಾ. ಅಂಬೇಡ್ಕರ್ ಅವರು ಇಬ್ಬರೂ ಎಲ್ಲರಿಗೂ ಧಾರ್ಮಿಕ ಸ್ವಾತಂತ್ರ್ಯ ಇರಬೇಕು, ಅಭಿವ್ಯಕ್ತಿ ಸ್ವಾತಂತ್ರ್ಯ ಇರಬೇಕು, ಪ್ರಭುತ್ವ ಧರ್ಮನಿರಪೇಕ್ಷವಾಗಿರಬೇಕು ಎಂದು ಪ್ರತಿಪಾದಿಸಿದರು. ಇದು ಭಾರತದ ಪ್ರಜಾತಂತ್ರದ ಸೌಂದರ್ಯ, ಸಂವಿಧಾನದ ಆಶಯ. ಇದನ್ನು ಉಳಿಸಿ ತಿಳಿಸಬೇಕಾಗಿದೆ” ಎಂದು ಅಭಿಪ್ರಾಯಪಟ್ಟರು.
“ಸಂವಿಧಾನ ಅಶ್ಪ್ರಶ್ಯತೆಯನ್ನು ನಿಷೇಧಿಸಿದೆ, ಆದರೆ ಸಮಾಜದಲ್ಲಿ ಇನ್ನೂ ಅದು ಇದೆ. ಒಂದು ಕೋಟಿ 87 ಲಕ್ಷ ಜನರು ಇನ್ನೂ ಕೈಯ್ಯಲ್ಲಿ ಮಲ ಎತ್ತುತ್ತಿದ್ದಾರೆ ಎಂದರೆ ಇದು ಅಮಾನವೀಯ. ಇದು ಹೋಗಲಾಡಿಸಲು ನಮ್ಮ ಮನಸ್ಸಿನ ಮಲಿನತೆ ಹೋಗಬೇಕು” ಎಂದು ಕರೆ ನೀಡಿದರು.

“ಪಕ್ಷದಲ್ಲಿ ಇದ್ದು ಪಕ್ಷವನ್ನು ಮೀರಿ ನೋಡುವ ರಾಜಕೀಯ ನಾಯಕತ್ವ ಬೇಕು. ಧರ್ಮದಲ್ಲಿ ಇದ್ದು ಧಾರ್ಮಿಕತೆಯನ್ನು ಮೀರಿದ ಧಾರ್ಮಿಕ ನಾಯಕತ್ವ ಈ ದೇಶಕ್ಕೆ ಬರಬೇಕು. ಸಮಾಜವಾದ ಎನ್ನುವ ಪದ ಸಂವಿಧಾನ ಪೀಠಿಕೆಯಲ್ಲಿ ಮೊದಲು ಇರಲಿಲ್ಲ. ಆದರೆ, ಅಂಬೇಡ್ಕರ್ ಅವರು ಸಂವಿಧಾನದ ಬಗ್ಗೆ ಮಾತನಾಡುತ್ತಾ, ಸಂವಿಧಾನದ ಒಳಗೆ ಸಮಾಜವಾದ ಇದೆ ಎಂದು ಹೇಳಿದ್ದರು. ಸಂವಿಧಾನವನ್ನು ಪೂಜೆ ಮಾಡುವವರಿಗೆ ಅವರ ಬಗ್ಗೆ ಗೌರವ ಇದೆಯೆ ಎಂಬುವುದನ್ನು ನಾವು ಪ್ರಶ್ನೆ ಮಾಡಬೇಕಾಗಿದೆ” ಎಂದು ಪ್ರಶ್ನಿಸಿದರು.
ಈ ಸುದ್ದಿ ಓದಿದ್ದೀರಾ? ದಾವಣಗೆರೆಯಲ್ಲಿ ಸಂವಿಧಾನ ರಕ್ಷಣೆಗಾಗಿ ಸಂರಕ್ಷಕರ ಸಮಾವೇಶ, ಸಂವಿಧಾನ ರಕ್ಷಣೆಗೆ ಕಾರ್ಯಪಡೆ ಬದ್ದ.
