ರಾಜ್ಯಾದ್ಯಂತ ಮಳೆ ಉತ್ತಮವಾಗಿ ಆಗಿದ್ದು, ಹೊಲಗಳನ್ನು ಹಸನುಗೊಳಿಸಿ ರೈತರು ಬಿತ್ತನೆಗೆ ಅಣಿಗೊಳಿಸಿರುವ ಸಂದರ್ಭದಲ್ಲಿ ಮೆಕ್ಕೆಜೋಳದ ಬಿತ್ತನೆ ಬೀಜ ಶೇ.25-40 ರಷ್ಟು ದರ ಏರಿಕೆಯಾಗಿರುವುದು, ರಸಗೊಬ್ಬರದ ಕೃತಕ ಅಭಾವ ಸೃಷ್ಟಿ ರೈತರಲ್ಲಿ ಆತಂಕ ಮೂಡಿಸಿದೆ. ಈ ಹಿನ್ನೆಲೆಯಲ್ಲಿ ದರ ಹೆಚ್ಚಳ ವಿರೋಧಿಸಿ ಮತ್ತು ರಸಗೊಬ್ಬರ ಕೃತಕ ಅಭಾವ ಖಂಡಿಸಿ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಹುಚ್ಚವ್ವನಹಳ್ಳಿ ಮಂಜುನಾಥ್ ಬಣದಿಂದ ದಾವಣಗೆರೆ ಜಿಲ್ಲಾ ಕೃಷಿ ಇಲಾಖೆ ಜಂಟಿ ನಿರ್ದೇಶಕರಿಗೆ ಮನವಿ ಸಲ್ಲಿಸಿ ಬೆಲೆ ಇಳಿಕೆಗೆ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಲಾಯಿತು.
ಈ ವೇಳೆ ಮಾತನಾಡಿದ ಮುಖಂಡ ಹುಚ್ಚವನಹಳ್ಳಿ ಮಂಜುನಾಥ್,”ಈಗಾಗಲೇ ಜಿಲ್ಲಾದ್ಯಂತ ಮುಂಗಾರು ಪೂರ್ವ ಮಳೆ ಉತ್ತಮವಾಗಿದ್ದು, ರೈತಾಪಿ ವರ್ಗ ಜಮೀನುಗಳನ್ನು ಹಸನು ಮಾಡಿಕೊಂಡು ಬಿತ್ತನೆಗಾಗಿ ಕಾಯುತ್ತಿದ್ದಾರೆ. ಇದರ ಮಧ್ಯೆ ಜಿಲ್ಲೆಯ ಪ್ರಮುಖ ಬೆಳೆಯಾದ ಮೆಕ್ಕೆಜೋಳ ಬಿತ್ತನೆ ಬೀಜ ಪ್ರತಿ ಪ್ಯಾಕೆಟ್ ದರ ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ 300 ರಿಂದ 500 ರೂಗೆ ಹೆಚ್ಚಳವಾಗಿದೆ. ಇದು ನಗರ ಪ್ರದೇಶಗಳಲ್ಲಿ ಹೆಚ್ಚಳವಾದ ದರವಾದರೆ, ಗ್ರಾಮೀಣ ಪ್ರದೇಶದಲ್ಲಿ 500 ರಿಂದ 1000 ರೂ ಹೆಚ್ಚಳವಾಗಿದೆ ಎಂಬ ಮಾತುಗಳು ಕೇಳಿಬರುತ್ತಿವೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.
“ಬಿತ್ತನೆ ರಸಗೊಬ್ಬರ ಡಿಎಪಿ ಕೊರತೆಯನ್ನು ಮಾರಾಟಗಾರರಿಂದ ಕೃತಕವಾಗಿ ಸೃಷ್ಟಿಸಲಾಗುತ್ತಿದೆ. ಈ ಮೂಲಕ ವರ್ತಕರು ರೈತರಿಂದ 3500 ರೂ ವರೆಗೂ ಪ್ರತಿ ಕ್ವಿಂಟಲ್ ಡಿಎಪಿ ಮಾರಾಟ ಮಾಡುತ್ತಿದ್ದಾರೆ. ಈಗಾಗಲೇ ದಾವಣಗೆರೆ ತಾಲೂಕಿನಾದ್ಯಂತ ಡಿಎಪಿ ಗೊಬ್ಬರದ ಕೃತಕ ಅಭಾವ ಸೃಷ್ಟಿಸಲಾಗಿದೆ” ಎಂದು ಮುಖಂಡರು ಸೇರಿದಂತೆ ರೈತರು ಆರೋಪಿಸಿದರು.