ದಲಿತ ಸಂಘರ್ಷ ಸಮಿತಿ ನಾಯಕರಾದ ಗುರುಪ್ರಸಾದ್ ಕೆರಗೋಡು ಮಾತನಾಡಿ, “ಎಲ್ಲಾ ಸಂಘಟನೆಗಳು ಇಲ್ಲಿ ಒಟ್ಟು ಗೂಡಿವೆ. ಆದರೆ ಎಲ್ಲರೂ ಬಿಡಿ ಬಿಡಿಯಾಗಿ ಹೋರಾಟ ಮಾಡುತ್ತಿದ್ದೇವೆ. ಇದು ಒಂಟಿ ಕಾಲಿನ ನಡಿಗೆಯಾಗುತ್ತಿದೆ. ಇಂತಹ ಬಿಡಿ ಬಿಡಿಯಾದ ಹೊರಾಟದಿಂದ ಬದಲಾವಣೆ ಸಾಧ್ಯವಿಲ್ಲ. ಆದ್ದರಿಂದ ಇಂತಹ ಎಲ್ಲಾ ಹೋರಾಟವನ್ನು ಒಂದುಗೂಡಿಸುವ ವೇದಿಕೆ ಇದಾಗಿದೆ” ಎಂದು ಅಭಿಪ್ರಾಯಪಟ್ಟರು

ಕಾರ್ಯಕ್ರಮದಲ್ಲಿ ಗುಜರಾತ್ ಶಾಸಕ ಜಿಗ್ನೇಶ್ ಮೇವಾನಿ, ದಸಂಸ ಹಿರಿಯ ನಾಯಕ ಎನ್.ವೆಂಕಟೇಶ್, ಅರ್ಥ ಶಾಸ್ತ್ರಜ್ಞ ಪರಕಾಲ ಪ್ರಭಾಕರ್, ಹಿರಿಯ ಸಾಹಿತಿ ಮಾಜಿ ಸಚಿವೆ ಬಿ.ಟಿ.ಲಲಿತಾ ನಾಯಕ್, ದಸಂಸ ಹೋರಾಟಗಾರ ಗುರುಪ್ರಸಾದ್ ಕೆರಗೋಡು, ಎದ್ದೇಳು ಕರ್ನಾಟಕ ಸೆಂಟ್ರಲ್ ವರ್ಕಿಂಗ್ ಕಮಿಟಿ ಸದಸ್ಯೆ ತಾರಾ ರಾವ್, ಜಮಾತ್-ಎ-ಇಸ್ಲಾಮಿ-ಹಿಂದ್ ರಾಜ್ಯ ಕಾರ್ಯದರ್ಶಿ ಮೊಹಮ್ಮದ್ ಯೂಸೂಫ್ ಖನ್ನಿ, ಸೇಂಟ್ ಜೋಸೇಫ್ ಕಾನೂನು ವಿಶ್ವವಿದ್ಯಾನಿಲಯ ನಿರ್ದೇಶಕ ಫಾದರ್ ಜೆರಾಲ್ಡ್ ಡಿಸೋಜಾ, ಅನೀಸ್ ಪಾಷಾ ವಕೀಲ, ದಸಂಸ ಮುಖಂಡ ಮಂಜುನಾಥ್ ಕುಂದುವಾಡ, ನೆರಳು ಬೀಡಿ ಕಾರ್ಮಿಕರ ಯೂನಿಯನ್ ಕಾರ್ಯದರ್ಶಿ ಕರಿಬಸಪ್ಪ, ಕರ್ನಾಟಕ ಜನಶಕ್ತಿ ರಾಜ್ಯ ಸಮಿತಿ ಸದಸ್ಯ ಸತೀಶ್ ಅರವಿಂದ್, ಎಪಿಸಿಆರ್ ಜಿಲ್ಲಾ ಕಾರ್ಯದರ್ಶಿ ನಿಝಾಮುದ್ಧೀನ್ ಸೇರಿದಂತೆ ಹಲವರು ಭಾಗವಹಿಸಿದ್ದರು.