“ಕೂಡಲೇ ಇಲಾಖೆ ಬಿತ್ತನೆ ಬೀಜದ ದರ ಇಳಿಕೆ ಮಾಡಿ. ಕಳೆದ ವರ್ಷದ ದರದಲ್ಲಿಯೇ ಮಾರಾಟವಾಗುವಂತೆ ನೋಡಿಕೊಳ್ಳಬೇಕು ಮತ್ತು ಡಿಎಪಿ ಗೊಬ್ಬರ ಮುಕ್ತ ಮಾರುಕಟ್ಟೆಯಲ್ಲಿ ರೈತರಿಗೆ ಸರಳವಾಗಿ ದೊರೆಯುವಂತೆ ಮಾಡಬೇಕು, ಅದೂ ಸರ್ಕಾರ ನಿಗದಿಪಡಿಸಿದ ದರದಲ್ಲಿಯೇ ಮಾರಾಟವಾಗಬೇಕು, ಬಿತ್ತನೆ ಬೀಜ, ರಸಗೊಬ್ಬರಗಳನ್ನು ಅಧಿಕ ಬೆಲೆಗೆ ಮಾರಾಟ ಮಾಡುವ ಮತ್ತು ಕೃತಕ ಅಭಾವ ಸೃಷ್ಟಿಸುವ ಮಾರಾಟಗಾರರ ವಿರುದ್ಧ ಮೊಕದ್ದಮೆ ದಾಖಲಿಸಬೇಕು. ಇಲ್ಲವಾದಲ್ಲಿ ಸಂಘದಿಂದ ದೊಡ್ಡಮಟ್ಟದ ಪ್ರತಿಭಟನೆ ನಡೆಸಲಾಗುವುದು” ಎಂದು ಸಂಘದ ರಾಜ್ಯಾಧ್ಯಕ್ಷ ಹುಚ್ಚವ್ವನಹಳ್ಳಿ ಮಂಜುನಾಥ್ ಎಚ್ಚರಿಕೆ ನೀಡಿದರು.
“ಕಳೆದ ವರ್ಷ ಡಿಕಾಲ್ಬ್ ಕಂಪನಿಯ 1933 ಹೆಸರಿನ 4 ಕೆಜಿ ತೂಕದ ಮೆಕ್ಕಜೋಳದ ಪ್ಯಾಕೆಟ್ ದರ 1150 ರೂ ಇತ್ತು. ಈ ವರ್ಷ 1400 ರೂ ಆಗಿದ್ದು, 250 ರೂ ಹೆಚ್ಚಿಸಲಾಗಿದೆ. ಅದೇ ರೀತಿ ಇದೇ ಕಂಪನಿಯ 1978 ನಂಬರ್ ಪ್ಯಾಕೆಟ್ ಬೆಲೆ ಕಳೆದ ವರ್ಷ 1250 ರೂ ಇತ್ತು, ಈ ವರ್ಷ 1750 ರೂ ಆಗಿದ್ದು 500 ರೂ ಹೆಚ್ಚಿಸಲಾಗಿದೆ. 3501 ನಂಬರಿನ ಪಯನಿಯರ್ ಮೆಕ್ಕೆಜೋಳದ ಬೆಲೆ ಕಳೆದ ವರ್ಷ 1300 ರೂ ಇತ್ತು. ಈ ಬಾರಿ 1500 ರೂ ಆಗಿದ್ದು, 200 ರೂ ದರ ಹೆಚ್ಚಿಸಲಾಗಿದೆ. ಕಾವೇರಿ ಕಂಪನಿ ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ 250 ರೂ ಹೆಚ್ಚಿಸಿದೆ. ಈ ಮೂಲಕ ಬೀಜ ಉತ್ಪಾದನಾ ಕಂಪನಿ ಮತ್ತು ಮಾರಾಟಗಾರರು ರೈತರ ಮೇಲೆ ಪ್ರಹಾರ ಮಾಡಲು ಹೊರಟಿದ್ದಾರೆ” ಎಂದು ಆರೋಪಿಸಿದರು.
ಕೂಡಲೇ ಕಳೆದ ವರ್ಷದ ದರದಲ್ಲಿಯೇ ಮೆಕ್ಕೆಜೋಳದ ಬಿತ್ತನೆ ಬೀಜಗಳ ಮಾರಾಟ ನಡೆಯಬೇಕು ಹಾಗೂ ಡಿಎಪಿ ಗೊಬ್ಬರದ ಕೃತಕ ಅಭಾವ ಸೃಷ್ಟಿಸುವವರ ವಿರುದ್ಧ ಕಠಿಣ ಕಾನೂನು ಕ್ರಮಗಳನ್ನು ಕೈಗೊಳ್ಳಬೇಕೆಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.
ಮನವಿ ಸ್ವೀಕರಿಸಿದ ಜಂಟಿ ನಿರ್ದೇಶಕ ಶ್ರೀನಿವಾಸ್ ಚಿಂತಾಲ್ ಮಾತನಾಡಿ, “ಕೂಡಲೇ ವಿಚಕ್ಷಣ ದಳ ರಚನೆ ಮಾಡಿ ಕಾಳ ಸಂತೆಯಲ್ಲಿ ಗೊಬ್ಬರ ಮಾರಾಟಗಾರರು ಮತ್ತು ಹೆಚ್ಚಿನ ಬೆಲೆಗೆ ಬಿತ್ತನೆ ಬೀಜ ಮಾರಾಟ ಮಾಡುವವರ ವಿರುದ್ಧ ನಿಗಾವಹಿಸಲಾಗುವುದು. ಎಲ್ಲ ರೈತರಿಗೂ ಸಮರ್ಪಕವಾಗಿ ಗೊಬ್ಬರ ಮತ್ತು ಬೀಜ ಸಿಗುವ ವ್ಯವಸ್ಥೆಯನ್ನು ಮುಂದಿನ ಮೂರ್ನಾಲ್ಕು ದಿನಗಳಲ್ಲಿ ಮಾಡಲಾಗುವುದು” ಎಂದು ಭರವಸೆ ನೀಡಿದರು.
ಈ ಸುದ್ದಿ ಓದಿದ್ದೀರಾ? ದಾವಣಗೆರೆ | ಕಾರ್ಮಿಕ ವರ್ಗದ ಸಮಸ್ಯೆ ಪರಿಹರಿಸಿ; ಎಐಯುಟಿಯುಸಿ, ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘ.
ಈ ಸಂದರ್ಭದಲ್ಲಿ ಹೂವಿನಮಡು ನಾಗರಾಜ್, ಹುಚ್ಚವ್ವನಹಳ್ಳಿ ಪ್ರಕಾಶ್, ದಯಾನಂದ, ಗುಮ್ಮನೂರು ರುದ್ರೇಶ್, ಚಿನ್ನಸಮುದ್ರ ಸುರೇಶ್ ನಾಯ್ಕ, ದೇವನಾಯ್ಕ್, ಗಿರಿಯಾಪುರ ಗಂಗಾಧರ ಸ್ವಾಮಿ, ಹೊನ್ನಮರಡಿ ಶಿವಕುಮಾರ್, ಪಾಲನಾಯಕನ ಕೋಟೆ ಮಾರನಾಯ್ಕ, ಬೋರಗೊಂಡನಹಳ್ಳಿ ಕಲ್ಲೇಶ್, ಆಲೂರು ಪರಶುರಾಮ್, ಆನಗೋಡು ಭೀಮಣ್ಣ, ಕಬ್ಬೂರು ಪ್ರಸನ್ನ, ಮಲ್ಲಿಕಾರ್ಜುನ್, ನಾಗರಾಜ್, ಶಾಮನೂರು ನಾಗರಾಜ್, ಯರವನಾಗತಿಹಳ್ಳಿ ಅಣ್ಣಪ್ಪ, ಬಿ.ಆರ್.ಅಣ್ಣಪ್ಪ, ಬೋರಗೊಂಡನಹಳ್ಳಿ ಹಾಲೇಶ್ ಇತರರು ಉಪಸ್ಥಿತರಿದ್ದರು.